ಚಂದ್ರನ ನೆಲದಲ್ಲಿ ವಿಕ್ರಮ್ ಲ್ಯಾಂಡರ್ ಇಳಿಸುವ ಸಾಹಸದ 'ನಿರ್ಣಾಯಕ 20 ನಿಮಿಷಗಳು' !
ವಿಕ್ರಮ್ ಲ್ಯಾಂಡರ್| Photo: Twitter/@ISRO
ಬೆಂಗಳೂರು: ‘ವಿಕ್ರಮ’ ಲ್ಯಾಂಡರನ್ನು ಚಂದ್ರನ ನೆಲದಲ್ಲಿ ನಿಧಾನವಾಗಿ ಇಳಿಸುವ ಅಂತಿಮ 20 ನಿಮಿಷಗಳ ಕಾರ್ಯಾಚರಣೆ ಬುಧವಾರ ಸಂಜೆ 5:47ಕ್ಕೆ ಆರಂಭಗೊಂಡಿತು. ಈ ಅಂತಿಮ 20 ನಿಮಿಷಗಳೇ ನಿರ್ಣಾಯಕವಾಗಿವೆ. ಈ ಮಹತ್ವದ ಕಾರ್ಯಾಚರಣಾ ಅವಧಿಯು ವಿಜ್ಞಾನಿಗಳಲ್ಲಿ ನಡುಕ ಹುಟ್ಟಿಸುತ್ತದೆ.
ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ ವಿಜ್ಞಾನಿಗಳು ‘ಪವರ್ ಡಿಸೆಂಟ್’ (ಚಂದ್ರನ ನೆಲಕ್ಕೆ ಇಳಿಕೆ) ಮಜಲಿಗೆ ಚಾಲನೆ ನೀಡುತ್ತಿದ್ದಂತೆಯೇ, ವಿಕ್ರಮ್ ಲ್ಯಾಂಡರ್ ಚಂದ್ರನ ಮೇಲೆ ಇಳಿಯುವ ಕಸರತ್ತನ್ನು ಆರಂಭಿಸಿತು.
ಪವರ್ ಡಿಸೆಂಟ್ನ ಮೊದಲ ಹಂತ ‘ರಫ್ ಬ್ರೇಕಿಂಗ್’ (ಜೋರಾಗಿ ಬ್ರೇಕ್ ಹಾಕುವುದು). ಇದು ವಿಕ್ರಮ ಲ್ಯಾಂಡರ್ನ ವೇಗವನ್ನು ಗಂಟೆಗೆ 6,000ಕ್ಕೂ ಅಧಿಕ ಕಿ.ಮೀ.ನಿಂದ ಬಹುತೇಕ ಸೊನ್ನೆಗೆ ಇಳಿಸುತ್ತದೆ. ಇದುವೇ ಅತ್ಯಂತ ಮಹತ್ವದ ಘಟ್ಟ. ಯಾಕೆಂದರೆ ಇಲ್ಲಿ ಲ್ಯಾಂಡರ್ ಸಾವಕಾಶವಾಗಿ ನೆಲವನ್ನು ಸ್ಪರ್ಶಿಸಲು ತನ್ನ ಅಗಾಧ ವೇಗವನ್ನು ಅತ್ಯಂತ ಕಡಿಮೆ ಅವಧಿಯಲ್ಲಿ ಸೊನ್ನೆಗೆ ಇಳಿಸಬೇಕಾಗುತ್ತದೆ.
ಎರಡನೆಯದು, ‘ಎತ್ತರವನ್ನು ಕಾಪಾಡಿಕೊಳ್ಳುವ’ ಹಂತ. ಇದು 10 ಸೆಕೆಂಡ್ಗಳ ಕಾಲ ಚಾಲ್ತಿಯಲ್ಲಿರುತ್ತದೆ. ಈ ಹಂತದಲ್ಲಿ, ವಿಕ್ರಮ ಲ್ಯಾಂಡರ್ ಸಮಾನಾಂತರ ಸ್ಥಿತಿಯಿಂದ ಲಂಬ ಸ್ಥಿತಿಗೆ ವಾಲಬೇಕು. ಈ ಪಲ್ಲಟವು ಚಂದ್ರನ ಮೇಲ್ಮೈಯಿಂದ 7.42 ಕಿ.ಮೀ. ಎತ್ತರದಲ್ಲಿ ನಡೆಯುತ್ತದೆ. ಈ ಕಾರ್ಯಾಚರಣೆಯ ವೇಳೆ, ಲ್ಯಾಂಡರ್ ಒಂದೇ ಎತ್ತರದಲ್ಲಿ (7.42 ಕಿ.ಮೀ.) 3.48 ಕಿ.ಮೀ. ದೂರ ಕ್ರಮಿಸುತ್ತದೆ.
ಮೂರನೆಯದು, ‘ಫೈನ್ ಬ್ರೇಕಿಂಗ್’ (ಸೂಕ್ಷ್ಮವಾಗಿ ಬ್ರೇಕ್ ಹಾಕುವ) ಹಂತ. ಇದು ನಾಲ್ಕು ಹಂತಗಳಲ್ಲೇ ದೀರ್ಘ ಹಂತವಾಗಿದೆ. ಅಂದರೆ ಅದು 175 ಸೆಕೆಂಡ್ಗಳನ್ನು ತೆಗೆದುಕೊಳ್ಳುತ್ತದೆ. ಈ ಹಂತದಲ್ಲಿ, ವಿಕ್ರಮ ಲ್ಯಾಂಡರ್ ಲಂಬ ಸ್ಥಿತಿಯಲ್ಲಿ ಕೊನೆಯ 28 ಕಿ.ಮೀ. ದೂರವನ್ನು ಕ್ರಮಿಸಿತು. ಈ ಅವಧಿಯಲ್ಲಿ ಅದರ ವೇಗ ಶೂನ್ಯ ಹಾಗೂ ಅದರ ಎತ್ತರವು 800-1000 ಮೀಟರ್ಗೆ ಇಳಿಯಿತು.
ಇಲ್ಲಿ ಗಮನಿಸಬೇಕಾದ ವಿಚಾರವೆಂದರೆ, ಚಂದ್ರಯಾನ -2 ವಿಫಲವಾದದ್ದು ಎರಡು ಮತ್ತು ಮೂರನೇ ಹಂತಗಳ ನಡುವೆ.
ಅಂತಿಮ ಹಂತವೇ ‘ಟರ್ಮಿನಲ್ ಡಿಸೆಂಟ್’. ಈ ಹಂತದಲ್ಲಿ ವಿಕ್ರಮ ಲ್ಯಾಂಡರ್ ಕೊನೆಯ ಕೆಲವು ನೂರು ಮೀಟರ್ಗಳನ್ನು ಕ್ರಮಿಸಿ ಚಂದ್ರನ ದಕ್ಷಿಣ ಧ್ರುವದಲ್ಲಿ ನಿಧಾನವಾಗಿ ಇಳಿಯಿತು.