"ಬಾಂಗ್ಲಾ ಒಳ ನುಸುಳುಕೋರರು" | ಹಿಮಂತ ಬಿಸ್ವಾ ಶರ್ಮಾ ಆರೋಪವನ್ನು ತಿರಸ್ಕರಿಸಿದ ಜಾರ್ಖಂಡ್ ತೀರ್ಪು
ಹಿಮಂತ ಬಿಸ್ವಾ ಶರ್ಮಾ | PC : PTI
ರಾಂಚಿ : ಜಾರ್ಖಂಡ್ ವಿಧಾನಸಭಾ ಚುನಾವಣೆಯಲ್ಲಿ ʼಬಾಂಗ್ಲಾದೇಶಿ ನುಸುಳುಕೋರರುʼ ಎಂಬ ವಿಷಯವನ್ನೇ ಕೇಂದ್ರೀಕರಿಸಿ ಚುನಾವಣಾ ಪ್ರಚಾರ ನಡೆಸಿದ್ದ ಬಿಜೆಪಿಗೆ ಮುಖಭಂಗವಾಗಿದ್ದು, ಅಸ್ಸಾಂ ಸಿಎಂ ಹಿಮಂತ ಬಿಸ್ವಾ ಶರ್ಮಾ ಅವರ ʼಬಾಂಗ್ಲಾದೇಶಿ ಒಳನುಸುಳುಕೋರರುʼ ಎಂಬ ಆರೋಪವನ್ನು ಜಾರ್ಖಂಡ್ ನ ಜನರು ತಿರಸ್ಕರಿಸಿದ್ದಾರೆ.
ಜಾರ್ಖಂಡ್ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯ ಸೋಲು ನನಗೆ ನೋವು ತಂದಿದೆ ಎಂದು ಜಾರ್ಖಂಡ್ ಬಿಜೆಪಿ ಉಸ್ತುವಾರಿ, ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಹೇಳಿದ್ದಾರೆ. ಚುನಾವಣೆಯಲ್ಲಿ ಅಭೂತಪೂರ್ವ ಗೆಲುವು ಸಾಧಿಸಿದ್ದಕ್ಕೆ ಜೆಎಂಎಂ ನೇತೃತ್ವದ ಮೈತ್ರಿಕೂಟವನ್ನು ಶರ್ಮಾ ಅಭಿನಂದಿಸಿದ್ದು, ಸಿಎಂ ಹೇಮಂತ್ ಸೊರೆನ್ ಅವರ ನೇತೃತ್ವದಲ್ಲಿ ಜಾರ್ಖಂಡ್ ಪ್ರಗತಿ ಮತ್ತು ಅಭಿವೃದ್ಧಿಯ ಪಥದಲ್ಲಿ ಸಾಗಲಿದೆ ಎಂಬ ವಿಶ್ವಾಸವಿದೆ ಎಂದು ಹೇಳಿದ್ದಾರೆ.
ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರ ನೇತೃತ್ವದಲ್ಲಿ ಜಾರ್ಖಂಡ್ ನಲ್ಲಿ ಚುನಾವಣಾ ಪ್ರಚಾರವನ್ನು ನಡೆಸಿದ್ದ ಬಿಜೆಪಿ ರಾಜ್ಯದಲ್ಲಿ ಹೀನಾಯವಾಗಿ ಸೋಲನ್ನು ಕಂಡಿದೆ. 81 ಸದಸ್ಯ ಬಲದ ಜಾರ್ಖಂಡ್ ವಿಧಾನಸಭೆಯಲ್ಲಿ ಜೆಎಂಎಂ ನೇತೃತ್ವದ INDIA ಮೈತ್ರಿಕೂಟವು ಮೂರನೇ ಎರಡರಷ್ಟು ಬಹುಮತದ ಗಡಿ ದಾಟಿ ಸರಕಾರ ರಚಿಸಲು ಸಿದ್ಧವಾಗಿದೆ.
ʼಬಾಂಗ್ಲಾ ನುಸುಳುಕೋರರುʼ ಜಾರ್ಖಂಡ್ ನಲ್ಲಿ ಬಿಜೆಪಿ ಪ್ರಚಾರದ ಕೇಂದ್ರ ವಿಷಯವಾಗಿತ್ತು. ರಾಜ್ಯದಲ್ಲಿ ಸದ್ಯ ಆಡಳಿತದಲ್ಲಿರುವ ಸರ್ಕಾರವು ಸಾಮಾನ್ಯ ಜನರ ಪರವಾಗಿರುವ ಬದಲು ಬಾಂಗ್ಲಾ ನುಸುಳುಕೋರರು, ಮಾಫಿಯಾ ಹಾಗೂ ದಲ್ಲಾಳಿಗಳ ಪರವಾಗಿದೆ ಎಂದು ಹಿಮಂತ್ ಬಿಸ್ವಾ ಶರ್ಮಾ ಆರೋಪಿಸಿದ್ದರು.
ಒಳನುಸುಳುಕೋರರಿಂದ ರಾಜ್ಯದ ಸಂಸ್ಕೃತಿಗೆ ಹಾನಿಯಾಗುತ್ತಿದೆ. ಬಿಜೆಪಿ ಅಧಿಕಾರಕ್ಕೆ ಬಂದರೆ ಎನ್ಆರ್ಸಿ ಜಾರಿಗೊಳಿಸಿ ನುಸುಳುಕೋರರನ್ನು ಹೊರಹಾಕುತ್ತೇವೆ. ಜೆಎಂಎಂ-ಕಾಂಗ್ರೆಸ್ ನೇತೃತ್ವದ ಸರ್ಕಾರ ಒಳನುಸುಳುವಿಕೆಯನ್ನು ತಡೆಯುವಲ್ಲಿ ಸಂಪೂರ್ಣ ವಿಫಲವಾಗಿದೆ. ಬುಡಕಟ್ಟು ಸಮುದಾಯದ ಯುವತಿಯರನ್ನು ನುಸುಳುಕೋರರು ಮದುವೆಯಾಗುತ್ತಿರುವುದನ್ನು ತಡೆಯಲು ಸರ್ಕಾರಕ್ಕೆ ಸಾಧ್ಯವಾಗುತ್ತಿಲ್ಲ. ಬಾಂಗ್ಲಾದೇಶದಿಂದ ಬರುವ ನುಸುಳುಕೋರರು ಜಾರ್ಖಂಡ್ ನಲ್ಲಿ ಬಂದು ನೆಲೆಸುತ್ತಿದ್ದಾರೆ, ಇದು ಆದಿವಾಸಿಗಳಿಗೆ ದೊಡ್ಡ ಬೆದರಿಕೆಯನ್ನುಂಟು ಮಾಡುತ್ತಿದೆ. ರಾಜ್ಯದಲ್ಲಿನ ಜನಸಂಖ್ಯಾ ಪ್ರಮಾಣ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಬುಡಕಟ್ಟು ಜನಾಂಗದ ಮಹಿಳೆಯರು ಮತ್ತು ಮುಸ್ಲಿಂ ನುಸುಳುಕೋರರ ನಡುವಿನ ವಿವಾಹವನ್ನು ನಿರ್ಬಂಧಿಸುವ ಕಾನೂನು ಜಾರಿಯಾಗಬೇಕಿದೆ ಎಂದು ಹಿಮಂತ ಬಿಸ್ವಾ ಚುನಾವಣಾ ಪ್ರಚಾರದುದ್ದಕ್ಕೂ ಹೇಳಿಕೊಂಡಿದ್ದರು.
ಜಾರ್ಖಂಡ್ ನ ಫಲಿತಾಂಶದ ಬಗ್ಗೆ ಪ್ರತಿಕ್ರಿಯಿಸಿದ ಕಾಂಗ್ರೆಸ್ ನಾಯಕ ಪವನ್ ಖೇರಾ, ಆರೆಸ್ಸೆಸ್ ಮತ್ತು ಬಿಜೆಪಿ, ಬುಡಕಟ್ಟು ಪ್ರದೇಶವನ್ನು ಪ್ರಯೋಗಾಲಯ ಮಾಡಲು ಪ್ರಯತ್ನಿಸಿದವು. ಆದರೆ ಜನರು ಈ ರೀತಿಯ ರಾಜಕೀಯವನ್ನು ಸಂಪೂರ್ಣವಾಗಿ ತಿರಸ್ಕರಿಸಿದ್ದಾರೆ ಮತ್ತು ಮತ್ತೊಮ್ಮೆ ಕೆಲಸ ಮಾಡುವ ಸರ್ಕಾರವನ್ನು ಉತ್ತಮ ಬಹುಮತದೊಂದಿಗೆ ಗೆಲ್ಲುವಂತೆ ಮಾಡಿದ್ದಾರೆ ಎಂದು ಹೇಳಿದ್ದಾರೆ.
ಬಿಜೆಪಿಯ ʼಬಾಂಗ್ಲಾ ನುಸುಳುಕೋರರುʼ ವಿಚಾರದ ಬದಲಿಗೆ ಕಾಂಗ್ರೆಸ್ ಯೋಜನೆಗಳನ್ನು ಕೇಂದ್ರೀಕರಿಸಿ ಪ್ರಚಾರ ನಡೆಸಿತ್ತು. ಹೇಮಂತ್ ಸೊರೆನ್ ನೇತೃತ್ವದ ರಾಜ್ಯ ಸರ್ಕಾರವು ಕೃಷಿ ಸಾಲವನ್ನು ಮನ್ನಾ, ಬಾಕಿ ಉಳಿದಿರುವ ವಿದ್ಯುತ್ ಬಿಲ್ ಗಳನ್ನು ಮನ್ನಾ ಮಾಡುವುದರ ಜೊತೆಗೆ ಸಾರ್ವತ್ರಿಕ ಪಿಂಚಣಿಯಂತಹ ಕಲ್ಯಾಣ ಯೋಜನೆಗಳನ್ನು ಪರಿಚಯಿಸಿದೆ. ಇದು ಜಾರ್ಖಂಡ್ ನಲ್ಲಿ ಮತ್ತೆ ಅಧಿಕಾರಕ್ಕೆ ಬರಲು INDIA ಮೈತ್ರಿಕೂಟಕ್ಕೆ ಹಾದಿ ಮಾಡಿಕೊಟ್ಟಿದೆ.