2 ರಾಜ್ಯಗಳನ್ನು ಬಿಟ್ಟು ಎಲ್ಲಾ ರಾಜ್ಯಗಳ ತಟ್ಟೆ ಖಾಲಿ | ರಾಜ್ಯಸಭೆಯಲ್ಲಿ ಮಲ್ಲಿಕಾರ್ಜುನ ಖರ್ಗೆ ವಾಗ್ದಾಳಿ
ನಿರ್ಮಲಾ ಸೀತಾರಾಮನ್ , ಮಲ್ಲಿಕಾರ್ಜುನ ಖರ್ಗೆ | PTI
ಹೊಸದಿಲ್ಲಿ : ಕೇಂದ್ರ ಸರಕಾರದ 2024-25ರ ಸಾಲಿನ ಬಜೆಟ್ ರಾಜ್ಯಗಳಿಗೆ ಅನ್ಯಾಯ ಮಾಡಿದೆ ಎಂದು ರಾಜ್ಯಸಭೆಯ ಪ್ರತಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಬುಧವಾರ ಆರೋಪಿಸಿದ್ದಾರೆ. ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಂಗಳವಾರ ಮಂಡಿಸಿದ ಬಜೆಟ್ ನಲ್ಲಿ ಬಿಹಾರ ಮತ್ತು ಆಂಧ್ರಪ್ರದೇಶ ಈ ಎರಡು ರಾಜ್ಯಗಳನ್ನು ಬಿಟ್ಟು ಉಳಿದ ಎಲ್ಲಾ ರಾಜ್ಯಗಳ ‘‘ತಟ್ಟೆಗಳು’’ ಖಾಲಿಯಿವೆ ಎಂದು ಅವರು ಹೇಳಿದ್ದಾರೆ.
‘‘ಯಾವುದೇ ರಾಜ್ಯಕ್ಕೆ ಏನೂ ಸಿಕ್ಕಿಲ್ಲ’’ ಎಂದು ತಮಿಳುನಾಡು, ಮಹಾರಾಷ್ಟ್ರ, ಪಂಜಾಬ್, ಹರ್ಯಾಣ, ರಾಜಸ್ಥಾನ, ಛತ್ತೀಸ್ಗಢ ಮತ್ತು ಕರ್ನಾಟಕ ರಾಜ್ಯಗಳನ್ನು ಹೆಸರಿಸುತ್ತಾ ಖರ್ಗೆ ಹೇಳಿದರು.
‘‘ಕೆಲವೇ ಕೆಲವು ಜನರನ್ನು ತೃಪ್ತಿಪಡಿಸಲು ಮತ್ತು ಕುರ್ಚಿ ಉಳಿಸಿಕೊಳ್ಳಲು ಈ ಬಜೆಟನ್ನು ಸಿದ್ಧಪಡಿಸಲಾಗಿದೆ’’ ಎಂದು ಖರ್ಗೆ ಆರೋಪಿಸಿದರು.
ರಾಜ್ಯಸಭೆಗೆ ಕರ್ನಾಟಕದಿಂದ ಆಯ್ಕೆಯಾಗಿರುವ ನಿರ್ಮಲಾ ಸೀತಾರಾಮನ್ರನ್ನು ತರಾಟೆಗೆ ತೆಗೆದುಕೊಂಡ ಕಾಂಗ್ರೆಸ್ ಅಧ್ಯಕ್ಷ, ‘‘ನಮ್ಮ ರಾಜ್ಯಕ್ಕೆ ಗರಿಷ್ಠ ಅನುದಾನ ಸಿಗಬಹುದು ಎಂಬ ನಿರೀಕ್ಷೆಯಲ್ಲಿ ನಾನಿದ್ದೆ. ಆದರೆ ನಮಗೆ ಏನೂ ಸಿಕ್ಕಿಲ್ಲ’’ ಎಂದು ಹೇಳಿದರು.
ಇದಕ್ಕೆ ಉತ್ತರಿಸಲು ನಿರ್ಮಲಾ ಸೀತಾರಾಮನ್ಗೆ ಅವಕಾಶ ಕೊಡಿ ಎಂದು ರಾಜ್ಯಸಭಾ ಸಭಾಪತಿ ಜಗದೀಪ್ ಧನ್ಕರ್ ಪ್ರತಿಪಕ್ಷ ನಾಯಕನಿಗೆ ಸೂಚಿಸಿದಾಗ, ‘‘ನನ್ನ ಮಾತುಗಳನ್ನು ಮೊದಲು ಮುಗಿಸುತ್ತೇನೆ. ಮಾತಾಜಿ ಮಾತನಾಡುವುದರಲ್ಲಿ ನಿಪುಣರು. ನನಗೆ ಅದು ಗೊತ್ತಿದೆ’’ ಎಂದು ಖರ್ಗೆ ಉತ್ತರಿಸಿದರು.
‘‘ಕುರ್ಚಿ ಉಳಿಸಿಕೊಳ್ಳುವುದಕ್ಕಾಗಿ ಇದೆಲ್ಲವನ್ನೂ ಮಾಡಲಾಗಿದೆ. ನಾವು ಅದನ್ನು ಖಂಡಿಸುತ್ತೇವೆ ಮತ್ತು ಅದನ್ನು ಪ್ರತಿಭಟಿಸುತ್ತೇವೆ. ‘ಇಂಡಿಯಾ’ ಮೈತ್ರಿಕೂಟದ ಎಲ್ಲಾ ಪಕ್ಷಗಳು ಪ್ರತಿಭಟನೆ ನಡೆಸಲಿವೆ. ಸಮತೋಲನ ಇಲ್ಲದಿದ್ದರೆ ಅಭಿವೃದ್ಧಿ ಹೇಗೆ ಸಾಧ್ಯವಾಗುತ್ತದೆ?’’ ಎಂದು ಹಿರಿಯ ಕಾಂಗ್ರೆಸ್ ನಾಯಕ ಹೇಳಿದರು.
ಆರೋಪ ನಿರಾಕರಿಸಿದ ಸಚಿವೆ
ತಾರತಮ್ಯದ ಆರೋಪಗಳನ್ನು ನಿರಾಕರಿಸಿದ ಹಣಕಾಸು ಸಚಿವೆ, ಒಂದು ಬಜೆಟ್ ಭಾಷಣದಲ್ಲಿ ಎಲ್ಲಾ ರಾಜ್ಯಗಳನ್ನು ಹೆಸರಿಸಲು ಸಾಧ್ಯವಿಲ್ಲ ಎಂದರು.
‘‘ಮಹಾರಾಷ್ಟ್ರದ ಉದಾಹರಣೆಯನ್ನು ತೆಗೆದುಕೊಳ್ಳಿ. ಮಧ್ಯಂತರ ಬಜೆಟ್ ಮತ್ತು ನಿನ್ನೆಯ ಬಜೆಟ್ನ ನಡುವೆ, ವದವನ್ನಲ್ಲಿ ಬೃಹತ್ ಬಂದರನ್ನು ಸ್ಥಾಪಿಸುವ ಮಹತ್ವದ ನಿರ್ಧಾರವೊಂದನ್ನು ಸಚಿವ ಸಂಪುಟ ಅಂಗೀಕರಿಸಿದೆ’’ ಎಂದು ಅವರು ಹೇಳಿದರು.
ಪ್ರತಿಪಕ್ಷಗಳ ಆರೋಪವನ್ನು ‘‘ಅತಿರೇಕ’’ ಎಂದು ಬಣ್ಣಿಸಿದ ನಿರ್ಮಲಾ, ಕಾಂಗ್ರೆಸ್ ಪಕ್ಷವು ಉದ್ದೇಶಪೂರ್ವಕವಾಗಿ ಸಾರ್ವಜನಿಕರನ್ನು ತಪ್ಪು ದಾರಿಗೆಳೆಯುತ್ತಿದೆ ಎಂದು ಆರೋಪಿಸಿದರು.