ಯುಎಪಿಎ ಪ್ರಕರಣದಲ್ಲಿ ಜಾಮೀನು ಕೋರಿ ಉಮರ್ ಖಾಲಿದ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ಮುಂದೂಡಿದ ಸುಪ್ರೀಂಕೋರ್ಟ್
Photo: PTI
ಹೊಸದಿಲ್ಲಿ: 2020ರ ಫೆಬ್ರವರಿಯಲ್ಲಿ ನಡೆದ ಈಶಾನ್ಯ ದಿಲ್ಲಿ ಹಿಂಸಾಚಾರದ ಹಿಂದಿನ ಪಿತೂರಿಯಲ್ಲಿ ಭಾಗಿಯಾಗಿರುವ ಆರೋಪದ ಮೇಲೆ ಭಯೋತ್ಪಾದನಾ ವಿರೋಧಿ ಕಾನೂನು ಯುಎಪಿಎ ಅಡಿಯಲ್ಲಿ ದಾಖಲಾಗಿರುವ ಪ್ರಕರಣದಲ್ಲಿ ಜಾಮೀನು ಕೋರಿ ಜೆಎನ್ ಯು ಮಾಜಿ ವಿದ್ಯಾರ್ಥಿ ಉಮರ್ ಖಾಲಿದ್ ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ಮಂಗಳವಾರ ಒಂದು ವಾರಕ್ಕೆ ಮುಂದೂಡಿದೆ.
ಖಾಲಿದ್ ಪರ ವಾದ ಮಂಡಿಸಿದ ಹಿರಿಯ ವಕೀಲ ಕಪಿಲ್ ಸಿಬಲ್ ಅವರು ಗೈರಾಗಿದ್ದ ಕಾರಣ ನ್ಯಾಯಮೂರ್ತಿಗಳಾದ ಬೇಲಾ ಎಂ. ತ್ರಿವೇದಿ ಮತ್ತು ದೀಪಂಕರ್ ದತ್ತಾ ಅವರ ಪೀಠವು ವಿಚಾರಣೆಯನ್ನು ಮುಂದೂಡಿತು.
ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಪ್ರಶಾಂತ್ ಕುಮಾರ್ ಮಿಶ್ರಾ ಅವರು ಆಗಸ್ಟ್ 9 ರಂದು ಖಾಲಿದ್ ಅವರ ಅರ್ಜಿಯ ವಿಚಾರಣೆಯಿಂದ ಹಿಂದೆ ಸರಿದಿದ್ದರು.
ತನಗೆ ಜಾಮೀನು ಅರ್ಜಿಯನ್ನು ತಿರಸ್ಕರಿಸಿದ ದಿಲ್ಲಿ ಹೈಕೋರ್ಟ್ ನ 2022 ರ ಅಕ್ಟೋಬರ್ 18 ರ ಆದೇಶವನ್ನು ಪ್ರಶ್ನಿಸಿ ಖಾಲಿದ್ ಸಲ್ಲಿಸಿದ ಅರ್ಜಿಯು ನ್ಯಾಯಮೂರ್ತಿಗಳಾದ ಎ ಎಸ್ ಬೋಪಣ್ಣ ಮತ್ತು ಪ್ರಶಾಂತ್ ಕುಮಾರ್ ಮಿಶ್ರಾ ಅವರ ಪೀಠದ ಮುಂದೆ ವಿಚಾರಣೆಗೆ ಬಂದಿತ್ತು.
ಖಾಲಿದ್ ಅವರ ಜಾಮೀನು ಅರ್ಜಿಯನ್ನು ತಿರಸ್ಕರಿಸಿದ್ದಹೈಕೋರ್ಟ್ , ಅವರು ಇತರ ಸಹ ಆರೋಪಿಗಳೊಂದಿಗೆ ನಿರಂತರ ಸಂಪರ್ಕದಲ್ಲಿದ್ದಾರೆ ಹಾಗೂ ಅವರ ವಿರುದ್ಧದ ಆರೋಪಗಳು ಮಲ್ನೋಟಕ್ಕೆ ನಿಜ ಎಂದು ಹೇಳಿತ್ತು.