ಹವಾಮಾನ ವೈಪರೀತ್ಯಗಳಿಗೂ ಹೆಚ್ಚುತ್ತಿರುವ ಕೌಟುಂಬಿಕ ಹಿಂಸಾಚಾರಕ್ಕೂ ಸಂಬಂಧ : ಸಂಶೋಧನಾ ವರದಿ
ಸಾಂದರ್ಭಿಕ ಚಿತ್ರ
ಹೊಸದಿಲ್ಲಿ : ಪ್ರವಾಹಗಳು ಮತ್ತು ಭೂಕುಸಿತಗಳಂತಹ ಹವಾಮಾನ ವೈಪರೀತ್ಯಗಳು ಮುಂದಿನ ಎರಡು ವರ್ಷಗಳಲ್ಲಿ ಕೌಟುಂಬಿಕ ಹಿಂಸಾಚಾರ ಹೆಚ್ಚಳಕ್ಕೆ ಕಾರಣವಾಗಲಿವೆ ಎಂದು 1993-2019ರ ನಡುವೆ 156 ದೇಶಗಳಲ್ಲಿಯ ಸಮೀಕ್ಷೆ ದತ್ತಾಂಶಗಳನ್ನು ವಿಶ್ಲೇಷಿಸಿರುವ ಸಂಶೋಧನಾ ವರದಿಯೊಂದು ಹೇಳಿದೆ.
ಬ್ರಿಟನ್ನ ಯೂನಿವರ್ಸಿಟಿ ಕಾಲೇಜ್ ಲಂಡನ್ನ ಸಂಶೋಧಕರ ನೇತೃತ್ವದ ತಂಡವು ಹೆಚ್ಚುತ್ತಿರುವ ಜಾಗತಿಕ ತಾಪಮಾನ ಸಮಸ್ಯೆಯನ್ನು ಬಗೆಹರಿಸಲು ಹವಾಮಾನ ಸಂಬಂಧಿತ ಕಾರ್ಯಕ್ರಮಗಳಲ್ಲಿ ಹೆಚ್ಚಿನ ಹಣವನ್ನು ವಿನಿಯೋಗಿಸುವಂತೆ ಮತ್ತು ಲಿಂಗ ಕ್ರಿಯಾಯೋಜನೆಗಳನ್ನು ಸೇರಿಸುವಂತೆ ದೇಶಗಳನ್ನು ಆಗ್ರಹಿಸಿದೆ. ಹವಾಮಾನ ವೈಪರೀತ್ಯ ಮತ್ತು ಹಿಂಸಾಚಾರ ಸಂಬಂಧವು ನೀತಿ ನಿರೂಪಕರು ಅರ್ಥ ಮಾಡಿಕೊಳ್ಳಲು ಸಾಧ್ಯವಿಲ್ಲದ ರೀತಿಯಲ್ಲಿ ಸಂಕೀರ್ಣ ಮತ್ತು ಸವಾಲಾಗಿ ಉಳಿದುಕೊಂಡಿದೆ ಎಂದು ಸಂಶೋಧಕರು ಹೇಳಿದ್ದಾರೆ.
ಆದರೂ,ವಿಶೇಷವಾಗಿ ಮಹಿಳೆಯರ ವಿರುದ್ಧ ಹಿಂಸಾಚಾರವನ್ನು ಸ್ವೀಕಾರಾರ್ಹ ಎಂದು ಪರಿಗಣಿಸಲಾಗಿರುವ ಪಿತೃಪ್ರಧಾನ ಸಮಾಜಗಳನ್ನು ಹೊಂದಿರುವ ದೇಶಗಳಲ್ಲಿ ಕೌಟುಂಬಿಕ ಹಿಂಸಾಚಾರವು ಹೆಚ್ಚು ಪ್ರಚಲಿತವಾಗಿದೆ ಮತ್ತು ತೀವ್ರವಾಗಿದೆ. ಹೆಚ್ಚಿನ ಜಿಡಿಪಿಯನ್ನು ಹೊಂದಿರುವ ದೇಶಗಳಲ್ಲಿ ಹಿಂಸಾಚಾರದ ಪ್ರಮಾಣ ಕಡಿಮೆ ಎಂದು ಸಂಶೋಧಕರು ತಮ್ಮ ವರದಿಯಲ್ಲಿ ಹೇಳಿದ್ದಾರೆ.
ಪಿಎಲ್ಒಎಸ್ ಕ್ಲೈಮೇಟ್ ಜರ್ನಲ್ನಲ್ಲಿ ಪ್ರಕಟಗೊಂಡಿರುವ ವಿಶ್ಲೇಷಣಾ ವರದಿಯು ಹೇಗೆ ಹವಾಮಾನ ವೈಪರೀತ್ಯಗಳು ಕೌಟುಂಬಿಕ ಹಿಂಸಾಚಾರದ ರಾಷ್ಟ್ರೀಯ ದರಗಳ ಮೇಲೆ ಹೇಗೆ ಪರಿಣಾಮ ಬೀರುತ್ತವೆ ಎನ್ನುವುದಕ್ಕೆ ಪುರಾವೆಗಳನ್ನು ಒದಗಿಸಿರುವ ಮೊದಲ ವರದಿಯಾಗಿದೆ ಎಂದು ಸಂಶೋಧಕರು ಹೇಳಿದ್ದಾರೆ.
ಹವಾಮಾನ ಸಂಬಂಧಿತ ವಿಪತ್ತುಗಳು ಕುಟುಂಬಗಳಲ್ಲಿ ಒತ್ತಡ ಮತ್ತು ಆಹಾರ ಅಭದ್ರತೆಯನ್ನು ಹೆಚ್ಚಿಸುತ್ತವೆ,ತನ್ಮೂಲಕ ಹಿಂಸಾಚಾರವನ್ನು ಹೆಚ್ಚಿಸುತ್ತವೆ. ಪೋಲಿಸರು ಮತ್ತು ನಾಗರಿಕ ಸಮಾಜ ವಿಪತ್ತುಗಳ ಮೇಲೆ ಹೆಚ್ಚಿನ ಗಮನವನ್ನು ಕೇಂದ್ರೀಕರಿಸುವುದರಿಂದ ಸಂಗಾತಿಯ ಹಿಂಸಾಚಾರವನ್ನು ಎದುರಿಸಲು ಸಾಮಾನ್ಯವಾಗಿ ಲಭ್ಯವಿರುವ ಸಾಮಾಜಿಕ ಸೌಲಭ್ಯಗಳನ್ನೂ ಹವಾಮಾನ ವೈಪರೀತ್ಯಗಳು ದುರ್ಲಭವಾಗಿಸುತ್ತವೆ ಎಂದು ವರದಿಯ ಅಗ್ರಲೇಖಕಿ ಯೂನಿರ್ಸಿಟಿ ಕಾಲೇಜ್ ಲಂಡನ್ನ ಇನ್ಸ್ಟಿಟ್ಯೂಟ್ ಆಫ್ ಗ್ಲೋಬಲ್ ಹೆಲ್ತ್ನ ಜೆನೆವೀವ್ ಮ್ಯಾನೆಲ್ ಹೇಳಿದ್ದಾರೆ.
ಹೆಚ್ಚುತ್ತಿರುವ ತಾಪಮಾನ ಮತ್ತು ತೇವಾಂಶ ಆಕ್ರಮಣಕಾರಿ ವರ್ತನೆಯನ್ನು ಹೆಚ್ಚಿಸುತ್ತವೆ ಎಂದು ಹಿಂದಿನ ಅಧ್ಯಯನಗಳು ಕಂಡುಕೊಂಡಿದ್ದವು.