ನಾನು ಮಾಡಿರುವ ಕೆಲಸಗಳನ್ನು ಇಂಡಿಯಾ ಮೈತ್ರಿಕೂಟ ರದ್ದುಗೊಳಿಸಲಿದೆ : ಪ್ರಧಾನಿ ಮೋದಿ ಆರೋಪ
ನರೇಂದ್ರ ಮೋದಿ | PC : PTI
ಶ್ರವಸ್ತಿ (ಉತ್ತರ ಪ್ರದೇಶ): ‘ಕಳೆದ 60 ವರ್ಷಗಳಿಂದ ಏನನ್ನೂ ಮಾಡದವರು, ಮೋದಿ ಹಾಗೂ ಅವರ ಕೆಲಸವನ್ನು ನಿಲ್ಲಿಸಲು ಒಟ್ಟಾಗಿದ್ದಾರೆ” ಎಂದು ವಿರೋಧ ಪಕ್ಷಗಳ ಇಂಡಿಯಾ ಮೈತ್ರಿಕೂಟದ ವಿರುದ್ಧ ಬುಧವಾರ ಪ್ರಧಾನಿ ನರೇಂದ್ರ ಮೋದಿ ವಾಗ್ದಾಳಿ ನಡೆಸಿದರು.
ಉತ್ತರ ಪ್ರದೇಶದ ಶ್ರವಸ್ತಿ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಸಾಕೇತ್ ಮಿಶ್ರಾದ ಪರ ಆಯೋಜಿಸಲಾಗಿದ್ದ ಚುನಾವಣಾ ಸಮಾವೇಶವನ್ನುದ್ದೇಶಿಸಿ ಪ್ರಧಾನಿ ಮೋದಿ ಮಾತನಾಡುತ್ತಿದ್ದರು.
“ಕಳೆದ 60 ವರ್ಷಗಳಿಂದ ಏನನ್ನೂ ಮಾಡದ ವ್ಯಕ್ತಿಗಳು ಮೋದಿ ಹಾಗೂ ಅವರ ಕೆಲಸವನ್ನು ನಿಲ್ಲಿಸಲು ಒಟ್ಟಾಗಿದ್ದಾರೆ. ಉತ್ತರ ಪ್ರದೇಶದಲ್ಲಿ ಮತ್ತೆ ಇಬ್ಬರು ವಿಫಲ ಬಾಲಕರ ಸಿನಿಮಾ ಪ್ರಾರಂಭಗೊಂಡಿದೆ” ಎಂದು ವ್ಯಂಗ್ಯವಾಡಿದ ಮೋದಿ, “ಇಬ್ಬರು ರಾಜಕುಮಾರರು ಮೋದಿ ಮಾಡಿರುವ ಕೆಲಸಗಳನ್ನು ರದ್ದು ಮಾಡಲಿದ್ದಾರೆ” ಎಂದೂ ಆರೋಪಿಸಿದರು.
2017ರ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಮೈತ್ರಿಕೂಟದ ಪಾಲುದಾರರಾಗಿ ಕಣಕ್ಕಿಳಿದಿದ್ದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹಾಗೂ ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ರನ್ನು ‘ಇಬ್ಬರು ರಾಜಕುಮಾರರು’ ಎಂದು ಕರೆಯುವ ಮೂಲಕ ಪ್ರಧಾನಿ ನರೇಂದ್ರ ಮೋದಿ ಅವರಿಬ್ಬರನ್ನೂ ವ್ಯಂಗ್ಯವಾಡಿದರು.
ಸಮಾಜವಾದಿ ಪಕ್ಷ ಹಾಗೂ ಕಾಂಗ್ರೆಸ್ ಮೋದಿ ನಿರ್ಮಿಸಿರುವ ಮನೆಗಳನ್ನು ಹಿಂಪಡೆಯಲಿವೆ. ಈ ಎರಡೂ ಪಕ್ಷಗಳು ಜನರ ಜನ್ ಧನ್ ಖಾತೆಗಳನ್ನು ಸ್ಥಗಿತಗೊಳಿಸಿ, ಅವುಗಳಲ್ಲಿನ ಹಣವನ್ನು ಹಿಂಪಡೆಯಲಿವೆ. ಅವರ ವಿದ್ಯುತ್ ಸಂಪರ್ಕಗಳನ್ನು ಕಡಿತಗೊಳಿಸಲಿವೆ ಹಾಗೂ ಅವರ ನಲ್ಲಿಗಳನ್ನೂ ಹಿಂಪಡೆಯಲಿವೆ ಎಂದು ಪ್ರಧಾನಿ ಮೋದಿ ಆರೋಪಿಸಿದರು.
ಕಾಂಗ್ರೆಸ್ ಪಕ್ಷವು ಪೌರತ್ವ ತಿದ್ದುಪಡಿ ಕಾಯ್ದೆಯನ್ನು ರದ್ದುಪಡಿಸಲಿದೆ ಹಾಗೂ ಕಾಶ್ಮೀರದ ಮೇಲೆ ಮತ್ತೆ 370ನೇ ವಿಧಿಯನ್ನು ಹೇರಲಿದೆ ಎಂದು ಅವರು ಒತ್ತಿ ಹೇಳಿದರು.
“ಇದರರ್ಥ ಇಂದು ಜೈಲಿನಲ್ಲಿರುವ ಉಗ್ರಗಾಮಿಗಳನ್ನು ಪ್ರಧಾನಿಯ ನಿವಾಸಕ್ಕೆ ಆಹ್ವಾನಿಸಲಿರುವ ಕಾಂಗ್ರೆಸ್, ಅವರಿಗೆ ಬಿರಿಯಾನಿಯನ್ನು ತಿನ್ನಿಸಲಿದೆ. ಒಂದು ವೇಳೆ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ, ಅವರು ಭ್ರಷ್ಟರನ್ನು ರಕ್ಷಿಸಲಿದ್ದಾರೆ” ಎಂದೂ ಮೋದಿ ದೂರಿದರು.
ಇದೇ ವೇಳೆ, ಸಮಾಜವಾದಿ ಪಕ್ಷದ ವಿರುದ್ಧವೂ ವಾಗ್ದಾಳಿ ನಡೆಸಿದ ಪ್ರಧಾನಿ ಮೋದಿ, ಉತ್ತರ ಪ್ರದೇಶದಲ್ಲಿ ಅವರ ಸರಕಾರವಿದ್ದಾಗ, ಜಿಲ್ಲಾಧಿಕಾರಿಗಳು, ಪೊಲೀಸ್ ಮಹಾನಿರ್ದೇಶಕರು ಹಾಗೂ ಉದ್ಯೋಗಗಳನ್ನು ಒದಗಿಸಲು ದರಪಟ್ಟಿಯನ್ನು ನಿಗದಿಪಡಿಸಲಾಗಿತ್ತು. ಅವರು ಕೆಲಸವೇ ನಡೆಯದಿದ್ದರೂ, ಅದಕ್ಕಾಗಿ ಕಾಮಗಾರಿ ಮೊತ್ತವನ್ನು ಪಾವತಿಸಲಿದ್ದಾರೆ ಎಂದೂ ಆರೋಪಿಸಿದರು.