ಕೇಂದ್ರದಿಂದ 10,000 ಕೋ.ರೂ.ಗೆ ಬೇಡಿಕೆ ಪುನರುಚ್ಚರಿಸಿದ ದಿಲ್ಲಿ ಸರಕಾರ
ಸಚಿವೆ ಅತಿಶಿ | PTI
ಹೊಸದಿಲ್ಲಿ: ಕೇಂದ್ರ ಬಜೆಟ್ ಮಂಡನೆಗೆ ನಾಲ್ಕು ದಿನಗಳು ಬಾಕಿಯುಳಿದಿರುವಂತೆ ದಿಲ್ಲಿ ಸರಕಾರವು ರಾಜ್ಯದಿಂದ ಕೇಂದ್ರಕ್ಕೆ ಎರಡು ಲಕ್ಷ ಕೋಟಿ.ರೂ.ಗಳ ಆದಾಯ ತೆರಿಗೆ ಕೊಡುಗೆಯಲ್ಲಿ 10,000 ಕೋಟಿ.ರೂ.ಗಳನ್ನು ದಿಲ್ಲಿಗೆ ಹಂಚಿಕೆ ಮಾಡಬೇಕೆಂಬ ತನ್ನ ಬೇಡಿಕೆಯನ್ನು ಪುನರುಚ್ಚರಿಸಿದೆ.
ಶುಕ್ರವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ದಿಲ್ಲಿ ಸಚಿವೆ ಅತಿಶಿ ಅವರು, ಕೇಂದ್ರಕ್ಕೆ ದಿಲ್ಲಿಯ ಆದಾಯ ತೆರಿಗೆ ಪಾಲು 2.07 ಲ.ಕೋ. ರೂ. ಮತ್ತು ಜಿಎಸ್ಟಿಯಿಂದ 25,000 ಕೋ.ರೂ.ಗಳು ಲಭಿಸಿದ್ದರೂ ದಿಲ್ಲಿ ಸರಕಾರಕ್ಕೆ ಒಂದೇ ಒಂದು ರೂಪಾಯಿಯನ್ನು ನೀಡಲಾಗಿಲ್ಲ. ದಿಲ್ಲಿಯ ಕೇಂದ್ರೀಯ ತೆರಿಗೆಗಳ ಕೊಡುಗೆಯಲ್ಲಿ 10,000 ಕೋ.ರೂ.ಗಳನ್ನು ರಸ್ತೆ,ಸಾರಿಗೆ ಮತ್ತು ವಿದ್ಯುತ್ ಕ್ಷೇತ್ರಗಳಲ್ಲಿ ಮೂಲಸೌಕರ್ಯ ಅಭಿವೃದ್ಧಿಗಾಗಿ ನಗರಕ್ಕೆ ಹಂಚಿಕೆ ಮಾಡಬೇಕು ಎನ್ನುವುದು ಬಜೆಟ್ಗೆ ಮುನ್ನ ದಿಲ್ಲಿಯ ಜನರ ಬೇಡಿಕೆಯಾಗಿದೆ ಎಂದು ಹೇಳಿದರು.
ಕೇಂದ್ರೀಯ ತೆರಿಗೆಗಳಿಗೆ ಮಹಾರಾಷ್ಟ್ರ ಮತ್ತು ಕರ್ನಾಟಕ ಅನುಕ್ರಮವಾಗಿ ಐದು ಲಕ್ಷ ಕೋಟಿ.ರೂ. ಮತ್ತು ಎರಡು ಲಕ್ಷ ಕೋಟಿ.ರೂ.ಗಳ ಕೊಡುಗೆಯನ್ನು ನೀಡುತ್ತಿವೆ. ಈ ಪೈಕಿ ಅನುಕ್ರಮವಾಗಿ 54,000 ಕೋಟಿ.ರೂ. ಮತ್ತು 33,000 ಕೋಟಿ.ರೂ.ಗಳನ್ನು ಅವು ಪಡೆಯುತ್ತಿವೆ. ಈ ರಾಜ್ಯಗಳು ತಮ್ಮ ಕೊಡುಗೆಗಳಿಗೆ ಪ್ರತಿಯಾಗಿ ಇಷ್ಟೊಂದು ಮೊತ್ತಗಳನ್ನು ಪಡೆಯುತ್ತಿರುವಾಗ ದಿಲ್ಲಿಗೇಕೆ ಸಾಧ್ಯವಿಲ್ಲ? ಇಂತಹ ತಾರತಮ್ಯವೇಕೆ ಎಂದು ಬಿಜೆಪಿ ನೇತೃತ್ವದ ಕೇಂದ್ರದ ಎನ್ಡಿಎ ಸರಕಾರವನ್ನು ಅವರು ಪ್ರಶ್ನಿಸಿದರು.