‘ದಳಪತಿ’ ವಿಜಯ್ರ ಟಿವಿಕೆಗೆ ಅಧಿಕೃತ ರಾಜಕೀಯ ಪಕ್ಷದ ಮಾನ್ಯತೆ ನೀಡಿದ ಚುನಾವಣಾ ಆಯೋಗ
ನಟ ವಿಜಯ್
ಚೆನ್ನೈ : ತಮಿಳು ಚಿತ್ರರಂಗದ ಖ್ಯಾತ ನಟ ‘ದಳಪತಿ’ ವಿಜಯ್ ಸ್ಥಾಪಿಸಿರುವ ತಮಿಳಗ ವೇಟ್ರಿ ಕಳಗಂ (ಟಿವಿಕೆ) ಪಕ್ಷವನ್ನು ಭಾರತೀಯ ಚುನಾವಣಾ ಆಯೋಗವು ರವಿವಾರ ಅಧಿಕೃತವಾಗಿ ನೋಂದಾಯಿಸಿಕೊಂಡಿದೆ. ನೋಂದಾಯಿತ ರಾಜಕೀಯ ಪಕ್ಷವಾಗಿ ಚುನಾವಣಾ ರಾಜಕೀಯದಲ್ಲಿ ಪಾಲ್ಗೊಳ್ಳಲು ಅದಕ್ಕೆ ಅನುಮತಿಯನ್ನು ನೀಡಿದೆ.
ತಮಿಳುನಾಡು ಹಾಗೂ ಕೇಂದ್ರಾಡಳಿತ ಪುದುಚೇರಿಯಲ್ಲಿ ಪ್ರಾದೇಶಿಕ ರಾಜಕೀಯ ಪಕ್ಷವಾಗಿರುವ ತಮಿಳಗ ವೇಟ್ರಿ ಕಳಗಂ ಅನ್ನು ವಿಜಯ್ ಅವರು 2024ರ ಫೆಬ್ರವರಿ 2ರಂದು ಸ್ಥಾಪಿಸಿದ್ದರು.
ಈ ಬಗ್ಗೆ ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ಮಾಹಿತಿ ನೀಡಿರುವ ವಿಜಯ್, ‘‘ ತಮಿಳಗ ವೇಟ್ರಿ ಕಳಗಂ ಪಕ್ಷವನ್ನು ಚುನಾವಣಾ ಆಯೋಗವು ಅಧಿಕೃತವಾಗಿ ನೋಂದಾಯಿಸಿಕೊಂಡಿದೆ ಹಾಗೂ ನೋಂದಾಯಿತ ರಾಜಕೀಯ ಪಕ್ಷವಾಗಿ ಚುನಾವಣಾ ರಾಜಕೀಯದಲ್ಲಿ ಪಾಲ್ಗೊಳ್ಳಲು ಅನುಮತಿಯನ್ನು ನೀಡಿದೆ’’ ಎಂದು ತಿಳಿಸಿದ್ದಾರೆ.
ವಿಜಯ್ ಅವರು ಗುರುವಾರ ಟಿವಿಕೆ ಪಕ್ಷದ ಧ್ವಜ ಹಾಗೂ ಚಿಹ್ನೆಯನ್ನು ಅನಾವರಣಗೊಳಿಸಿದ ಬಳಿಕ ಸುದ್ದಿಗಾರರ ಜೊತೆ ಮಾತನಾಡುತ್ತಾ ತನ್ನ ಪಕ್ಷವು ತಮಿಳುನಾಡಿನ ಅಭಿವೃದ್ಧಿಗೆ ಶ್ರಮಿಸಲಿದೆಯೆಂದು ಹೇಳಿದ್ದರು. ಪಕ್ಷದ ಮೊದಲ ರಾಜ ಮಟ್ಟದ ಸಮ್ಮೇಳನಕ್ಕಾಗಿ ಸಿದ್ಧತೆಗಳು ನಡೆಯುತ್ತಿದ್ದು, ಈ ಬಗ್ಗೆ ಶೀಘ್ರದಲ್ಲೇ ಘೋಷಣೆಯನ್ನು ಮಾಡಲಿದ್ದೇನೆ ಎಂದವರು ತಿಳಿಸಿದ್ದರು. ಎಲ್ಲಾ ಜೀವಿಗಳ ಸಮಾನತೆಯನ್ನು ಸಾರುವ ಸಿದ್ಧಾಂತವನ್ನು ತನ್ನ ಪಕ್ಷವು ಎತ್ತಿಹಿಡಿಯಲಿದೆ ಎಂದು ಹೇಳಿದ್ದರು.
ವಿಜಯ್ ಅವರು ಈ ವರ್ಷದ ಫೆಬ್ರವರಿಯಲ್ಲಿ ತನ್ನ ಪಕ್ಷಕ್ಕೆ ತಮಿಳಗ ವೇಟ್ರಿ ಕಳಗಂ ಎಂದು ಹೆಸರಿಸಿದ್ದರು.