10 ಗ್ರಾಂ ಚಿನ್ನದ ಬೆಲೆ 5000 ರೂ.ವರೆಗೆ ಕುಸಿತ!
ಚಿಲ್ಲರೆ ಹೂಡಿಕೆದಾರರ ಮೊಗದಲ್ಲಿ ಸಂತಸ
ಸಾಂದರ್ಭಿಕ ಚಿತ್ರ
ಹೊಸದಿಲ್ಲಿ : ಬಜೆಟ್ ನಲ್ಲಿ ಕೇಂದ್ರ ಸರಕಾರವು ಚಿನ್ನದ ಮೇಲಿನ ಪ್ರಾಥಮಿಕ ಸುಂಕವನ್ನು ಕಡಿತಗೊಳಿಸಿರುವುದರಿಂದ, ಚಿನ್ನದ ದರ ದಿಢೀರ್ ಎಂದು ಶೇ. 7ರಷ್ಟು ಅಥವಾ ಪ್ರತಿ 10 ಗ್ರಾಂಗೆ ರೂ. 5,000ವರೆಗೆ ಇಳಿಕೆ ಕಂಡಿದೆ. ಚಿನ್ನದ ಮೇಲೆ ಹೆಚ್ಚು ಜನರು ಆಭರಣ ಖರೀದಿಯ ರೂಪದಲ್ಲಿ ಹಾಗೂ ಹಣಕಾಸಿನ ಹೂಡಿಕೆಯ ರೂಪದಲ್ಲಿ ಬಂಡವಾಳ ಹೂಡಿಕೆ ಮಾಡಲು ಉತ್ತೇಜನ ದೊರೆತಿದೆ ಎಂದು ತಜ್ಞರು ಅಭಿಪ್ರಾಯ ಪಡುತ್ತಾರೆ.
ಚಿನ್ನದ ಮೇಲಿನ ಸುಂಕವನ್ನು ಕಡಿತಗೊಳಿಸಿರುವುದರಿಂದ ಆಮದು ಮತ್ತಷ್ಟು ಅಗ್ಗವಾಗಿದೆ. ಈ ಕ್ರಮದಿಂದಾಗಿ ತೀವ್ರ ಸ್ವರೂಪದಲ್ಲಿ ಏರಿಕೆಯಾಗಿದ್ದ ಚಿನ್ನದ ಕಳ್ಳಸಾಗಣೆ ಕಡಿಮೆಯಾಗಿ, ಆಭರಣ ವಲಯದ ಪ್ರಗತಿಯಾಗಲಿದೆ ಎಂದು ವಿಶ್ಲೇಷಕರು ಹೇಳುತ್ತಾರೆ.
ಈ ಕುರಿತು PTI ಸುದ್ದಿ ಸಂಸ್ಥೆಗೆ ಪ್ರತಿಕ್ರಿಯಿಸಿರುವ ಎಲ್ ಕೆ ಪಿ ಸೆಕ್ಯೂರಿಟೀಸ್ ನ ಉಪಾಧ್ಯಕ್ಷ, ಸರಕು ಹಾಗೂ ನಗದು ಸಂಶೋಧನಾ ವಿಶ್ಲೇಷಕ ಜತೀನ್ ತ್ರಿವೇದಿ, “ಚಿನ್ನದ ಮೇಲಿನ ಪ್ರಾಥಮಿಕ ಸುಂಕವನ್ನು ಕಡಿತಗೊಳಿಸಿರುವುದರಿಂದ ಹಳದಿ ಲೋಹದ ದರವು ಮತ್ತಷ್ಟು ಅಗ್ಗವಾಗಲಿದೆ. ಈ ದಿಢೀರ್ ಬದಲಾವಣೆಯು ದುರ್ಬಲ ಮಾರುಕಟ್ಟೆ ಪ್ರವೃತ್ತಿಗೆ ಕಾರಣವಾಗಬಹುದಾದರೂ, ಚಿನ್ನಕ್ಕೆ ಮತ್ತಷ್ಟು ಆಕರ್ಷಕ ದರ ನಿಗದಿಪಡಿಸುವ ಮೂಲಕ ಚಿಲ್ಲರೆ ಹೂಡಿಕೆದಾರರಿಗೆ ಲಾಭವಾಗಲಿದೆ” ಎಂದು ಹೇಳಿದ್ದಾರೆ.
ಇದೇ ಬಗೆಯ ಅನಿಸಿಕೆಯನ್ನು ಹಂಚಿಕೊಳ್ಳುವ ಯೂನಿಮೋನಿ ಫೈನಾನ್ಶಿಯಲ್ ಸರ್ವಿಸಸ್ ಸಂಸ್ಥೆಯ ನಿರ್ದೇಶಕ ಹಾಗೂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೃಷ್ಣನ್ ಆರ್, ಅಗ್ಗದ ದರದಿಂದ ಹೆಚ್ಚು ಜನರು ಸರಕಿನ ರೂಪದಲ್ಲಿ ಹಾಗೂ ಹಣಕಾಸು ಹೂಡಿಕೆಯ ರೂಪದಲ್ಲೂ ಚಿನ್ನದ ಮೇಲೆ ಹೂಡಿಕೆ ಮಾಡಲು ಪ್ರೋತ್ಸಾಹ ದೊರೆತಂತಾಗಿದೆ. ಹಣದುಬ್ಬರ ಹಾಗೂ ಹಣದ ಅಪಮೌಲ್ಯದ ಸಂದರ್ಭದಲ್ಲಿ ಈ ಪ್ರವೃತ್ತಿ ಪದೇ ಪದೇ ಕಂಡು ಬರುತ್ತದೆ ಎಂದು ಹೇಳುತ್ತಾರೆ.
ಚಿನ್ನ ಹಾಗೂ ಬೆಳ್ಳಿಯ ಮೇಲಿನ ಪ್ರಾಥಮಿಕ ಸುಂಕವನ್ನು ಶೇ. 15 ರಿಂದ ಶೇ. 6 ಕ್ಕೆಕಡಿತಗೊಳಿಸಲಾಗುವುದು ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಈ ಬಾರಿಯ ಬಜೆಟ್ ನಲ್ಲಿ ಪ್ರಕಟಿಸಿದ ಬೆನ್ನಿಗೇ, ರಾಷ್ಟ್ರ ರಾಜಧಾನಿಯಲ್ಲಿ ಮಂಗಳವಾರ ಚಿನ್ನದ ದರ ಪ್ರತಿ 10 ಗ್ರಾಂಗೆ ರೂ. 3,350ರಷ್ಟು ಇಳಿಕೆ ಕಂಡು, ರೂ. 72,300 ತಲುಪಿತ್ತು.
ಆಲ್ ಇಂಡಿಯಾ ಸರಾಫಾ ಅಸೋಸಿಯೇಷನ್ ಪ್ರಕಾರ, ಚಿನ್ನದ ದರದಲ್ಲಿನ ಇಳಿಕೆ ಪ್ರವೃತ್ತಿ ಮತ್ತಷ್ಟು ಮುಂದುವರಿದು, ಬುಧವಾರ ಪ್ರತಿ 10 ಗ್ರಾಂಗೆ ರೂ. 650ರಷ್ಟು ಇಳಿಕೆಯಾಗಿತ್ತು. ಗುರುವಾರ ಮತ್ತಷ್ಟು ತೀವ್ರ ಕುಸಿತ ದಾಖಲಿಸಿದ ಚಿನ್ನದ ದರವು ಪ್ರತಿ ಗ್ರಾಂಗೆ ರೂ. 1,000ದಷ್ಟು ಇಳಿಕೆ ಕಂಡು, ರೂ. 70,650 ತಲುಪಿತ್ತು.
ಸುಂಕ ಕಡಿತದ ನಂತರ, ಜುಲೈ 23ರಂದು ರೂ. 3,350ರಷ್ಟು ಇಳಿಕೆ ಕಂಡು ರೂ. 72,300ಕ್ಕೆ ಅಂತ್ಯಗೊಂಡಿದ್ದ ಚಿನ್ನದ ದರವು, ಕಳೆದ ಸತತ ಮೂರು ಅವಧಿಯಲ್ಲಿ ಪ್ರತಿ 10 ಗ್ರಾಂಗೆ ರೂ. 5,000 ಅಥವಾ ಶೇ. 7.1ರಷ್ಟು ಇಳಿಕೆ ಕಂಡಿದೆ.
ಇದಲ್ಲದೆ, ಶೇ. 99.5 ಪರಿಶುದ್ಧತೆಯ ಚಿನ್ನದ ದರವು ಗುರುವಾರದಂದು ಪ್ರತಿ 10 ಗ್ರಾಂಗೆ ರೂ. 1,000ದಷ್ಟು ಇಳಿಕೆ ಕಂಡು, ರೂ. 70,300ಕ್ಕೆ ತಲುಪಿತ್ತು. ಕಳೆದ ಮೂರು ಅವಧಿಯಲ್ಲಿ ಚಿನ್ನದ ದರವು ಪ್ರತಿ 10 ಗ್ರಾಂಗೆ ರೂ. 5,000ದಷ್ಟು ಇಳಿಕೆ ದಾಖಲಿಸಿದೆ.
ಇದರೊಂದಿಗೆ, ಗುರುವಾರ ಬೆಳ್ಳಿಯ ದರ ಕೂಡಾ ಪ್ರತಿ ಕೆಜಿಗೆ ರೂ. 3,500ರಷ್ಟು ಇಳಿಕೆ ಕಂಡಿದ್ದು, ರೂ. 84,000ಕ್ಕೆ ತಲುಪಿದೆ. ಕಳೆದ ಮೂರು ಅವಧಿಯಲ್ಲಿ ಈ ಬಿಳಿ ಲೋಹದ ದರವು ತೀವ್ರವಾಗಿ ಕುಸಿತ ಕಂಡಿದ್ದು, ಪ್ರತಿ ಕೆಜಿಗೆ ರೂ. 7,000 ಅಥವಾ ಶೇ. 8.3ರಷ್ಟು ಇಳಿಕೆಯಾಗಿದೆ. ಇದರಿಂದ ಬೆಳ್ಳಿಯ ದರವು ಪ್ರತಿ ಕೆಜಿಗೆ ರೂ. 91,000ದಿಂದ ರೂ. 84,000ಕ್ಕೆ ಇಳಿಕೆಯಾದಂತಾಗಿದೆ.