‘ಸಾರ್ವಜನಿಕರಿಗೆ ಸಂದೇಶ ರವಾನಿಸಲು’ ಅತ್ಯಾಚಾರ ಪ್ರಕರಣದ ಆರೋಪಿಯ ಪರೇಡ್ ನಡೆಸಿದ ಪೊಲೀಸರು
ಸಾಂದರ್ಭಿಕ ಚಿತ್ರ \ Photo: PTI
ನವಸಾರಿ: "ಯಾರೂ ಕಾನೂನಿಗಿಂತ ಅತೀತರಲ್ಲ" ಎಂಬ ಸಂದೇಶ ರವಾನಿಸಲು ಬುಧವಾರ ಪೊಲೀಸರು 22 ವರ್ಷದ ಮಹಿಳೆಯ ಅತ್ಯಾಚಾರವೆಸಗಿದ ಆರೋಪ ಹೊಂದಿರುವ ವ್ಯಕ್ತಿಯನ್ನು ನವಸಾರಿ ಜಿಲ್ಲೆಯ ಖೇರ್ಗಮ್ ಗ್ರಾಮದಲ್ಲಿ ಪರೇಡ್ ಮಾಡಿಸಿರುವ ಘಟನೆ ನಡೆದಿದೆ ಎಂದು indianexpress.com ವರದಿ ಮಾಡಿದೆ.
ಜೂನ್ 24ರಂದು ಅತ್ಯಾಚಾರ ಸಂತ್ರಸ್ತೆಯು ಖೇರ್ಗಮ್ ಪೊಲೀಸ್ ಠಾಣೆಯಲ್ಲಿ ಅತ್ಯಾಚಾರದ ದೂರನ್ನು ದಾಖಲಿಸಿದ ನಂತರ ಸೋಮವಾರದಂದು ಖೇರ್ಗಮ್ ಗ್ರಾಮದ ನಿವಾಸಿಯಾದ ಅಸೀಮ್ ಶೇಖ್(35) ಎಂಬಾತನನ್ನು ಪೊಲೀಸರು ಬಂಧಿಸಿದ್ದರು. ಸ್ಥಳೀಯ ನ್ಯಾಯಾಲಯವೊಂದು ಜುಲೈ 13ರವರೆಗೆ ಆರೋಪಿಯನ್ನು ಪೊಲೀಸರ ವಶಕ್ಕೆ ಒಪ್ಪಿಸಿ ಆದೇಶಿಸಿದೆ.
ಬುಧವಾರ ಮಧ್ಯಾಹ್ನ ಪೊಲೀಸರಿಂದ ಸುತ್ತುವರಿದಿದ್ದ ಅತ್ಯಾಚಾರ ಆರೋಪಿಯನ್ನು ಎರಡು ಕಿಮೀ ದೂರ ಪರೇಡ್ ನಡೆಸಲಾಗಿದೆ. "ಈ ವ್ಯಕ್ತಿಯು ಇಡೀ ಗ್ರಾಮದಲ್ಲಿ ಭೀತಿ ಸೃಷ್ಟಿಸಿದ್ದ ಮತ್ತು ಎಲ್ಲರೂ ಈತನಿಗೆ ಹೆದರುತ್ತಿದ್ದರು. ಯಾರೂ ಕಾನೂನಿಗಿಂತ ಅತೀತರಲ್ಲ ಹಾಗೂ ಅಪರಾಧ ಕೃತ್ಯಗಳಲ್ಲಿ ತೊಡಗಿದವರ ವಿರುದ್ಧ ಕಠಿಣವಾಗಿ ವರ್ತಿಸಲಾಗುವುದು ಎಂಬ ಸಂದೇಶವನ್ನು ಸಾರ್ವಜನಿಕರಿಗೆ ರವಾನಿಸಲು ಗ್ರಾಮದ ಮಾರುಕಟ್ಟೆ ಪ್ರದೇಶದಲ್ಲಿ ಆತನನ್ನು ಪರೇಡ್ ನಡೆಸಲಾಯಿತು. ಆತನ ವಿರುದ್ಧ ಜಗಳ, ಕಳ್ಳಭಟ್ಟಿ ಮದ್ಯ ವ್ಯವಹಾರ ಸೇರಿದಂತೆ 18 ವಿವಿಧ ಅಪರಾಧ ಪ್ರಕರಣಗಳು ದಾಖಲಾಗಿವೆ" ಎಂದು ಜಿಲ್ಲಾ ಸ್ಥಳೀಯ ಅಪರಾಧ ವಿಭಾಗದ ಪೊಲೀಸ್ ಇನ್ಸ್ಪೆಕ್ಟರ್ ಡಿ.ಎಸ್.ಕೋರಟ್ ತಿಳಿಸಿದ್ದಾರೆ.
ಪೊಲೀಸರ ಕ್ರಮಕ್ಕೆ ಹರ್ಷ ವ್ಯಕ್ತಪಡಿಸಿದ ಸ್ಥಳೀಯರು ಪಟಾಕಿಗಳನ್ನು ಸಿಡಿಸಿ, ಪೊಲೀಸರ ಮೇಲೆ ಹೂಮಳೆ ಸುರಿಸಿ ತಮ್ಮ ಸಂಭ್ರಮ ವ್ಯಕ್ತಪಡಿಸಿದರು ಎಂದು ಸ್ಥಳೀಯ ನಿವಾಸಿಯಾದ ಶೋಯೆಬ್ ಶೇಖ್ The Indian Express ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ.
ಅತ್ಯಾಚಾರ ಸಂತ್ರಸ್ತೆಯ ದೂರನ್ನು ಅಧರಿಸಿ ಪೊಲೀಸರು ಆರೋಪಿಯ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 376(2)(n) (ಒಬ್ಬಳೇ ಮಹಿಳೆಯ ಮೇಲೆ ಪದೇ ಪದೇ ಅತ್ಯಾಚಾರ), ಸೆಕ್ಷನ್ 323 (ಸ್ವಯಂಪ್ರೇರಿತವಾಗಿ ಘಾಸಿ ಮಾಡಿದ್ದಕ್ಕೆ ಶಿಕ್ಷೆ), ಸೆಕ್ಷನ್ 504 (ನಂಬಿಕೆದ್ರೋಹವನ್ನು ಪ್ರಚೋದಿಸಲು ಉದ್ದೇಶಪೂರ್ವಕ ಅವಮಾನ) ಹಾಗೂ ಸೆಕ್ಷನ್ 506(2) (ಅಪರಾಧದ ಉದ್ದೇಶಕ್ಕಾಗಿ ಶಿಕ್ಷೆ) ಅಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.