ಸಾಧುವಾಗಿ ವೇಷ ಮರೆಸಿಕೊಂಡಿದ್ದ 'ಮೃತ' ವ್ಯಕ್ತಿ 20 ವರ್ಷ ಬಳಿಕ ಸಿಬಿಐ ಬಲೆಗೆ!
ಹೈದರಾಬಾದ್: ಎರಡು ದಶಕಗಳ ಹಿಂದೆ 'ಮೃತ' ಎಂದು ನ್ಯಾಯಾಲಯ ಘೋಷಿಸಿದ್ದ ವಂಚಕನೊಬ್ಬನನ್ನು ಸಿಬಿಐ ಅಧಿಕಾರಿಗಳು ಭಾನುವಾರ ಬಂಧಿಸಿದ್ದಾರೆ. ಬ್ಯಾಂಕ್ ಗೆ 50 ಲಕ್ಷ ರೂಪಾಯಿ ವಂಚಿಸಿದ ಆರೋಪ ಎದುರಿಸುತ್ತಿದ್ದ ಈ ವ್ಯಕ್ತಿ ಹಲವು ವರ್ಷಗಳಿಂದ ನಾಪತ್ತೆಯಾಗಿದ್ದ ಹಿನ್ನೆಲೆಯಲ್ಲಿ ನ್ಯಾಯಾಲಯ ಈತನನ್ನು ಮೃತಪಟ್ಟಿದ್ದಾನೆ ಎಂದು ಘೋಷಿಸಿತ್ತು. ಆ ಬಳಿಕ ತಮಿಳುನಾಡಿನ ಗ್ರಾಮವೊಂದರಲ್ಲಿ ಸಾಧುವಿನ ವೇಷದಲ್ಲಿ ವಾಸಿಸುತ್ತಿದ್ದ ಈತನನ್ನು ಸುಧೀರ್ಘ ಕಾರ್ಯಾಚರಣೆ ಬಳಿಕ ಬಲೆಗೆ ಬೀಳಿಸುವಲ್ಲಿ ಸಿಬಿಐ ಯಶಸ್ವಿಯಾಗಿದೆ.
ದೇಶಾದ್ಯಂತ ತಲೆ ಮರೆಸಿಕೊಂಡು ಸುತ್ತಾಡಿರುವ ವಿ.ಚಲಪತಿ ರಾವ್ ಕೊನೆಗೂ ಸಿಕ್ಕಿಹಾಕಿಕೊಂಡಿದ್ದಾನೆ.
SBI ಚಂದೂಲಾಲ್ ಬರದಾರಿ ಶಾಖೆಯಲ್ಲಿ ಕಂಪ್ಯೂಟರ್ ಆಪರೇಟರ್ ಆಗಿದ್ದ ಚಲಪತಿ ರಾವ್ ವಿರುದ್ಧ 2002ರ ಮೇ 1ರಂದು ಸಿಬಿಐ ಪ್ರಕರಣ ದಾಖಲಿಸಿತ್ತು. ಬ್ಯಾಂಕ್ ಗೆ 50 ಲಕ್ಷ ರೂಪಾಯಿ ವಂಚನೆ ಮಾಡಿದ ಆರೋಪ ಹೊರಿಸಲಾಗಿತ್ತು. ಎಲೆಕ್ಟ್ರಾನಿಕ್ ಶಾಪ್ ಗಳಿಂದ ತಿರುಚಿತ ಕೊಟೇಶನ್ ಪಡೆದು ಮತ್ತು ನಕಲಿ ವೇತನ ಪ್ರಮಾಣಪತ್ರವನ್ನು ಸಲ್ಲಿಸಿ ತನ್ನ ಕುಟುಂಬ ಸದಸ್ಯರು ಹಾಗೂ ಸಹವರ್ತಿಗಳ ಹೆಸರಿನಲ್ಲಿ ಸಾಲ ಪಡೆದಿದ್ದ ಆರೋಪಿ ವಿರುದ್ಧ 2004ರ ಡಿಸೆಂಬರ್ ನಲ್ಲಿ ಸಿಬಿಐ ಎರಡು ಆರೋಪಪಟ್ಟಿ ಸಲ್ಲಿಸಿತ್ತು. ಆ ಬಳಿಕ ರಾವ್ ನಾಪತ್ತೆಯಾಗಿದ್ದ.
ಪ್ರಕರಣದಲ್ಲಿ ಸಹ ಆರೋಪಿಯಾಗಿದ್ದ ಆತನ ಪತ್ನಿ 2004ರ ಜುಲೈ 10ರಂದು ಕಾಮಟಿಪುರ ಠಾಣೆಯಲ್ಲಿ ದೂರು ದಾಖಲಿಸಿ, ಪತಿ ನಾಪತ್ತೆಯಾಗಿದ್ದಾರೆ ಎಂದು ಆಪಾದಿಸಿದ್ದರು. 2011ರಲ್ಲಿ ಸಿವಿಲ್ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿ, ಏಳು ವರ್ಷದಿಂದ ನಾಪತ್ತೆಯಾಗಿರುವ ಪತಿಯನ್ನು ಮೃತ ಎಂದು ಘೋಷಿಸುವಂತೆ ಕೋರಿದ್ದರು. ಇದನ್ನು ಮಾನ್ಯ ಮಾಡಿದ ನ್ಯಾಯಾಲಯ ಆತನನ್ನು ಮೃತ ಎಂದು ಘೋಷಿಸಿತು.
ಸಿಬಿಐ ಕಲೆ ಹಾಕಿದ ಮಾಹಿತಿ ಪ್ರಕಾರ, ಆರೋಪಿ ತಮಿಳುನಾಡಿನ ಸೇಲಂಗೆ ಪಲಾಯನ ಮಾಡಿ, 2007ರಲ್ಲಿ ಮತ್ತೊಬ್ಬ ಮಹಿಳೆಯನ್ನು ವಿವಾಹವಾಗಿ ಹೆಸರನ್ನು ಎಂ.ವಿನೀತ್ ಕುಮಾರ್ ಎಂದು ಬದಲಿಸಿಕೊಂಡಿದ್ದ. ಆ ಹೆಸರಿನಲ್ಲಿ ಆಧಾರ್ ಸಂಖ್ಯೆ ಪಡೆದಿದ್ದ. ಆರೋಪಿ ತನ್ನ ಮೊದಲ ಪತ್ನಿಯ ಮಗನ ಜತೆ ಸಂಪರ್ಕದಲ್ಲಿದ್ದಾನೆ ಎನ್ನುವ ಅಂಶವನ್ನು ಸಿಬಿಐ ಅಧಿಕಾರಿಗಳು ಆತನ ಎರಡನೇ ಪತ್ನಿಯ ಮೂಲಕ ತಿಳಿದುಕೊಂಡರು. 2014ರಲ್ಲಿ ಆತ ಯಾರಿಗೂ ಹೇಳದೇ ಸೇಲಂ ಬಿಟ್ಟು ಭೋಪಾಲ್ ಗೆ ಹೋದ. ಬಳಿಕ ಸಾಲ ವಸೂಲಾತಿ ಏಜೆಂಟ್ ಆಗಿ ಕೆಲಸ ಮಾಡಿದ. ಅಲ್ಲಿಂದ ಉತ್ತರಾಖಂಡದ ರುದ್ರಾಪುರಕ್ಕೆ ತೆರಳಿ ಶಾಲೆಯೊಂದರಲ್ಲಿ ಉದ್ಯೋಗದಲ್ಲಿದ್ದ. ಸಿಬಿಐ ತಂಡ ಅಲ್ಲಿಗೆ ತಲುಪಿದ್ದು ತಿಳಿದ ತಕ್ಷಣ 2016ರಲ್ಲಿ ಅಲ್ಲಿಂದ ಪಲಾಯನ ಮಾಡಿದ.
"ಇ-ಮೇಲ್ ಐಡಿ ಮತ್ತು ಆಧಾರ್ ವಿವರಗಳ ಮೂಲಕ ಸಿಬಿಐ ಅಧಿಕಾರಿಗಳು ಗೂಗಲ್ ನ ಕಾನೂನು ಜಾರಿ ಇಲಾಖೆಯ ಸಹಕಾರ ಕೋರಿದರು. ಇದರಿಂದ ರಾವ್ ಔರಂಗಾಬಾದ್ ಜಿಲ್ಲೆಯ ವೆರೂಲ್ ಗ್ರಾಮದ ಒಂದು ಆಶ್ರಮದಲ್ಲಿ ಇರುವುದು ಪತ್ತೆಯಾಯಿತು. ಅಲ್ಲಿ ತನ್ನ ಹೆಸರನ್ನು ವಿದಿತಾತ್ಮಾನಂದ ತೀರ್ಥ ಎಂದು ಬದಲಿಸಿಕೊಂಡು ಮತ್ತೊಂದು ಆಧಾರ್ಕಾರ್ಡ್ ಪಡೆದಿದ್ದ. ಅಲ್ಲಿ ವ್ಯವಸ್ಥಾಪಕರಿಗೆ 70 ಲಕ್ಷ ರೂಪಾಯಿ ವಂಚಿಸಿ 2021ರಲ್ಲಿ ಪಲಾಯನ ಮಾಡಿದ್ದ. ರಾಜಸ್ಥಾನದ ಭರತ್ಪುರಕ್ಕೆ ಹೋಗಿ 2024ರ ಜುಲೈ 8ರವರೆಗೂ ಅಲ್ಲಿದ್ದ. ನಂತರ ತಿರುನೆಲ್ವೇಲಿಗೆ ಬಂದು ಭಕ್ತರೊಬ್ಬರ ಮನೆಯಲ್ಲಿದ್ದ. ಸಮುದ್ರ ಮಾರ್ಗವಾಗಿ ಶ್ರೀಲಂಕಾಗೆ ತೆರಳಲು ಉದ್ದೇಶಿಸಿರುವ ಬಗ್ಗೆ ಮಾಹಿತಿ ಕಲೆ ಹಾಕಿದ ಸಿಬಿಐ ಅಂತಿಮವಾಗಿ ನರಸಿಂಗ ನಲ್ಲೂರ್ ಗ್ರಾಮದಲ್ಲಿ ಬಂಧಿಸಿದೆ.