ಭಾರತ-ಪಾಕ್ ಸೂಪರ್-4 ಪಂದ್ಯಕ್ಕೂ ಪ್ರೇಕ್ಷಕರಿಂದ ನೀರಸ ಪ್ರತಿಕ್ರಿಯೆ
Photo: twitter \ @ICC
ಕೊಲಂಬೊ: ಭಾರತ ಹಾಗೂ ಪಾಕಿಸ್ತಾನ ನಡುವಿನ ಪಂದ್ಯವನ್ನು ವೀಕ್ಷಿಸಲು ಸಾಮಾನ್ಯವಾಗಿ ಕ್ರಿಕೆಟ್ ಅಭಿಮಾನಿಗಳು ಮುಗಿಬೀಳುತ್ತಾರೆ. ಆದರೆ ಏಶ್ಯಕಪ್ ನಲ್ಲಿ ರವಿವಾರ ಸೂಪರ್-4 ಪಂದ್ಯದಲ್ಲೂ ಪ್ರೇಕ್ಷಕರಿಂದ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ.
ರವಿವಾರವಾಗಿದ್ದರೂ ಕೂಡ ಮತ್ತೊಮ್ಮೆ ಪ್ರೇಕ್ಷಕರು ಭಾರತ-ಪಾಕ್ ಪಂದ್ಯದತ್ತ ಮುಖ ಮಾಡಿಲ್ಲ. ಇಂದಿನ ಪರಿಸ್ಥಿತಿ ಪಲ್ಲೆಕೆಲೆಯಲ್ಲಿ ನಡೆದ ಭಾರತ-ಪಾಕ್ ನಡುವಿನ ಲೀಗ್ ಪಂದ್ಯದ ಪಡಿಯಚ್ಚಿನಂತಿತ್ತು. ವಾರಾಂತ್ಯವಾಗಿರುವ ಕಾರಣ ಪ್ರೇಕ್ಷಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಬಹುದೆಂಬ ನಿರೀಕ್ಷೆಯಲ್ಲಿ ಆಯೋಜಕರಿದ್ದರು. ಕೊಲಂಬೊದಲ್ಲಿ ಭಾರತ ಹಾಗೂ ಪಾಕಿಸ್ತಾನ ಪ್ರಜೆಗಳು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. 2012ರಲ್ಲಿ ಭಾರತ ಹಾಗೂ ಪಾಕಿಸ್ತಾನ ನಡುವಿನ ಟಿ-20 ವಿಶ್ವಕಪ್ ನಲ್ಲಿ ಪ್ರೇಮದಾಸ ಸ್ಟೇಡಿಯಂ ಜನರಿಂದ ತುಂಬಿಹೋಗಿತ್ತು.
ಪಂದ್ಯದ ಟಿಕೆಟ್ ದರ ಕಡಿಮೆ ಮಾಡಿದ್ದರೂ ಕೂಡ ಪಂದ್ಯದ ಆಫ್ಲೈನ್ ಹಾಗೂ ಆನ್ಲೈನ್ ಟಿಕೆಟ್ ಗಳು ಮಾರಾಟವಾಗದೆ ಉಳಿದಿದ್ದವು. ಇದರಿಂದ ಸ್ಥಳೀಯ ಆಡಳಿತವು ತೀವ್ರ ನಿರಾಸೆಗೆ ಒಳಗಾಗಿದೆ.
ಶ್ರೀಲಂಕಾ ಕ್ರಿಕೆಟ್ ಮಂಡಳಿಯು ಪ್ರೇಕ್ಷಕರನ್ನು ಸ್ಟೇಡಿಯಂನತ್ತ ಸೆಳೆಯಲು ಭಾರತ-ಪಾಕಿಸ್ತಾನ ಪಂದ್ಯಗಳು ಸಹಿತ ಎಲ್ಲ ಸೂಪರ್-4 ಪಂದ್ಯಗಳ ಟಿಕೆಟ್ ಗಳ ದರವನ್ನು ಕಡಿಮೆ ಮಾಡಿದೆ. ಸೆ.17ರಂದು ನಡೆಯುವ ಫೈನಲ್ ಪಂದ್ಯದ ಟಿಕೆಟ್ ದರ ಕಡಿತ ಮಾಡಿಲ್ಲ. ಮಳೆ ಮುನ್ಸೂಚನೆ ಇದ್ದ ಹಿನ್ನೆಲೆಯಲ್ಲಿ ಜನರು ಪಂದ್ಯದಿಂದ ದೂರ ಉಳಿದಿರುವ ಸಾಧ್ಯತೆಯಿದೆ. ಹೀಗಾಗಿ ಸ್ಥಳೀಯ ಜನರಲ್ಲಿ ಪಂದ್ಯದ ಮೇಲೆ ಆಸಕ್ತಿ ಇಲ್ಲವಾಗಿದೆ ಎಂದು ಶ್ರೀಲಂಕಾ ಕ್ರಿಕೆಟ್ ಮಂಡಳಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.