ಬಂಧನ ವಿರೋಧಿಸಿ ಪುರಕಾಯಸ್ತ, ಚಕ್ರವರ್ತಿ ಸಲ್ಲಿಸಿದ ಅರ್ಜಿ ವಿಚಾರಣೆ ಮುಂದೂಡಿದ ಸುಪ್ರೀಂ
Photo- PTI
ಹೊಸದಿಲ್ಲಿ: ಭಯೋತ್ಪಾದನೆ ವಿರೋಧಿ ಕಾಯ್ದೆ ಯುಎಪಿಎ ಅಡಿಯಲ್ಲಿ ತಮ್ಮ ಬಂಧನ ಪ್ರಶ್ನಿಸಿ ‘ನ್ಯೂಸ್ ಕ್ಲಿಕ್’ನ ಸ್ಥಾಪಕ ಪ್ರಬೀರ್ ಪುರಕಾಯಸ್ತ ಹಾಗೂ ಅದರ ಮಾನವ ಸಂಪನ್ಮೂಲ ವಿಭಾಗದ ಮುಖ್ಯಸ್ಥ ಅಮಿತ್ ಚಕ್ರವರ್ತಿ ಸಲ್ಲಿಸಿದ ಅರ್ಜಿಗೆ ಸಂಬಂಧಿಸಿದ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ಸೋಮವಾರ ದೀಪಾವಳಿ ರಜೆಯ ನಂತರ ಮುಂದೂಡಿದೆ.
ನ್ಯಾಯಮೂರ್ತಿಗಳಾದ ಬಿ.ಆರ್. ಗವಾಯಿ ಹಾಗೂ ಪ್ರಶಾಂತ್ ಕುಮಾರ್ ಮಿಶ್ರಾ ಅವರನ್ನು ಒಳಗೊಂಡ ಪೀಠ, ರಜಾ ಅವಧಿಯ ಬಳಿಕ ಅರ್ಜಿಗಳನ್ನು ವಿಚಾರಣೆ ನಡೆಸಲಾಗುವುದು ಎಂದು ಇಬ್ಬರು ಆರೋಪಿಗಳನ್ನು ಪ್ರತಿನಿಧಿಸಿದ್ದ ಹಿರಿಯ ನ್ಯಾಯವಾದಿ ಕಪಿಲ್ ಸಿಬಲ್ ಅವರಿಗೆ ತಿಳಿಸಿತು.
ದೀಪಾವಳಿ ರಜೆಯ ಬಳಿಕ ಪ್ರಧಾನ ಪ್ರಕರಣದೊಂದಿಗೆ ವೈದ್ಯಕೀಯ ಜಾಮೀನು ಅರ್ಜಿಯ ವಿಚಾರಣೆಯನ್ನು ಕೂಡ ನಡೆಸಲಾಗುವುದು ಎಂದು ಪೀಠ ಭರವಸೆ ನೀಡಿತು.
ಈ ಹಿಂದೆ ಅ.19ರಂದು ಸುಪ್ರೀಂ ಕೋರ್ಟ್, ದಿಲ್ಲಿ ಉಚ್ಚ ನ್ಯಾಯಾಲಯ ಅ.13ರಂದು ನೀಡಿದ ಆದೇಶವನ್ನು ಪ್ರಶ್ನಿಸಿ ಪುರಕಾಯಸ್ತ ಹಾಗೂ ಚಕ್ರವರ್ತಿ ಅವರು ಸಲ್ಲಿಸಿದ ಅರ್ಜಿಗೆ ಸಂಬಂಧಿಸಿ ದಿಲ್ಲಿ ಪೊಲೀಸರ ಪ್ರತಿಕ್ರಿಯೆ ಕೋರಿತ್ತು.