ಸಿಧು ಮೂಸೆವಾಲಾ ಹತ್ಯೆಗೆ ಶಸ್ತ್ರಾಸ್ತ್ರ ಪೂರೈಸಿದ ವ್ಯಕ್ತಿ ಅಮೆರಿಕದಲ್ಲಿ ಬಂಧನ
Photo: Twitter
ಹೊಸದಿಲ್ಲಿ: ಪಂಜಾಬಿ ಗಾಯಕ ಸಿಧು ಮೂಸೆವಾಲಾ ಹತ್ಯೆ ಪ್ರಕರಣದ ತನಿಖೆಯಲ್ಲಿ ದೊಡ್ಡ ಯಶಸ್ಸು ಸಾಧಿಸಿರುವ ತನಿಖಾಧಿಕಾರಿಗಳು, ಮೂಸೆವಾಲಾ ಹತ್ಯೆಗೆ ಶಸ್ತ್ರಾಸ್ತ್ರ ಪೂರೈಸಿದ ವ್ಯಕ್ತಿಯನ್ನು ಅಮೆರಿಕದಲ್ಲಿ ಬಂಧಿಸಿದ್ದಾರೆ.
ಅಂತಾರಾಷ್ಟ್ರೀಯ ಶಸ್ತ್ರಾಸ್ತ್ರಗಳ ಡೀಲರ್ ಧರ್ಮನ್ಜ್ಯೋತ್ ಸಿಂಗ್ ಕಹ್ಲೋನ್ ಎಂಬಾತನನ್ನು ಕ್ಯಾಲಿಫೋರ್ನಿಯಾದಲ್ಲಿ ಬಂಧಿಸಲಾಗಿದ್ದು, ಈತ ಗ್ಯಾಂಗ್ ಸ್ಟರ್ ಗಳಾದ ಗೋಲ್ಡಿ ಬ್ರಾರ್ ಮತ್ತು ಲಾರೆನ್ಸ್ ಬಿಷ್ಣೋಯಿ ಜತೆ ನಿಕಟ ಸಂಪರ್ಕ ಹೊಂದಿದ್ದ ಎಂದು ಮೂಲಗಳು ಹೇಳಿವೆ.
ಈ ಇಬ್ಬರು ಗ್ಯಾಂಗ್ ಸ್ಟರ್ ಗಳು ಹತ್ಯೆ ಪ್ರಕರಣದ ಪ್ರಮುಖ ಆರೋಪಿಗಳು. ಬ್ರಾರ್ ಕೆನಡಾದಲ್ಲಿ ತಲೆಮರೆಸಿಕೊಂಡಿದ್ದಾನೆ ಎನ್ನಲಾಗಿದ್ದು, ಬಿಷ್ಣೋಯಿ ಭಟಿಂಡಾ ಕೇಂದ್ರ ಕಾರಾಗೃಹದಲ್ಲಿ ಬಂಧನದಲ್ಲಿದ್ದಾನೆ. ಸಿಧು ಮೂಸೆವಾಲಾ ಹತ್ಯೆಗೆ ಗೋಲ್ಡಿ ಬ್ರಾರ್ ಬಳಸಿದ್ದ ಎನ್ನಲಾದ ಶಸ್ತ್ರಾಸ್ತ್ರಗಳನ್ನು ಕಹ್ಲೋನ್ ಪೂರೈಕೆ ಮಾಡಿದ್ದ ಎಂದು ಪೊಲೀಸರು ವಿವರಿಸಿದ್ದಾರೆ.
ಮೂಸೆವಾಲಾ ಅವರಿಗೆ ನೀಡಿದ್ದ ಭದ್ರತಾ ಸುರಕ್ಷೆಯನ್ನು ರಾಜ್ಯ ಸರ್ಕಾರ ಮೊಟಕುಗೊಳಿಸಿದ ಮರುದಿನ ಅಂದರೆ ಕಳೆದ ವರ್ಷದ ಮೇ 29ರಂದು ಸಿಧು ಮೂಸೆವಾಲಾ (28) ಅವರನ್ನು ಪಂಜಾಬ್ನ ಮಾನ್ಸಾದಲ್ಲಿ ಹತ್ಯೆ ಮಾಡಲಾಗಿತ್ತು. ಕಹ್ಲೋನ್ ನನ್ನು ಭಾರತಕ್ಕೆ ಗಡಿಪಾರು ಮಾಡುವ ಸಂಬಂಧ ಸರ್ಕಾರ ಎಫ್ ಬಿಐ ಜತೆ ಮಾತುಕತೆ ನಡೆಸಿದೆ ಎಂದು ಭದ್ರತಾ ಏಜೆನ್ಸಿಯ ಮೂಲಗಳು ಹೇಳಿವೆ.
ಪಂಜಾಬ್ನ ಅಮೃತಸರ ಮೂಲದ ಈ ಶಸ್ತ್ರಾಸ್ತ್ರ ಡೀಲರ್, ಎಕೆ-47 ರೈಫಲ್ಗಳು ಸೇರಿದಂತೆ ಇತರ ಅತ್ಯಾಧುನಿಕ ಶಸ್ತ್ರಾಸ್ತ್ರಗಳನ್ನು ಕಳ್ಳಸಾಗಾಣಿಕೆ ಮಾಡುತ್ತಿದ್ದ ಆರೋಪ ಎದುರಿಸುತ್ತಿದ್ದಾರೆ. ಯುಎಪಿಎ ಪ್ರಕರಣದಲ್ಲಿ ಈತ ಪೊಲೀಸರಿಗೆ ಬೇಕಾದ ಆರೋಪಿ.