ಮಕ್ಕಳನ್ನು ಭಿಕ್ಷಾಟನೆಗೆ ಇಳಿಸಿದ ಮಹಾತಾಯಿ ಇದೀಗ ಪೊಲೀಸ್ ಅತಿಥಿ!
ಇಂಧೋರ್: ಒಂದು ನಿವೇಶನ, ಎರಡು ಮಹಡಿಯ ಮನೆ, ಒಂದು ಮೋಟರ್ ಸೈಕಲ್, 20 ಸಾವಿರ ರೂಪಾಯಿ ಮೌಲ್ಯದ ಒಂದು ಸ್ಮಾರ್ಟ್‍ಫೋನ್ ಮತ್ತು ಆರು ವಾರಗಳಲ್ಲಿ 2.5 ಲಕ್ಷ ರೂಪಾಯಿ ನಗದು. ಇಂದ್ರಾಬಾಯಿ ಎಂಬ ಮಹಿಳೆ ತನ್ನ ಮಕ್ಕಳನ್ನು ಭಿಕ್ಷಾಟನೆಗೆ ಇಳಿಸಿ ಸಂಪಾದಿಸಿದ ಸಂಪತ್ತು ಇದು. ಮಹಿಳೆಯನ್ನು ವಶಕ್ಕೆ ಪಡೆದ ಪೊಲೀಸರು ಈ ಅಚ್ಚರಿಯ ಅಂಕಿ ಅಂಶ ಬಿಡುಗಡೆ ಮಾಡಿದ್ದಾರೆ.
ಪದೇ ಪದೇ ಅಪರಾಧ ಎಸಗಿದ ಆರೋಪ ಎದುರಿಸುತ್ತಿರುವ ಮಹಿಳೆಯನ್ನು ಭಿಕ್ಷಾಟನೆ ಹಾಗೂ ಮಕ್ಕಳನ್ನು ಈ ಅಪರಾಧಕ್ಕೆ ಬಲವಂತಪಡಿಸಿದ ಆರೋಪದಲ್ಲಿ ಸೋಮವಾರ ಜೈಲಿಗೆ ಕಳುಹಿಸಲಾಗಿದೆ.
ಮಹಿಳೆಯ ಪುತ್ರಿಯೊಬ್ಬಳನ್ನು ಸರ್ಕಾರೇತರ ಸಂಸ್ಥೆಯೊಂದರ ಸುಪರ್ದಿಗೆ ನೀಡಲಾಗಿದೆ. "ಹಸಿವಿನಿಂದ ಬಳಲುವ ಬದಲು ನಾವು ಭಿಕ್ಷಾಟನೆಯನ್ನು ಆಯ್ಕೆ ಮಾಡಿಕೊಂಡೆವು. ಇದು ಕಳ್ಳತನಕ್ಕಿಂತ ಉತ್ತಮ" ಎನ್ನುವುದು ಮಹಿಳೆಯ ವಾದ. ಸಂಸ್ಥಾ ಪ್ರವೇಶ ಎಂಬ ಸರ್ಕಾರೇತರ ಸಂಸ್ಥೆಯ ಕಾರ್ಯಕರ್ತರು ಏಳು ವರ್ಷದ ಪುತ್ರಿಯನ್ನು ಬೀದಿಬದಿಯ ಭಿಕ್ಷಾಟನೆಯಿಂದ ಮುಕ್ತಗೊಳಿಸುವ ಸಂದರ್ಭ ಮಹಿಳೆ ಕಾರ್ಯಕರ್ತರ ಜತೆ ವಾಗ್ವಾದಕ್ಕೆ ಇಳಿದರು.
ಇಂಧೋರ್ ಮಹಾನಗರ ಪಾಲಿಕೆಯ ಜತೆ ಭಿಕ್ಷುಕರ ಪುನರ್ವಸತಿ ಕಾರ್ಯಕ್ಕಾಗಿ ಈ ಸ್ವಯಂಸೇವಾ ಸಂಸ್ಥೆ ಕೆಲಸ ಮಾಡುತ್ತಿದೆ. ಇದು ಸುಮಾರು 7000 ಭಿಕ್ಷುಕರ ಮಾಹಿತಿ ಕಲೆ ಹಾಕಿದ್ದು, ಈ ಪೈಕಿ ಶೇಕಡ 50ಕ್ಕಿಂತ ಹೆಚ್ಚು ಮಂದಿ ಮಕ್ಕಳು. ಇಂಧೋರ್ ನ ಪ್ರಮುಖ 38 ಸರ್ಕಲ್ ಗಳಲ್ಲಿ ಇವರು ಭಿಕ್ಷಾಟನೆ ಮಾಡುತ್ತಿದ್ದರು. ಒಂದು ಅಂದಾಜಿನ ಪ್ರಕಾರ, ಇವರು ವಾರ್ಷಿಕ 20 ಕೋಟಿ ರೂಪಾಯಿ ಸಂಗ್ರಹ ಮಾಡುತ್ತಾರೆ ಎನ್ನುವುದು ಸಂಘಟನೆಯ ಊಪಾಲಿ ಜೈನ್ ಅವರ ಅಭಿಪ್ರಾಯ.
ಏಳು ವರ್ಷದ ಬಾಲಕಿಯ ಜತೆಗೆ ಇಂದ್ರಾ ತನ್ನ 10, 8, 3 ಹಾಗೂ 2 ವರ್ಷದ ಇತರ ನಾಲ್ಕು ಮಕ್ಕಳನ್ನೂ ಈ ದಂಧೆಗೆ ತಳ್ಳಿದ್ದು ಬೆಳಕಿಗೆ ಬಂದಿದೆ. ಪ್ರಮುಖ ಹಿಂದೂ ದೇಗುಲವಾದ ಉಜ್ಜಯಿನಿ ಮಹಾಕಾಲ ದೇಗುಲಕ್ಕೆ ಹೋಗುವ ರಸ್ತೆ ಆರಂಭಾಗುವ ಲವ ಕುಶ ಚೌಕದಲ್ಲಿ ಈ ಮಕ್ಕಳು ಭಿಕ್ಷಾಟನೆ ಮಾಡುತ್ತಿದ್ದರು. ದೇಗುಲಕ್ಕೆ ತೆರಳುವ ಯಾತ್ರಾರ್ಥಿಗಳು ಸಾಮಾನ್ಯವಾಗಿ ಭಿಕ್ಷೆ ಹಾಕಿ ಮುಂದುವರಿಯುವ ಸಂಪ್ರದಾಯವಿದೆ. ಮಹಾಕಾಲ ಲೋಕ ನಿರ್ಮಾಣದ ಬಳಿಕ ಆದಾಯ ದುಪ್ಪಟ್ಟಾಗಿದೆ ಎಂದು ಇಂದ್ರಾ ಹೇಳುತ್ತಾರೆ. ದಿನಕ್ಕೆ 2500 ಮಂದಿ ಭೇಟಿ ನೀಡುತ್ತಿದ್ದ ಕ್ಷೇತ್ರಕ್ಕೆ ಇದೀಗ 1.75 ಲಕ್ಷ ಮಂದಿ ಭೇಟಿ ನೀಡುತ್ತಿದ್ದಾರೆ ಎಂದು ಅಧಿಕೃತ ಅಂಕಿ ಅಂಶಗಳು ಹೇಳುತ್ತವೆ.
ಫೆಬ್ರುವರಿ 9ರಂದು ಪುತ್ರಿಯ ಜತೆ ಭಿಕ್ಷೆ ಬೇಡುತ್ತಿದ್ದಾಗ ಮಹಿಳೆ ಸಿಕ್ಕಿಬಿದ್ದಿದ್ದಾಳೆ. ಆಕೆಯ ಪತಿ ಹಾಗೂ ಇತರ ಇಬ್ಬರು ತಪ್ಪಿಸಿಕೊಂಡಿದ್ದಾರೆ. ಮಹಿಳೆ ಬಳಿ 19600 ರೂಪಾಯಿ ಹಾಗೂ ಬಾಲಕಿ ಬಳಿ 600 ರೂಪಾಯಿ ಪತ್ತೆಯಾಗಿದೆ. ಬಂಧನಕ್ಕೆ 45 ದಿನ ಮೊದಲು ಒಟ್ಟು 2.5 ಲಕ್ಷ ರೂಪಾಯಿ ಆದಾಯ ಪಡೆದಿದ್ದಾಗಿ ಮಹಿಳೆ ಒಪ್ಪಿಕೊಂಡಿದ್ದಾಳೆ. ರಾಜಸ್ಥಾನದ ಕೋಟಾ ಬಳಿ ಎರಡು ಮಹಡಿಯ ಮನೆ ಹಾಗೂ ಕೃಷಿ ಭೂಮಿಯನ್ನೂ ಖರೀದಿಸಿದ್ದಾಳೆ.