ಹಿಮಾಚಲಪ್ರದೇಶದ ಮೂವರು ಪಕ್ಷೇತರ ಶಾಸಕರ ರಾಜೀನಾಮೆ ಕೊನೆಗೂ ಅಂಗೀಕಾರ
ಕುಲದೀಪ ಸಿಂಗ್ ಪಠಾನಿಯಾ | PC : ANI
ಶಿಮ್ಲಾ : ಫೆಬ್ರವರಿ 27ರಂದು ನಡೆದಿದ್ದ ರಾಜ್ಯಸಭಾ ಚುನಾವಣೆಯಲ್ಲಿ ಬಿಜೆಪಿ ಪರವಾಗಿ ಮತ ಚಲಾಯಿಸಿದ್ದ ಮೂವರು ಪಕ್ಷೇತರ ಶಾಸಕರ ರಾಜೀನಾಮೆಗಳನ್ನು ಹಿಮಾಚಲ ಪ್ರದೇಶ ವಿಧಾನಸಭಾ ಸ್ಪೀಕರ್ ಕುಲದೀಪ ಸಿಂಗ್ ಪಠಾನಿಯಾ ಅವರು ಕೊನೆಗೂ ಸೋಮವಾರ ಅಂಗೀಕರಿಸಿದ್ದಾರೆ.
ರಾಜೀನಾಮೆಗಳನ್ನು ಅಂಗೀಕರಿಸಲಾಗಿದೆ ಮತ್ತು ಈ ಮೂವರು ಶಾಸಕರು ತಕ್ಷಣ ಜಾರಿಗೆ ಬರುವಂತೆ 14ನೇ ವಿಧಾನಸಭೆಯ ಸದಸ್ಯತ್ವವನ್ನು ಕಳೆದುಕೊಂಡಿದ್ದಾರೆ ಎಂದು ಪಠಾನಿಯಾ ಸುದ್ದಿಗಾರರಿಗೆ ತಿಳಿಸಿದರು.
ಫೆ.27ರ ರಾಜ್ಯಸಭಾ ಚುನಾವಣೆಯಲ್ಲಿ ಪಕ್ಷೇತರ ಶಾಸಕರಾದ ಹೋಷಿಯಾರ್ ಸಿಂಗ್, ಆಶಿಷ್ ಶರ್ಮಾ ಮತ್ತು ಕೆ.ಎಲ್.ಠಾಕೂರ್ ಅವರು ಆರು ಬಂಡಾಯ ಕಾಂಗ್ರೆಸ್ ಶಾಸಕರೊಂದಿಗೆ ಬಿಜೆಪಿ ಅಭ್ಯರ್ಥಿ ಹರ್ಷ ಮಹಾಜನ ಪರವಾಗಿ ಮತಗಳನ್ನು ಚಲಾಯಿಸಿದ್ದರು.
ಈ ಮೂವರೂ ಶಾಸಕರು ಮಾ.22ರಂದೇ ತಮ್ಮ ವಿಧಾನಸಭಾ ಸದಸ್ಯತ್ವಕ್ಕೆ ರಾಜೀನಾಮೆ ಸಲ್ಲಿಸಿದ್ದರು. ಆದರೆ ಈ ಶಾಸಕರು ಒತ್ತಡಕ್ಕೆ ಸಿಲುಕಿ ನಿರ್ಧಾರವ್ನ್ನು ತೆಗೆದುಕೊಂಡಿದ್ದಾರೆ, ಸ್ವಯಂಪ್ರೇರಿತವಾಗಿ ಅಲ್ಲ ಎಂದು ಕಾಂಗ್ರೆಸ್ ಶಾಸಕಾಂಗ ಪಕ್ಷವು ತನಗೆ ದೂರು ಸಲ್ಲಿಸಿದೆ ಎಂದು ಹೇಳಿದ್ದ ಸ್ಪೀಕರ್ ಅವರ ರಾಜೀನಾಮೆಗಳನ್ನು ಅಂಗೀಕರಿಸಿರಲಿಲ್ಲ.
ಮಾರ್ಚ್ 23ರಂದು ಬಿಜೆಪಿಗೆ ಸೇರ್ಪಡೆಗೊಂಡಿದ್ದ ಈ ಶಾಸಕರು, ತಮ್ಮ ರಾಜೀನಾಮೆಗಳನ್ನು ಅಂಗೀಕರಿಸಲು ಸ್ಪೀಕರ್ ಗೆ ನಿರ್ದೇಶನ ಕೋರಿ ಹಿಮಾಚಲ ಪ್ರದೇಶ ಉಚ್ಚ ನ್ಯಾಯಾಲಯದ ಮೆಟ್ಟಿಲೇರಿದ್ದರು. ಆದರೆ ಈ ನಿಟ್ಟಿನಲ್ಲಿ ನ್ಯಾಯಾಲಯವು ಸ್ಪೀಕರ್ಗೆ ನಿರ್ದೇಶನ ನೀಡಬಹುದೇ ಎಂಬ ಬಗ್ಗೆ ವಿಭಿನ್ನ ಅಭಿಪ್ರಾಯಗಳು ವ್ಯಕ್ತವಾಗಿದ್ದರಿಂದ ಪ್ರಕರಣವನ್ನು ಮೂರನೇ ನ್ಯಾಯಾಧೀಶರಿಗೆ ಒಪ್ಪಿಸಲಾಗಿತ್ತು. ಅದಿನ್ನೂ ನ್ಯಾಯಾಲಯದಲ್ಲಿ ಬಾಕಿಯಿದೆ.