ರಾಮಮಂದಿರ ಉದ್ಘಾಟನೆಗೆ ರಜೆ ಘೋಷಿಸಿದ್ದ ಕಾಸರಗೋಡಿನ ಶಾಲೆಯ ವಿರುದ್ಧ ತನಿಖೆಗೆ ಕೇರಳ ಸರಕಾರ ಆದೇಶ
ಪಿಣರಾಯಿ ವಿಜಯನ್ | PHOTO: PTI
ತಿರುವನಂತಪುರಂ : ಅಯೋಧ್ಯೆಯಲ್ಲಿ ನಡೆದ ಪ್ರಾಣ ಪ್ರತಿಷ್ಠಾಪನೆ ಸಮಾರಂಭದ ನಿಮಿತ್ತ ಕಾಸರಗೋಡು ಜಿಲ್ಲೆಯ ಪ್ರೌಢಶಾಲೆಯಲ್ಲಿ ಸೋಮವಾರ ರಜೆ ಘೋಷಿಸಿದ್ದ ಕುರಿತು ಕೇರಳ ಸರಕಾರ ತನಿಖೆಗೆ ಆದೇಶಿಸಿದೆ ಎಂದು The Indian Express ವರದಿ ಮಾಡಿದೆ.
ಸಿಪಿಐ(ಎಂ) ಆಡಳಿತವಿರುವ ಕೇರಳದಲ್ಲಿ ಜನವರಿ 22 ರಂದು ರಾಮಮಂದಿರ ಪ್ರಾಣ ಪ್ರತಿಷ್ಠಾಪನೆ ಸಮಾರಂಭವನ್ನು ಆಚರಿಸಲು ಸರಕಾರಿ ಕಚೇರಿಗಳಿಗೆ ಮತ್ತು ಶಿಕ್ಷಣ ಸಂಸ್ಥೆಗಳಿಗೆ ಯಾವುದೇ ರಜೆಯನ್ನು ಘೋಷಿಸಿರಲಿಲ್ಲ. ಆದರೆ ಕಾಸರಗೋಡಿನ ಕೂಡ್ಲುವಿನಲ್ಲಿರುವ ಗೋಪಾಲಕೃಷ್ಣ ಪ್ರೌಢಶಾಲೆಯು ವಿದ್ಯಾರ್ಥಿಗಳಿಗೆ ರಜೆ ಘೋಷಿಸಿತ್ತು.
ಇದನ್ನು ಗಂಭೀರವಾಗಿ ಪರಿಗಣಿಸಿರುವ ಸಾಮಾನ್ಯ ಶಿಕ್ಷಣ ಸಚಿವ ವಿ ಶಿವನ್ಕುಟ್ಟಿ ಅವರು ಸಾರ್ವಜನಿಕ ಶಿಕ್ಷಣ ಮಹಾನಿರ್ದೇಶಕರಿಂದ ವರದಿ ಕೇಳಿದ್ದಾರೆ. ಶಿಕ್ಷಣ ಇಲಾಖೆಯಿಂದ ಯಾವುದೇ ಅಧಿಕೃತ ನಿರ್ದೇಶನದ ಹೊರತಾಗಿಯೂ ಶಾಲೆಗೆ ಏಕೆ ರಜೆ ಘೋಷಿಸಲಾಗಿದೆ ಎಂಬುದರ ಕುರಿತು 24 ಗಂಟೆಗಳ ಒಳಗೆ ವರದಿ ಸಲ್ಲಿಸುವಂತೆ ಮಹಾನಿರ್ದೇಶಕರಿಗೆ ತಿಳಿಸಲಾಗಿದೆ ಎಂದು ಸಚಿವರು ತಮ್ಮ ಫೇಸ್ಬುಕ್ ಪೋಸ್ಟ್ನಲ್ಲಿ ತಿಳಿಸಿದ್ದಾರೆ.
ಕೂಡ್ಲು ಶಾಲೆಯು ಬಿಜೆಪಿ ಆಡಳಿತವಿರುವ ಮಧೂರು ಪಂಚಾಯತ್ ನಲ್ಲಿದೆ. ಪಂಚಾಯತ್ ನ 20 ವಾರ್ಡ್ಗಳಲ್ಲಿ 13 ಬಿಜೆಪಿ ಮಂದಿ ಬಿಜೆಪಿ ಬೆಂಬಲಿತ ಸದಸ್ಯರಿದ್ದಾರೆ. ಬಿಜೆಪಿ ಆಡಳಿತದ ಪಂಚಾಯತ್ ಮತ್ತು ವಿದ್ಯಾರ್ಥಿಗಳ ಪೋಷಕರ ಒಂದು ವಿಭಾಗದಿಂದ ಒತ್ತಡದಿಂದಾಗಿ ಶಾಲೆಯ ಮುಖ್ಯೋಪಾಧ್ಯಾಯರು ಸೋಮವಾರ ರಜೆ ಘೋಷಿಸಲು ಒತ್ತಾಯಿಸಿದರು ಎಂದು ಮೂಲಗಳು ತಿಳಿಸಿವೆ. ಶಾಲೆಯು ಸೋಮವಾರ ರಜೆ ಘೋಷಿಸಲು ಇಲಾಖೆಯಿಂದ ಅನುಮತಿ ಕೋರಿತ್ತು. ಆದರೆ ಶಿಕ್ಷಣ ಇಲಾಖೆಯ ಜಿಲ್ಲಾ ಮಟ್ಟದ ಅಧಿಕಾರಿಗಳು ಬೇಡಿಕೆಯನ್ನು ತಿರಸ್ಕರಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಪ್ರಾಣ ಪ್ರತಿಷ್ಠಾ ಸಮಾರಂಭವು ರಾಜಕೀಯ ತಿರುವು ಪಡೆದುಕೊಂಡಿದರುವುದರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು.