ಮೃತ ಅಗ್ನಿವೀರರ ಕುಟುಂಬಗಳಿಗೆ ಅಸಮರ್ಪಕ ಪರಿಹಾರ ಆರೋಪವನ್ನು ನಿರಾಕರಿಸಿದ ರಕ್ಷಣಾ ಇಲಾಖೆ
ಕೇಂದ್ರ ರಕ್ಷಣಾ ಸಚಿವ ರಾಜ್ ನಾಥ್ ಸಿಂಗ್ | PC: PTI
ಹೊಸದಿಲ್ಲಿ: ಮೃತ ಅಗ್ನಿವೀರ ಅಜಯ್ ಸಿಂಗ್ ಅವರ ಕುಟುಂಬಕ್ಕೆ 98 ಲಕ್ಷ ರೂಪಾಯಿ ಪರಿಹಾರ ಧನ ನೀಡಲಾಗಿದೆ ಎಂದು ರಕ್ಷಣಾ ಸಚಿವಾಲಯ ಬುಧವಾರ ಪ್ರಕಟಿಸಿದೆ. ಕೆಲ ಆಂತರಿಕ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿದ ಬಳಿಕ ಇನ್ನು 67 ಲಕ್ಷ ರೂಪಾಯಿಗಳನ್ನು ಕುಟುಂಬ ಪಡೆಯಲಿದೆ ಎಂದು ಪ್ರತಿಪಾದಿಸಿದೆ.
"ಈ ವರ್ಷದ ಜನವರಿಯಲ್ಲಿ ನೌಶೇರಾ ಪ್ರದೇಶದಲ್ಲಿ ಸಂಭವಿಸಿದ ನೆಲಬಾಂಬ್ ಸ್ಫೋಟದಲ್ಲಿ ಅಗ್ನಿವೀರ ಅಜಯ್ ಸಿಂಗ್ ಮೃತಪಟ್ಟಿದ್ದರು. ಅವರ ಕುಟುಂಬಕ್ಕೆ 98,39,000 ರೂಪಾಯಿ ಪರಿಹಾರವನ್ನು ಇದುವರೆಗೆ ವಿತರಿಸಲಗಿದೆ ಎಂದು ಮೂಲಗಳು ಹೇಳಿವೆ. ಅಗತ್ಯ ತನಿಖೆ ಮತ್ತು ಆಂತರಿಕ ವಿಧಿವಿಧಾನಗಳನ್ನು ಪೂರೈಸಿದ ಬಳಿಕ ಕುಟುಂಬಕ್ಕೆ ಹೆಚ್ಚುವರಿಯಾಗಿ 67 ಲಕ್ಷ ರೂಪಾಯಿ ಪರಿಹಾರ ವಿತರಿಸಲಾಗುವುದು ಎಂದು ವಿವರಿಸಿದೆ.
ಮೃತ ಅಗ್ನಿವೀರರ ಕುಟುಂಬಗಳಿಗೆ ಅಸಮರ್ಪಕ ಪರಿಹಾರ ಒದಗಿಸಲಾಗುತ್ತಿದೆ ಎಂದು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಲೋಕಸಭೆಯಲ್ಲಿ ಆಪಾದಿಸಿದ ಬೆನ್ನಲ್ಲೇ ಈ ಅಂಕಿ ಅಂಶ ಬಿಡುಗಡೆ ಮಾಡಲಾಗಿದ್ದು, ರಕ್ಷಣಾ ಸಚಿವ ರಾಜ್ ನಾಥ್ ಸಿಂಗ್ ಆರೋಪವನ್ನು ಬಲವಾಗಿ ಅಲ್ಲಗಳೆದಿದ್ದಾರೆ. ಸೇನೆಯಲ್ಲಿ ಸುಧಾರಣೆ ತರುವ ಉದ್ದೇಶದಿಂದ 158 ಏಜೆನ್ಸಿಗಳ ಜತೆ ಚರ್ಚಿಸಿ ಈ ಯೋಜನೆ ಜಾರಿಗೆ ತರಲಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ.
ಬಿಜೆಪಿ ನೇತೃತ್ವದ ಎನ್ ಡಿಎ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ ತಕ್ಷಣ, ಬಿಜೆಪಿಯ ಎರಡು ಮಿತ್ರಪಕ್ಷಗಳು, ಈ ವಿವಾದಾತ್ಮಕ ಯೋಜನೆಯ ಪರಾಮರ್ಶೆಗೆ ಆಗ್ರಹಿಸಿದ್ದವು. ಈ ಯೋಜನೆಯಡಿ ಶೇಕಡ 75ರಷ್ಟು ಅಗ್ನಿವೀರರು ನಾಲ್ಕು ವರ್ಷಗಳ ಸೇವೆ ಬಳಿಕ ನಿರ್ಗಮಿಸಲು ಅವಕಾಶವಿದ್ದು, ಉಳಿದವರನ್ನು ಕಾಯಂ ಪಡೆಗೆ ನಿಯೋಜಿಸಿಕೊಳ್ಳಲಾಗುತ್ತದೆ.