ಭಾರತೀಯ ಸಂಖ್ಯೆ ಹೊಂದಿರುವ ಅಂತರರಾಷ್ಟ್ರೀಯ ವಂಚಕ ಕರೆಗಳನ್ನು ನಿರ್ಬಂಧಿಸಲು ದೂರಸಂಪರ್ಕ ಸಂಸ್ಥೆಗಳಿಗೆ ಸೂಚಿಸಿದ ಸರಕಾರ
ಸಾಂದರ್ಭಿಕ ಚಿತ್ರ | NDTV
ಹೊಸದಿಲ್ಲಿ : ಭಾರತೀಯ ಮೊಬೈಲ್ ಸಂಖ್ಯೆಯನ್ನು ಪ್ರದರ್ಶಿಸುವ ಎಲ್ಲ ಅಂತರರಾಷ್ಟ್ರೀಯ ವಂಚಕ ಕರೆಗಳನ್ನು ನಿರ್ಬಂಧಿಸುವಂತೆ ಕೇಂದ್ರ ಸರಕಾರವು ದೂರಸಂಪರ್ಕ ಸಂಸ್ಥೆಗಳಿಗೆ ಸೂಚಿಸಿದೆ ಎಂದು ರವಿವಾರ ಅಧಿಕೃತ ಪ್ರಕಟಣೆ ತಿಳಿಸಿದೆ ಎಂದು ಪಿಟಿಐ ಸುದ್ದಿ ಸಂಸ್ಥೆ ವರದಿ ಮಾಡಿದೆ.
ವಂಚಕರು ಭಾರತೀಯ ಮೊಬೈಲ್ ಸಂಖ್ಯೆಗಳನ್ನು ಬಳಸಿಕೊಂಡು ಅಂತರರಾಷ್ಟ್ರೀಯ ವಂಚನೆಯ ಕರೆಗಳನ್ನು ಮಾಡುತ್ತಿದ್ದಾರೆ ಎಂದು ವರದಿಯಾಗಿದ್ದು, ಇಂತಹ ವಂಚಕರು ಸೈಬರ್ ಅಪರಾಧ ಹಾಗೂ ಆರ್ಥಿಕ ವಂಚನೆ ಅಪರಾಧ ಕೃತ್ಯಗಳಲ್ಲಿ ತೊಡಗಿದ್ದಾರೆ ಎಂದು ದೂರಸಂಪರ್ಕ ಇಲಾಖೆಯು ಹೇಳಿದೆ.
ಇಂತಹ ಕರೆಗಳು ಭಾರತ ಮೂಲದ್ದೆಂಬಂತೆ ಕಂಡು ಬಂದರೂ, ಸೈಬರ್ ಅಪರಾಧಿಗಳು ವಿದೇಶಗಳಿಂದ ಕರೆ ಪಥದ ಗುರುತು (Calling Line Identity) ಅನ್ನು ತಿರುಚಿ ಕರೆ ಮಾಡುತ್ತಿರುವುದು ಕಂಡು ಬಂದಿದೆ. ಅಂತಹ ಸಂಖ್ಯೆಗಳನ್ನು ಇತ್ತೀಚಿನ ನಕಲಿ ಡಿಜಿಟಲ್ ಬಂಧನ, ಫೆಡ್ ಎಕ್ಸ್ ಹಗರಣಗಳು, ಕೊರಿಯರ್ ನಲ್ಲಿ ಮಾದಕ ದ್ರವ್ಯ ಅಥವಾ ಮತ್ತಿನ ಪದಾರ್ಥಗಳು, ಸರಕಾರಿ ಮತ್ತು ಪೊಲೀಸ್ ಅಧಿಕಾರಿಗಳ ಸೋಗು, ದೂರಸಂಪರ್ಕ ಅಥವಾ ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರದ ಅಧಿಕಾರಿಗಳ ಸೋಗು ಇತ್ಯಾದಿ ಪ್ರಕರಣಗಳಲ್ಲಿ ದುರ್ಬಳಕೆ ಮಾಡಿಕೊಂಡಿರುವುದು ತಿಳಿದು ಬಂದಿದೆ ಎಂದು ಅದು ಹೇಳಿದೆ.
ದೂರಸಂಪರ್ಕ ಇಲಾಖೆ ನೀಡಿರುವ ಸೂಚನೆಗಳಂತೆ ದೂರಸಂಪರ್ಕ ಸೇವಾ ಸಂಸ್ಥೆಗಳು ಈಗಾಗಲೇ ಭಾರತೀಯ ಸ್ಥಿರ ದೂರವಾಣಿ ಸಂಖ್ಯೆಗಳನ್ನು ಹೊಂದಿರುವ ಸಂಖ್ಯೆಗಳನ್ನು ನಿರ್ಬಂಧಿಸಿವೆ. ದೂರಸಂಪರ್ಕ ಇಲಾಖೆಯು ಕೃತಕ ಬುದ್ಧಿಮತ್ತೆ ಚಾಲಿತ ವಿಶ್ಲೇಷಣೆಯು, ಈವರೆಗೆ 6.8 ಲಕ್ಷ ಮೊಬೈಲ್ ಸಂಪರ್ಕಗಳನ್ನು ತೀವ್ರ ಸ್ವರೂಪದ ವಂಚಕ ಸಂಖ್ಯೆಗಳು ಎಂದು ಎಚ್ಚರಿಸಿದೆ.