ಚಲಿಸುತ್ತಿದ್ದ ರೈಲಿನಲ್ಲಿ ಚಳಿ ತಡೆಯಲಾಗದೇ ಬೆಂಕಿ ಹಾಕಿ ಚಳಿ ಕಾಯಿಸಿದ ಪ್ರಯಾಣಿಕರು!
ಉತ್ತರ ಪ್ರದೇಶದ ಆಲಿಗಢದಲ್ಲಿ ಬೆಳಕಿಗೆ ಬಂದ ಪ್ರಕರಣ, ಇಬ್ಬರು ವಶಕ್ಕೆ
: Photo: NDTV
ಆಲಿಗಢ: ಹೊಸದಿಲ್ಲಿಯಿಂದ ಹೊರಟಿದ್ದ ಸಂಪರ್ಕ ಕ್ರಾಂತಿ ಸೂಪರ್ಫಾಸ್ಟ್ ಎಕ್ಸ್ಪ್ರೆಸ್ನ ಬೋಗಿಯಿಂದ ಹೊಗೆ ಹೊರಹೊಮ್ಮುತ್ತಿದೆ ಎಂದು ಕ್ರಾಸಿಂಗ್ ಗೇಟ್ ಕಾವಲುಗಾರ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದ ನಂತರ, ಚಲಿಸುತ್ತಿದ್ದ ರೈಲಿನಲ್ಲಿ ಬೆಂಕಿ ಹಾಕಿ ಚಳಿ ಕಾಯಿಸಿದ ಇಬ್ಬರನ್ನು ಬಂಧಿಸಲಾಗಿದೆ ಎಂದು ಪಿಟಿಐ ಸುದ್ದಿ ಸಂಸ್ಥೆ ವರದಿ ಮಾಡಿದೆ.
ಆಲಿಗಢದಲ್ಲಿರುವ ರೈಲ್ವೇ ಸಂರಕ್ಷಣಾ ಪಡೆ (ಆರ್ಪಿಎಫ್) ಅಧಿಕಾರಿಯ ಪ್ರಕಾರ, ಜನವರಿ 3 ರಂದು ರಾತ್ರಿ ಬರ್ಹಾನ್ ರೈಲ್ವೆ ನಿಲ್ದಾಣದ ಬಳಿಯ ರೈಲ್ವೇ ಕ್ರಾಸಿಂಗ್ನಲ್ಲಿ ಗೇಟ್ ಕಾವಲುಗಾರರೋರ್ವರು ರೈಲಿನ ಕೋಚ್ನಿಂದ ಬೆಂಕಿ ಮತ್ತು ಹೊಗೆ ಬರುತ್ತಿರುವುದನ್ನು ಗಮನಿಸಿದ್ದಾರೆ. ಕೂಡಲೇ ಅವರು ಬರ್ಹಾನ್ ರೈಲ್ವೆ ನಿಲ್ದಾಣದಲ್ಲಿರುವ ತಮ್ಮ ಮೇಲಾಧಿಕಾರಿಗಳಿಗೆ ಮಾಹಿತಿ ನೀಡಿದರು. ತಕ್ಷಣ ಆರ್ಪಿಎಫ್ ತಂಡವು ರೈಲನ್ನು ಚಾಮ್ರೌಲಾದಲ್ಲಿರು ಮುಂದಿನ ನಿಲ್ದಾಣದಲ್ಲಿ ನಿಲ್ಲಿಸಲು ವ್ಯವಸ್ಥೆ ಮಾಡಿದರು.
ರೈಲಿನಲ್ಲಿ ಅವರು ತೀವ್ರ ತಪಾಸಣೆ ಮಾಡಿದಾಗ, ಕೆಲವು ಪ್ರಯಾಣಿಕರು ತೀವ್ರವಾದ ಚಳಿಯಿಂದ ರಕ್ಷಣೆ ಪಡೆಯಲು ಸೆಗಣಿಯ ಬೆರಣಿ ಬಳಸಿ ಜನರಲ್ ಕೋಚ್ನೊಳಗೆ ಬೆಂಕಿ ಹಾಕಿ ಚಳಿ ಕಾಯಿಸಿದ ವಿಚಾರ ಗಮನಕ್ಕೆ ಬಂದಿದೆ ಎಂದು ತಿಳಿದು ಬಂದಿದೆ. ಕೂಡಲೇ ಬೆಂಕಿ ನಂದಿಸಿದ ಆರ್ಪಿಎಫ್ ಸಿಬ್ಬಂದಿ, ಸಂಭಾವ್ಯ ಅವಘಡವನ್ನು ತಪ್ಪಿಸಿದರು ಎನ್ನಲಾಗಿದೆ. ನಂತರ ರೈಲು ಆಲಿಗಢ ನಿಲ್ದಾಣಕ್ಕೆ ತೆರಳಿತು. ಘಟನೆಯಲ್ಲಿ ಭಾಗಿಯಾದ 16 ಜನರನ್ನು ವಶಕ್ಕೆ ಪಡೆಯಲಾಯಿತು ಎಂದು ತಿಳಿದು ಬಂದಿದೆ.
ಫರಿದಾಬಾದ್ಗೆ ಮೂಲದ ಚಂದನ್ (23) ಮತ್ತು ದೇವೇಂದ್ರ (25) ಎಂಬ ಇಬ್ಬರು ಯುವಕರು ತಾವು ಚಳಿಕಾಯಿಸಲು ಬೆಂಕಿ ಹಾಕಿರುವುದನ್ನು ಒಪ್ಪಿಕೊಂಡಿದ್ದಾರೆ ಎಂದು ಆಲಿಗಢ ರೈಲ್ವೆ ನಿಲ್ದಾಣದ ಆರ್ಪಿಎಫ್ ಕಮಾಂಡೆಂಟ್ ರಾಜೀವ್ ವರ್ಮಾ ಶನಿವಾರ ಸುದ್ದಿಗಾರರಿಗೆ ತಿಳಿಸಿದರು.
ಬಂಧಿತರ ವಿರುದ್ಧ ಐಪಿಸಿ ಮತ್ತು ಭಾರತೀಯ ರೈಲ್ವೇ ಕಾಯಿದೆಯ ಸೆಕ್ಷನ್ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಅವರೊಂದಿಗೆ ಭಾಗಿಯಾಗಿದ್ದ ಇತರ 14 ಸಹ ಪ್ರಯಾಣಿಕರಿಗೆ ಎಚ್ಚರಿಕೆ ನೀಡಿ ಬಿಡುಗಡೆ ಮಾಡಲಾಗಿದೆ ಎಂದು ತಿಳಿದು ಬಂದಿದೆ.