ಗಾಝಾ ಯುದ್ಧದ ನಡುವೆ ಇಸ್ರೇಲ್ ಗೆ ತೆರಳಿದ ಭಾರತದ 64 ಕಾರ್ಮಿಕರ ಮೊದಲ ತಂಡ
Photo: @NaorGilon / X
ಹೊಸದಿಲ್ಲಿ : ಗಾಝಾ ಯುದ್ದದ ನಡುವೆಯೇ ಹರ್ಯಾಣ ಮತ್ತು ಉತ್ತರ ಪ್ರದೇಶದಿಂದ 64 ಕಟ್ಟಡ ನಿರ್ಮಾಣ ಕಾರ್ಮಿಕರ ಮೊದಲ ತಂಡ ಮಂಗಳವಾರ ಇಸ್ರೇಲ್ ಗೆ ತೆರಳಿದೆ.
ಅಕ್ಟೋಬರ್ನಲ್ಲಿ ಗಾಝಾ ಯುದ್ಧ ಆರಂಭಗೊಂಡ ಬಳಿಕ ವರ್ಕ್ ಪರ್ಮಿಟ್ ರದ್ದುಗೊಂಡಿರುವ 90,000 ಫೆಲೆಸ್ತೀನಿಗಳ ಬದಲು ಒಂದು ಲಕ್ಷ ಭಾರತೀಯ ಕಾರ್ಮಿಕರನ್ನು ನೇಮಕಾತಿ ಮಾಡಿಕೊಳ್ಳಲು ಕಂಪನಿಗಳಿಗೆ ಅವಕಾಶ ನೀಡುವಂತೆ ಇಸ್ರೇಲ್ ನ ನಿರ್ಮಾಣ ಉದ್ಯಮವು ಭಾರತ ಸರಕಾರವನ್ನು ಕೋರಿಕೊಂಡಿದೆ ಎಂದು ನವಂಬರ್ನಲ್ಲಿ ಮಾಧ್ಯಮಗಳು ವರದಿ ಮಾಡಿದ್ದವು.
ಇಸ್ರೇಲಿ ಉದ್ಯೋಗ ಏಜೆನ್ಸಿಯಾಗಿರುವ ಜನಸಂಖ್ಯಾ ಮತ್ತು ವಲಸೆ ಪ್ರಾಧಿಕಾರದಿಂದ ನ.15ರಂದು 10,000 ನಿರ್ಮಾಣ ಕಾರ್ಮಿಕರಿಗಾಗಿ ಬೇಡಿಕೆಯನ್ನು ನಾವು ಸ್ವೀಕರಿಸಿದ್ದೆವು ಮತ್ತು ಬಳಿಕ ಹರ್ಯಾಣ ಮತ್ತು ಉತ್ತರ ಪ್ರದೇಶದಲ್ಲಿ ಉದ್ಯೋಗ ಅಭಿಯಾನವನ್ನು ನಡೆಸಲಾಗಿತ್ತು. ಅರ್ಹ 9,727 ಕಾರ್ಮಿಕರನ್ನು ಆಯ್ಕೆ ಮಾಡಿ ಅವರಿಗೆ ಇಸ್ರೇಲ್ ನಲ್ಲಿ ಕೆಲಸ ಮಾಡಲು ಗುತ್ತಿಗೆ ಪತ್ರವನ್ನು ನೀಡಲಾಗಿದೆ ಎಂದು ರಾಷ್ಟ್ರೀಯ ಕೌಶಲ್ಯಾಭಿವೃದ್ಧಿ ಮಂಡಳಿಯ ಅಧಿಕಾರಿಗಳು ಮಂಗಳವಾರ ಇಲ್ಲಿ ಇಸ್ರೇಲ್ ರಾಯಭಾರಿ ಕಚೇರಿಯು ಭಾರತೀಯ ಕಾರ್ಮಿಕರಿಗಾಗಿ ಆಯೋಜಿಸಿದ್ದ ವಿದಾಯ ಕಾರ್ಯಕ್ರಮದಲ್ಲಿ ತಿಳಿಸಿದರು.
ಈ 64 ಕಾರ್ಮಿಕರು ಇಸ್ರೇಲ್ ಗೆ ತೆರಳಲಿರುವ ಸುಮಾರು 10,000 ನಿರ್ಮಾಣ ಕಾರ್ಮಿಕರಲ್ಲಿ ಸೇರಿದ್ದಾರೆ. ಪ್ರತಿದಿನ ಕಾರ್ಮಿಕರ ತಂಡಗಳು ಚಾರ್ಟರ್ಡ್ ವಿಮಾನಗಳಲ್ಲಿ ಇಸ್ರೇಲ್ ಗೆ ಪ್ರಯಾಣಿಸಲಿದ್ದು, ಎಪ್ರಿಲ್ ನಲ್ಲಿ ಅಂದಾಜು 1,500 ಭಾರತೀಯರು ಇಸ್ರೇಲ್ ತಲುಪಲಿದ್ದಾರೆ.