ಮೋದಿ ಕಾಣಿಸಿಕೊಂಡಿರುವ ಹಾಡು ಗ್ರ್ಯಾಮಿ ಪ್ರಶಸ್ತಿಗೆ ನಾಮನಿರ್ದೇಶನ
ಪ್ರಧಾನಿ ನರೇಂದ್ರ ಮೋದಿ Photo: NDTV
ಹೊಸದಿಲ್ಲಿ: ಪ್ರಧಾನಿ ನರೇಂದ್ರ ಮೋದಿ ಕಾಣಿಸಿಕೊಂಡಿರುವ, ರಾಗಿ ಧಾನ್ಯ ಕುರಿತ ಹಾಡೊಂದನ್ನು ಶುಕ್ರವಾರ ಸಂಗೀತ ಲೋಕದ ಪ್ರತಿಷ್ಠಿತ ಗ್ರ್ಯಾಮಿ ಪ್ರಶಸ್ತಿಗಳಿಗೆ ನಾಮನಿರ್ದೇಶನ ಮಾಡಲಾಗಿದೆ.
‘ಅಬಂಡನ್ಸ್ ಆಫ್ ಮಿಲೆಟ್ಸ್’ ಎಂಬ ಹೆಸರಿನ ಹಾಡನ್ನು ಭಾರತೀಯ-ಅಮೆರಿಕನ್ ಗ್ರ್ಯಾಮಿ ಪ್ರಶಸ್ತಿ ವಿಜೇತ ಹಾಡುಗಾರ್ತಿ ಫಲ್ಗುಣಿ ಶಾ ಮತ್ತು ಅವರ ಗಂಡ ಹಾಗೂ ಗಾಯಕ ಗೌರವ್ ಶಾ ಹಾಡಿದ್ದಾರೆ. ಹಾಡನ್ನು ಜೂನ್ನಲ್ಲಿ ಬಿಡುಗಡೆಗೊಳಿಸಲಾಗಿತ್ತು. ಅದು ರಾಗಿಯ ಆರೋಗ್ಯ ಲಾಭಗಳನ್ನು ಎತ್ತಿಹಿಡಿಯುತ್ತದೆ.
ಈ ಹಾಡನ್ನು ‘ಶ್ರೇಷ್ಠ ಜಾಗತಿಕ ಸಂಗೀತ ನಿರ್ವಹಣೆ’ ವಿಭಾಗದಲ್ಲಿ ನಾಮನಿರ್ದೇಶನ ಮಾಡಲಾಗಿದೆ ಎಂದು ಗ್ರ್ಯಾಮಿ ಪ್ರಶಸ್ತಿಗಳನ್ನು ನಿರ್ವಹಿಸಿಕೊಂಡು ಬರುತ್ತಿರುವ ಅಮೆರಿಕದ ಸಂಘಟನೆ ‘ರೆಕಾರ್ಡಿಂಗ್ ಅಕಾಡಮಿ’ ಶುಕ್ರವಾರ ತಿಳಿಸಿದೆ. ಈ ವರ್ಷದ ಗ್ರ್ಯಾಮಿ ಪ್ರಶಸ್ತಿ ಪ್ರದಾನ ಕಾರ್ಯಕ್ರಮವು ಲಾಸ್ ಏಂಜಲಿಸ್ನಲ್ಲಿ ಫೆ.4ರಂದು ನಡೆಯಲಿದೆ.
‘‘ಕಳೆದ ವರ್ಷ ನಾನು ಗ್ರ್ಯಾಮಿ ಪ್ರಶಸ್ತಿ ಗೆದ್ದ ಬಳಿಕ ಪ್ರಧಾನಿ ಮೋದಿಯನ್ನು ಭೇಟಿಯಾಗಿದ್ದೆ. ಆಗ ನನ್ನಲ್ಲಿ ರಾಗಿಯ ಬಗ್ಗೆ ಹಾಡು ಬರೆಯುವ ಕಲ್ಪನೆ ಹುಟ್ಟಿಕೊಂಡಿತು. ಬದಲಾವಣೆ ತರುವಲ್ಲಿ ಮತ್ತು ಮಾನವ ಕುಲವನ್ನು ಉನ್ನತಿಗೆ ಏರಿಸುವಲ್ಲಿ ಸಂಗೀತ ವಹಿಸುವ ಪಾತ್ರದ ಬಗ್ಗೆ ನಾವು ಚರ್ಚಿಸಿದೆವು. ಆಗ, ಹಸಿವನ್ನು ಕೊನೆಗೊಳಿಸುವ ಸಂದೇಶವನ್ನು ಹೊಂದಿರುವ ಹಾಡೊಂದನ್ನು ನಾನು ಬರೆಯಬೇಕೆಂದು ಪ್ರಧಾನಿ ಸಲಹೆ ನೀಡಿದರು’’ ಎಂದು ಫಲ್ಗುಣಿ ಹೇಳಿದರು.