ಕೇಜ್ರಿವಾಲ್ ನ್ಯಾಯಾಲಯದಲ್ಲಿ ಮಾತನಾಡಿರುವ ವೀಡಿಯೋ ತೆಗೆದು ಹಾಕುವಂತೆ ಅವರ ಪತ್ನಿಗೆ ಸೂಚಿಸಿದ ದಿಲ್ಲಿ ಹೈಕೋರ್ಟ್

ಅರವಿಂದ್ ಕೇಜ್ರಿವಾಲ್ , ಸುನೀತಾ ಕೇಜ್ರಿವಾಲ್ | PC : PTI
ಹೊಸದಿಲ್ಲಿ: ಮಾರ್ಚ್ 28ರಂದು ಆಪ್ ಮುಖ್ಯಸ್ಥ ಹಾಗೂ ದಿಲ್ಲಿ ಸಿಎಂ ಅರವಿಂದ್ ಕೇಜ್ರಿವಾಲ್ ಅವರು ನ್ಯಾಯಾಲಯವನ್ನುದ್ದೇಶಿಸಿ ಮಾತನಾಡಿರುವ ವೀಡಿಯೋ, ಅದರ ಪೋಸ್ಟ್ ಹಾಗೂ ರೀಪೋಸ್ಟ್ಗಳನ್ನು ತೆಗೆದು ಹಾಕುವಂತೆ ಅವರ ಪತ್ನಿ ಸುನೀತಾ ಕೇಜ್ರಿವಾಲ್ ಹಾಗೂ ಸಾಮಾಜಿಕ ಮಾಧ್ಯಮ ವೇದಿಕೆಗಳಾದ ಫೇಸ್ಬುಕ್ ಮತ್ತು ಯೂಟ್ಯೂಬ್ಗೆ ದಿಲ್ಲಿ ಹೈಕೋರ್ಟ್ ಶನಿವಾರ ನೋಟಿಸ್ ಜಾರಿಗೊಳಿಸಿದೆ.
ನ್ಯಾಯಾಲಯದ ವೀಡಿಯೋ ಕಾನ್ಫರೆನ್ಸ್ ನಿಯಮಗಳನ್ನು ಉಲ್ಲಂಘಿಸಿರುವುದರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಕೋರಿದ್ದ ಅರ್ಜಿಯ ವಿಚಾರಣೆಯ ಸಂದರ್ಭದಲ್ಲಿ ಈ ನೋಟಿಸ್ ಜಾರಿಗೊಳಿಸಿದೆ. ಈ ಘಟನೆಯು ದಿಲ್ಲಿ ಅಬಕಾರಿ ನೀತಿ ಪ್ರಕರಣದಲ್ಲಿ ಅರವಿಂದ್ ಕೇಜ್ರಿವಾಲ್ ಅವರು ಪೊಲೀಸರ ವಶದಲ್ಲಿದ್ದಾಗ ನಡೆದಿತ್ತು.
ನ್ಯಾಯಾಲಯದ ವಿಚಾರಣೆಯ ವೀಡಿಯೋವನ್ನು ನಕಲು ಮಾಡಿಕೊಂಡು ಅರವಿಂದ್ ಕೇಜ್ರಿವಾಲ್ ಅಲ್ಲದೆ, ಆಪ್ನ ಸಾಮಾಜಿಕ ಮಾಧ್ಯಮ ಖಾತೆಗಳು ಹಾಗೂ ಕೆಲವು ವಿರೋಧ ಪಕ್ಷಗಳು ಅವನ್ನು ಅಂತರ್ಜಾಲದಲ್ಲಿ ಪೋಸ್ಟ್ ಮಾಡಿವೆ ಎಂದು ಅರ್ಜಿದಾರರು ವಾದಿಸಿದರು.
ಈ ನಿರ್ದಿಷ್ಟ ವೀಡಿಯೋದಲ್ಲಿ ಅರವಿಂದ್ ಕೇಜ್ರಿವಾಲ್ ಅವರು ನ್ಯಾಯಾಲಯದ ಮುಂದೆ ತಮ್ಮ ಹೇಳಿಕೆ ನೀಡುತ್ತಿರುವುದು ದಾಖಲಾಗಿದೆ.