ಜಿಡಿಪಿಯಲ್ಲಿ ಕೃಷಿಯ ಪಾಲು ಶೇ.15ಕ್ಕೆ ಕುಸಿತ
Photo: PTI
ಹೊಸದಿಲ್ಲಿ: 2022-23ನೇ ಸಾಲಿನಲ್ಲಿ ಭಾರತದ ಒಟ್ಟು ಆಂತರಿಕ ಉತ್ಪನ್ನ (ಜಿಡಿಪಿ)ದಲ್ಲಿ ಕೃಷಿ ವಲಯದ ಪಾಲು ಶೇ.15ಕ್ಕೆ ಕುಸಿದಿದೆ. 1990-91ರ ಸಾಲಿನಲ್ಲಿ ದೇಶದ ಜಿಡಿಪಿಯ ಶೇ.35ರಷ್ಟಿದ್ದ ಕೃಷಿ ಕ್ಷೇತ್ರದ ಪಾಲು ಸತತ ಕುಸಿತವನ್ನೇ ಕಾಣುತ್ತಾ ಬಂದಿದೆ. ಕೈಗಾರಿಕಾ ಹಾಗೂ ಸೇವಾವಲಯದಲ್ಲಿ ತ್ವರಿತ ಬೆಳವಣಿಗೆಯಿಂದಾಗಿ ಜಿಡಿಪಿಯಲ್ಲಿ ಕೃಷಿ ಕ್ಷೇತ್ರದ ಪಾಲಿನಲ್ಲಿ ಕುಸಿತವಾಗಿದೆ ಎಂದು ಕೇಂದ್ರ ಸರಕಾರವು ಮಂಗಳವಾರ ಲೋಕಸಭೆಗೆ ತಿಳಿಸಿದೆ.
‘‘ ಒಟ್ಟು ಮೌಲ್ಯ ವರ್ಧಿತ ಆರ್ಥಿಕತೆಯಲ್ಲಿ (ಜಿವಿಎ) ಕೃಷಿ ಕ್ಷೇತ್ರದ ಪಾಲು 1990-91ನೇ ಸಾಲಿನಲ್ಲಿ ಶೇ.35ರಷ್ಟಿದ್ದುದು 2022-23ರಲ್ಲಿ ಅದು ಶೇ.15ಕ್ಕಿಳಿದಿದೆ. ಇದಕ್ಕೆ ಕೃಷಿ ಉತ್ಪಾದನೆಯಲ್ಲಿನ ಕುಸಿತವು ಕಾರಣವಲ್ಲ. ಕೈಗಾರಿಕಾ ಹಾಗೂ ಸೇವಾ ವಲಯದ ಜಿವಿಎ ಹೆಚ್ಚಿದ್ದರಿಂದ ಹೀಗಾಗಿದೆ’’ ಎಂದು ಕೇಂದ್ರ ಕೃಷಿ ಸಚಿವ ಅರ್ಜುನ್ ಮುಂಡಾ ಲೋಕಸಭೆಗೆ ನೀಡಿದ ಲಿಖಿತ ಉತ್ತರದಲ್ಲಿ ತಿಳಿಸಿದ್ದಾರೆ.
ಕಳೆದ ಐದು ವರ್ಷಗಳಲ್ಲಿ ಕೃಷಿ ಹಾಗೂ ಅದರ ಸಹ ವಲಯಗಳು ಶೇ.4ರಷ್ಟು ಬೆಳವಣಿಗೆಯನ್ನು ದಾಖಲಿಸಿವೆ. ಜಾಗತಿಕ ಮಟ್ಟದ ಜಿಡಿಪಿಯಲ್ಲಿಯೂ ಕೃಷಿ ಪಾಲು ಕಳೆದ ಕೆಲವು ದಶಕಗಳಿಂದ ಕುಸಿದಿದ್ದು, ಇತ್ತೀಚಿನ ವರ್ಷಗಳಲ್ಲಿ ಅದು ಶೇ.4ಕ್ಕೆ ಬಂದು ನಿಂತಿದೆ’’ ಎಂದವರು ಹೇಳಿದರು.
ಕೃಷಿ ಉತ್ಪಾದನೆ, ಸಂಪನ್ಮೂಲ ಬಳಕೆಯ ದಕ್ಷತೆಯ ವರ್ಧನೆ, ಸುಸ್ಥಿರವಾದ ಕೃಷಿಗೆ ಉತ್ತೇಜನ, ಮೂಲ ಸೌಕರ್ಯ ಬಲಪಡಿಸುವಿಕೆ ಹಾಗೂ ರೈತರ ಉತ್ಪನ್ನಗಳಿಗೆ ಯೋಗ್ಯ ದರಗಳನ್ನು ಖಾತರಿಪಡಿಸುವಂತಹ ಯೋಜನೆಗಳನ್ನು ಸರಕಾರವು ಅಂಗೀಕರಿಸಿದೆ ಹಾಗೂ ಜಾರಿಗೊಳಿಸಿದೆ ಎಂದು ಅರ್ಜುನ್ ಮುಂಡಾ ತಿಳಿಸಿದರು.
2019ರಲ್ಲಿ ಜಾರಿಗೊಳಿಸಲಾದ ಪಿಎಂ-ಕಿಸಾನ್ ಯೋಜನೆಯು ರೈತರಿಗೆ ವರ್ಷಕ್ಕೆ ಮೂರು ಸಮಾನ ಕಂತುಗಳಲ್ಲಿ ಒಟ್ಟು ಆರು ಸಾವಿರ ರೂ.ಗಳನ್ನು ಬೆಂಬಲವಾಗಿ ನೀಡಲಾಗುತ್ತಿದೆ ಎಂದು ಸಚಿವರು ಹೇಳಿದರು.
2023ರ ನವೆಂಬರ್30ರಂದು 11 ಕೋಟಿಗೂ ಅಧಿಕ ರೈತರಿಗೆ 2.81 ಲಕ್ಷ ಕೋಟಿ ರೂ.ಗೂ ಅಧಿಕ ಹಣವನ್ನು ಬಿಡುಗಡೆಗೊಳಿಸಲಾಗಿದೆ ಎಂದರು.