ಕೇಜ್ರಿವಾಲ್ ರನ್ನು ಸಿಎಂ ಹುದ್ದೆಯಿಂದ ಪದಚ್ಯುತಗೊಳಿಸುವಂತೆ ಸಲ್ಲಿಸಿದ್ದ ಅರ್ಜಿ ವಜಾಗೊಳಿಸಿದ ದಿಲ್ಲಿ ಹೈಕೋರ್ಟ್
ಅರವಿಂದ್ ಕೇಜ್ರಿವಾಲ್ | Photo: PTI
ಹೊಸದಿಲ್ಲಿ: ಅಬಕಾರಿ ನೀತಿ ಹಗರಣಕ್ಕೆ ಸಂಬಂಧಿಸಿ ಈಡಿ ಅಧಿಕಾರಿಗಳಿಂದ ಬಂಧನಕ್ಕೊಳಗಾಗಿರುವ ದಿಲ್ಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರನ್ನು ಸಿಎಂ ಹುದ್ದೆಯಿಂದ ಕೆಳಗಿಳಿಸುವಂತೆ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ದಿಲ್ಲಿ ಹೈಕೋರ್ಟ್ ತಿರಸ್ಕರಿಸಿದೆ.
ಸಾಮಾಜಿಕ ಕಾರ್ಯಕರ್ತ ಎಂದು ಗುರುತಿಸಿಕೊಂಡಿರುವ ಸುರ್ಜಿತ್ ಸಿಂಗ್ ಯಾದವ್ ಎಂಬವರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆಯನ್ನು ದಿಲ್ಲಿ ಹೈಕೋರ್ಟ್ ಗುರುವಾರ ನಡೆಸಿದೆ.
ವಿಚಾರಣೆ ನಡೆಸಿದ ಹಂಗಾಮಿ ಮುಖ್ಯ ನ್ಯಾಯಮೂರ್ತಿ ಮನಮೋಹನ್ ಮತ್ತು ನ್ಯಾಯಮೂರ್ತಿ ಮನ್ಮೀತ್ ಪ್ರೀತಮ್ ಸಿಂಗ್ ಅರೋರಾ ಅವರ ವಿಭಾಗೀಯ ಪೀಠವು, “ಈ ವಿಚಾರದಲ್ಲಿ ಹಸ್ತಕ್ಷೇಪ ನಡೆಸಲು ನ್ಯಾಯಾಲಯಕ್ಕೆ ಸಾಧ್ಯವಿಲ್ಲ. ಕಾರ್ಯಾಂಗ ಮತ್ತು ರಾಷ್ಟ್ರಪತಿಯವರು ಈ ಸಮಸ್ಯೆಯನ್ನು ಪರಿಶೀಲಿಸಬೇಕು” ಎಂದು ಹೇಳಿದೆ.
ಕೇಜ್ರಿವಾಲ್ ಸಿಎಂ ಆಗಿ ಕಾರ್ಯ ನಿರ್ವಹಿಸದಂತೆ ಯಾವುದಾದರೂ ಕಾನೂನು ಇರುವ ಬಗ್ಗೆ ಎಲ್ಲಿಯಾದರೂ ಉಲ್ಲೇಖವಿದೆಯೇ ಎಂಬುದನ್ನು ನೀವು ನಮಗೆ ತೋರಿಸಿ ಎಂದು ಅರ್ಜಿದಾರರನ್ನು ಹೈಕೋರ್ಟ್ ತರಾಟೆಗೆತ್ತಿಕೊಂಡಿದೆ.