ಕಕ್ಷೆಯಲ್ಲಿ ಅಂತಿಮ ಕಾರ್ಯಾಚರಣೆ ಯಶಸ್ವಿ
ಚಂದ್ರನ ಮೇಲ್ಮೈಗೆ ಇನ್ನಷ್ಟು ಹತ್ತಿರವಾದ ಚಂದ್ರಯಾನ -3
ಚಂದ್ರಯಾನ -3 | Photo: ISRO
ಹೊಸದಿಲ್ಲಿ: ಚಂದ್ರಯಾನ- 3 ಬಾಹ್ಯಾಕಾಶನೌಕೆಯನ್ನು ಚಂದ್ರನಕಕ್ಷೆಯಿಂದ ಕೆಳಗೆ ಇಳಿಸುವ ಐದನೇ ಹಾಗೂ ಅಂತಿಮ ಸುತ್ತಿನ ಕಾರ್ಯಾಚರಣೆಯನ್ನು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಇಸ್ರೋ ಯಶಸ್ವಿಯಾಗಿ ನಡೆಸಿದೆ. ಚಂದ್ರನ ನೆಲದಲ್ಲಿ ಸಂಚರಿಸಲಿರುವ ‘ಪ್ರಗ್ಯಾನ್ ’ ರೋವರ್ ನೌಕೆಯನ್ನು ಒಳಗೊಂಡ ಲ್ಯಾಂಡಿಂಗ್ ಮೊಡ್ಯೂಲ್ ‘ವಿಕ್ರಮ್’ ತಾನು ಆಶ್ರಯಿಸಿರುವ ಪ್ರೊಪಲ್ಶನ್ ಮೊಡ್ಯೂಲ್ ನಿಂದ ಬೇರ್ಪಟ್ಟು ಚಂದ್ರನಲ್ಲಿ ಇಳಿಯುವ ನಿಟ್ಟಿನಲ್ಲಿ ಈ ಕಾರ್ಯಾಚರಣೆ ಒಂದು ಮಹತ್ವದ ಹೆಜ್ಜೆಯೆಂದು ಇಸ್ರೋ ಬಣ್ಣಿಸಿದೆ.
ಇಂದಿನ ಯಶಸ್ವಿ ಕಾರ್ಯಾಚರಣೆಯನ್ನು ಅಲ್ಪ ಅವಧಿಯಲ್ಲಿ ನಡೆಸಲಾಗಿದ್ದು, ಉದ್ದೇಶಿಸಲ್ಪಟ್ಟಂತೆಯೇ 153 ಕಿ.ಮೀ.X163 ಕಿ.ಮೀ. ಕಕ್ಷೆಯಲ್ಲಿ ಚಂದ್ರಯಾನ -3 ಅನ್ನು ಇರಿಸಲಾಗಿದೆ ಎಂದು ಇಸ್ರೋ ‘ಎಕ್ಸ್’(ಹಿಂದಿನ ಟ್ವಿಟ್ಟರ್)ನಲ್ಲಿ ತಿಳಿಸಿದೆ. ಇದರೊಂದಿಗೆ ಚಂದ್ರನೆಡೆಗೆ ಸಾಗುವ ಕಾರ್ಯಾಚರಣೆಯು ಪೂರ್ಣಗೊಂಡಿದೆ ಎಂದು ಅದು ಹೇಳಿದೆ.
ಚಂದ್ರಯಾನ ನೌಕೆಯು ಚಂದ್ರನ ಮೇಲ್ಮೈಗೆ ಇನ್ನಷ್ಟು ನಿಕಟವಾಗಿದೆ. ಪ್ರೊಪಲ್ಶನ್ ಮೊಡ್ಯೂಲ್ ಹಾಗೂ ಲ್ಯಾಂಡರ್ ಮೊಡ್ಯೂಲ್ ಗಳು ತಾವು ಪ್ರತ್ಯೇಕಗೊಳ್ಳುವ ಪ್ರಯಾಣಕ್ಕೆ ಸನ್ನದ್ಧವಾಗಿವೆ ಎಂದು ಇಸ್ರೋ ಹೇಳಿದೆ.
ಪ್ರೊಪಲ್ಶನ್ ಮೊಡ್ಯೂಲ್ ನಿಂದ ಲ್ಯಾಂಡರ್ ಮೊಡ್ಯೂಲ್ ಪ್ರತ್ಯೇಕಗೊಳ್ಳುವುದನ್ನು 2023ರ ಆಗಸ್ಟ್ 17ರಿಂದ ಯೋಜಿಸಲಾಗಿದೆ ಎಂದು ಇಸ್ರೋ ಹೇಳಿಕೆಯಲ್ಲಿ ತಿಳಿಸಿದೆ.
ಭಾರತದ ಮಹತ್ವಾಕಾಂಕ್ಷೆಯ ಮೂರನೇ ಚಂದ್ರಯಾನ ಮಿಶನ್ನ ಭಾಗವಾಗಿ ಚಂದ್ರಯಾನ3 ನೌಕೆಯನ್ನು ಜುಲೈ 14ರಂದು ಉಡಾವಣೆಗೊಳಿಸಲಾಗಿತ್ತು. ಆಗಸ್ಟ್ 5ರಂದು ಅದು ಚಂದ್ರನ ಕಕ್ಷೆಯನ್ನು ಪ್ರವೇಶಿಸಿತ್ತು.
ತರುವಾಯ ಇಸ್ರೋ ನಡೆಸಿದ ಸರಣಿ ಕಾರ್ಯಾಚರಣೆಗಳ ಮೂಲಕ ಚಂದ್ರನ ಕಕ್ಷೆಯಿಂದ ಚಂದ್ರಯಾನ3 ನೌಕೆಯು ಹಂತಹಂತವಾಗಿ ಕೆಳಗೆ ಇಳಿಸುತ್ತಿದೆ.