ಚುನಾವಣಾ ಆಯೋಗದ ಮುಖ್ಯಸ್ಥರ ವಿರುದ್ಧ ಪೊಲೀಸ್ ಪ್ರಕರಣಕ್ಕೆ ಆದೇಶಿಸಿದ್ದ ನ್ಯಾಯಾಧೀಶ ಅಮಾನತು
ಹೈದರಾಬಾದ್: ಭಾರತದ ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ವಿರುದ್ಧ ಎಫ್‍ಐಆರ್ ದಾಖಲಿಸಲು ಆದೇಶಿಸಿದ್ದ ವಿಶೇಷ ಸೆಷನ್ಸ್ ನ್ಯಾಯಾಧೀಶರೊಬ್ಬರನ್ನು ತೆಲಂಗಾಣ ಹೈಕೋರ್ಟ್ ಅಮಾನತುಗೊಳಿಸಿದೆ. ನ್ಯಾಯಾಧೀಶರದ್ದು ಆತುರದ ಕ್ರಮ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ.
ಎಂಪಿ/ಎಂಎಲ್‍ಎಗಳ ವಿಚಾರಣಾ ನ್ಯಾಯಾಲಯದಲ್ಲಿ ವಿಶೇಷ ಸೆಷನ್ಸ್ ನ್ಯಾಯಾಲಯದಲ್ಲಿ ನ್ಯಾಯಾಧೀಶರಾಗಿದ್ದ ಕೆ.ಜಯಕುಮಾರ್ ವಿರುದ್ಧ ಆಡಳಿತಾತ್ಮಕ ಕ್ರಮವಾಗಿ ಅಮಾನತು ಆದೇಶ ನೀಡಲಾಗಿದೆ. ಚುನಾವಣಾ ಆಯೋಗದ ಹಿರಿಯ ಅಧಿಕಾರಿಯೊಬ್ಬರು ಹೈಕೋರ್ಟ್‍ಗೆ ದೂರು ನೀಡಿದ ಹಿನ್ನೆಲೆಯಲ್ಲಿ ಕ್ರಮ ಕೈಗೊಳ್ಳಲಾಗಿದೆ ಎಂದು ಉನ್ನತ ಮೂಲಗಳು ಹೇಳಿವೆ.
ರಾಘವೇಂದ್ರ ರಾಜು ಎಂಬುವವರು ಭಾರತದ ಅಪರಾಧ ಸಂಹಿತೆ ಸೆಕ್ಷನ್ 200ರ ಅಡಿಯಲ್ಲಿ ಸಲ್ಲಿಸಿದ ದೂರಿನ ಆಧಾರದಲ್ಲಿ ನ್ಯಾಯಾಂಗ ಅಧಿಕಾರಿ, ಯಾವುದೇ ಪ್ರಾಥಮಿಕ ತನಿಖೆ ನಡೆಸದೇ ಅಥವಾ ದೂರುದಾರರ ಹೇಳಿಕೆಯನ್ನು ದಾಖಲಿಸಿಕೊಳ್ಳದೇ ಆತುರದಿಂದ ವರ್ತಿಸಿದ್ದಾರೆ ಎಂದು ಹೈಕೋರ್ಟ್ ಹೇಳಿದೆ.
ಆದ್ದರಿಂದ ಅಧಿಕಾರಿ ತನ್ನ ಕರ್ತವ್ಯ ನಿಭಾಯಿಸುವ ವೇಳೆ ಅನುಸರಿಸಬೇಕಾದ ವಿಧಿ ವಿಧಾನಗಳ ವಿಚಾರದಲ್ಲಿ ಗಂಭೀರ ಲೋಪವಾಗಿದೆ. ಆಡಳಿತಾತ್ಮಕ ಕ್ರಮವಾಗಿ ಹೈಕೋರ್ಟ್ ಈ ಅಮಾನತು ಆದೇಶ ಹೊರಡಿಸಿದೆ ಎಂದು ತಿಳಿದು ಬಂದಿದೆ. 2018ರ ರಾಜ್ಯ ವಿಧಾನಸಭಾ ಚುನಾವಣೆಯ ವೇಳೆ ಅಫಿಡವಿಟ್ ತಿರುಚಿದ ಆರೋಪದಲ್ಲಿ ತೆಲಂಗಾಣ ಅಬ್ಕಾರಿ ಸಚಿವ ವಿ.ಶ್ರೀನಿವಾಸ ಗೌಡ, ಮುಖ್ಯ ಚುನಾವಣಾ ಆಯುಕ್ತ ಕುಮಾರ್ ಹಾಗೂ ಇತರ ಅಧಿಕಾರಿಗಳ ವಿರುದ್ಧ ಸೆಷನ್ಸ್ ನ್ಯಾಯಾಲಯದ ಆದೇಶದಂತೆ ಆಗಸ್ಟ್ 11ರಂದು ಎಫ್‍ಐಆರ್ ದಾಖಲಿಸಲಾಗಿತ್ತು.