ಮತದಾನ ಪ್ರಮಾಣ ವಿವರ ಕೊನೆಗೂ ಬಿಡುಗಡೆಗೊಳಿಸಿದ ಚುನಾವಣಾ ಆಯೋಗ
ಒಟ್ಟು ಮತದಾರರ ಸಂಖ್ಯೆ ನೀಡದೆ ಕೇವಲ ಶೇಕಡಾವಾರು ಅಂಕಿಅಂಶ ನೀಡಿರುವುದಕ್ಕೆ ವಿಪಕ್ಷಗಳ ಆಕ್ಷೇಪ
ಸಾಂದರ್ಭಿಕ ಚಿತ್ರ | PC : PTI
ಹೊಸದಿಲ್ಲಿ: ಮೊದಲ ಹಂತದ ಲೋಕಸಭಾ ಚುನಾವಣೆ ಮುಗಿದು 10 ದಿನಗಳ ನಂತರ ಹಾಗೂ ಎರಡನೇ ಹಂತದ ಚುನಾವಣೆ ಮುಗಿದ ನಾಲ್ಕು ದಿನಗಳ ನಂತರ ಚುನಾವಣಾ ಆಯೋಗ ಮತದಾನ ಪ್ರಮಾಣದ ಅಂಕಿಅಂಶಗಳನ್ನು ಎಪ್ರಿಲ್ 30ರಂದು ಬಿಡುಗಡೆಗೊಳಿಸಿದೆ. ಈ ಮಾಹಿತಿಯ ಪ್ರಕಾರ ಮೊದಲ ಹಂತದ ಮತದಾನ ಪ್ರಮಾಣ 66.14% ಆಗಿದ್ದರೆ ಎರಡನೇ ಹಂತದ ಮತದಾನ ಪ್ರಮಾಣ 66.7% ಆಗಿದೆ.
ಆದರೆ ಪ್ರತಿ ಕ್ಷೇತ್ರದಲ್ಲಿ ಮತದಾನಗೈದ ಮತದಾರರ ಸಂಖ್ಯೆಯನ್ನು ಚುನಾವಣಾ ಆಯೋಗ ಬಿಡುಗಡೆಗೊಳಿಸಿಲ್ಲ. ಇದು ವಿಪಕ್ಷಗಳ ಅಸಮಾಧಾನಕ್ಕೆ ಕಾರಣವಾಗಿದೆ.
ಎಪ್ರಿಲ್ 19ರಂದು ಮೊದಲ ಹಂತದ ಚುನಾವಣೆಯಲ್ಲಿ 102 ಕ್ಷೇತ್ರಗಳಲ್ಲಿ ಮತದಾನ ನಡೆದಿದ್ದರೆ ಎಪ್ರಿಲ್ 26ರ ಎರಡನೇ ಹಂತದಲ್ಲಿ 88 ಕ್ಷೇತ್ರಗಳಲ್ಲಿ ಮತದಾನ ನಡೆದಿತ್ತು.
ಚುನಾವಣಾ ಆಯೋಗ ಬಿಡುಗಡೆಗೊಳಿಸಿರುವ ಮಾಹಿತಿಯಂತೆ ಮೊದಲ ಹಂತದಲ್ಲಿ 66.22% ಪುರುಷ ಮತದಾರರು ಹಾಗೂ 66.07% ಮಹಿಳಾ ಮತದಾರರು ಮತ ಚಲಾಯಿಸಿದ್ದರೆ ಎರಡನೇ ಹಂತದಲ್ಲಿ 66.99% ಪುರುಷ ಮತದಾರರು ಹಾಗೂ 66.42% ಮಹಿಳಾ ಮತದಾರರು ಮತ ಚಲಾಯಿಸಿದ್ದಾರೆ.
ಸಿಪಿಐ(ಎಂ) ಪ್ರಧಾನ ಕಾರ್ಯದರ್ಶಿ ಸೀತಾರಾಂ ಯೆಚೂರಿ ಪ್ರತಿಕ್ರಿಯಿಸಿ, “ಪ್ರತಿ ಕ್ಷೇ ತ್ರದ ಒಟ್ಟು ಮತದಾರರ ಸಂಖ್ಯೆಯನ್ನು ಏಕೆ ಬಿಡುಗಡೆಗೊಳಿಸಿಲ್ಲ. ಈ ಅಂಕಿಅಂಶ ತಿಳಿಯದೆ ಶೇಕಡಾವಾರು ಮತದಾನದ ಮಾಹಿತಿಗೆ ಅರ್ಥವಿಲ್ಲ,” ಎಂದಿದ್ದಾರೆ. “ಮತ ಎಣಿಕೆ ಸಂದರ್ಭ ಒಟ್ಟು ಮತದಾರರ ಸಂಖ್ಯೆಯನ್ನು ಬದಲಾಯಿಸುವ ಸಾಧ್ಯತೆಯ ಭಯವಿದೆ. 2014ರ ತನಕ ಪ್ರತಿ ಕ್ಷೇತ್ರದ ಒಟ್ಟು ಮತದಾರರ ಸಂಖ್ಯೆ ಇಸಿಐ ಬಳಿ ಲಭ್ಯವಿತ್ತು,” ಎಂದು ಅವರು ಹೇಳಿದ್ದಾರೆ.
ತೃಣಮೂಲ ಕಾಂಗ್ರೆಸ್ ನಾಯಕ ಡೆರೆಕ್ ಒʼಬ್ರಿಯಾನ್ ಪ್ರತಿಕ್ರಿಯಿಸಿ “ಎರಡನೇ ಹಂತದ ನಾಲ್ಕು ದಿನಗಳ ನಂತರ ಅಂತಿಮ ಅಂಕಿಸಂಖ್ಯೆಗಳನ್ನು ಚುನಾವಣಾ ಆಯೋಗ ಬಿಡುಗಡೆಗೊಳಿಸಿದೆ. ನಾಲ್ಕು ದಿನಗಳ ಹಿಂದೆ ಇಸಿ ಬಿಡುಗಡೆಗೊಳಿಸಿದ ಅಂಕಿಸಂಖ್ಯೆಗಳಿಗಿಂತ 5.75ರಷ್ಟು ಏರಿಕೆ? ಇದು ಸಾಮಾನ್ಯವೇನು? ಇಲ್ಲೇನು ತಪ್ಪಿದೆ?” ಎಂದು ಪ್ರಶ್ನಿಸಿದ್ದಾರೆ.