ಜಮ್ಮುಕಾಶ್ಮೀರದ 370ನೇ ವಿಧಿ ರದ್ಧತಿ ಪ್ರಶ್ನಿಸಿ ಅರ್ಜಿ ಜುಲೈ 11ರಂದು ಸುಪ್ರೀಂನಲ್ಲಿ ವಿಚಾರಣೆ
Photo: PTI
ಹೊಸದಿಲ್ಲಿ : ಜಮ್ಮು ಹಾಗೂ ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡುವ 370ನೇ ವಿಧಿಯನ್ನು ಕೇಂದ್ರ ಸರಕಾರ ರದ್ದುಗೊಳಿಸಿ ಸುಮಾರು ನಾಲ್ಕು ವರ್ಷಗಳು ಕಳೆದಿವೆ. ಈಗ ಕೇಂದ್ರ ಸರಕಾರದ ನಿರ್ಧಾರ ಪ್ರಶ್ನಿಸಿ ಸಲ್ಲಿಸಲಾಗಿರುವ ಅರ್ಜಿಗಳನ್ನು ಸುಪ್ರೀಂ ಕೋರ್ಟ್ನ ಐವರು ಸದಸ್ಯರ ಸಂವಿಧಾನ ಪೀಠ ಜುಲೈ 11ರಂದು ವಿಚಾರಣೆ ನಡೆಸಲಿದೆ. ಜಮ್ಮು ಹಾಗೂ ಕಾಶ್ಮೀರಕ್ಕೆ ವಿಶೇಷ ಸ್ಥಾನ ಮಾನ ನೀಡುವ ವಿಧಿ 370 ಅನ್ನು ಕೇಂದ್ರ ಸರಕಾರ 2019 ಆಗಸ್ಟ್ 5ರಂದು ರದ್ದುಪಡಿಸಿತ್ತು. ಅಲ್ಲದೆ, ಜಮ್ಮು ಹಾಗೂ ಕಾಶ್ಮೀರವನ್ನು ಎರಡು ಕೇಂದ್ರಾಡಳಿತ ಪ್ರದೇಶಗಳಾಗಿ ವಿಭಜಿಸಿತ್ತು.
ಜಮ್ಮು ಹಾಗೂ ಕಾಶ್ಮೀರದ ‘‘ಶಾಶ್ವತ ನಿವಾಸಿಗಳು’’ ಎಂದು ವ್ಯಾಖ್ಯಾನಿಸಲಾದ ಜನರಿಗೆ ವಿಶೇಷ ಹಕ್ಕುಗಳನ್ನು ಹಾಗೂ ಸವಲತ್ತುಗಳನ್ನು ಖಾತ್ರಿಪಡಿಸುವ ವಿಧಿ 35ಎ ಅನ್ನು ಕೂಡ ಕೇಂದ್ರ ಸರಕಾರ ರದ್ದುಗೊಳಿಸಿತ್ತು. ಅಲ್ಲಿಂದ ಈ ಪ್ರದೇಶ ಕೇಂದ್ರ ಸರಕಾರದ ಆಡಳಿತದಲ್ಲಿ ಇದೆ. ಈ ಕುರಿತು 20ಕ್ಕೂ ಹೆಚ್ಚು ಅರ್ಜಿಗಳು ಸಲ್ಲಿಕೆಯಾಗಿವೆ. ಅರ್ಜಿದಾರದಲ್ಲಿ ವಕೀಲರು, ಕಾರ್ಯಕರ್ತರು, ರಾಜಕಾರಣಿಗಳು, ನಿವೃತ್ತ ನಾಗರಿಕ ಸೇವಕರು ಹಾಗೂ ಸರಕಾರೇತರ ಸಂಸ್ಥೆಗಳು ಸೇರಿವೆ.
ಈ ಪ್ರಕರಣದ ವಿಚಾರಣೆ ನಡೆಸುವ ಸುಪ್ರೀಂ ಕೋರ್ಟ್ನ ಪೀಠ ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ ಹಾಗೂ ನ್ಯಾಯಮೂರ್ತಿಗಳಾದ ಸಂಜಯ ಕೃಷ್ಣ ಕೌಲ್, ಸಂಜೀವ್ ಖನ್ನಾ, ಬಿ.ಆರ್. ಗವಾಯಿ ಹಾಗೂ ಸೂರ್ಯಕಾಂತ್ ಅವರನ್ನು ಒಳಗೊಂಡಿದೆ. ಈ ಪ್ರಕರಣವನ್ನು 2020 ಮಾರ್ಚ್ನಲ್ಲಿ ಕೊನೆಯದಾಗಿ ಪಟ್ಟಿ ಮಾಡಿದಾಗ, 7 ನ್ಯಾಯಾಧೀಶರ ನ್ಯಾಯಪೀಠಕ್ಕೆ ಶಿಫಾರಸು ಮಾಡಲು ನ್ಯಾಯಾಲಯ ನಿರಾಕರಿಸಿತ್ತು.