ರೈತರ ಬೇಡಿಕೆಗಳ ಪರಿಶೀಲನೆಗೆ ಸ್ವತಂತ್ರ ಸಮಿತಿ ಪ್ರಸ್ತಾವ ಮುಂದಿಟ್ಟ ಸುಪ್ರೀಂ ಕೋರ್ಟ್
ಕೇಂದ್ರ, ರಾಜ್ಯ ಮತ್ತು ರೈತರ ನಡುವೆ ‘ಗಾಢ ನಂಬಿಕೆ ಕೊರತೆ’
PC : PTI
ಹೊಸದಿಲ್ಲಿ: ಕೇಂದ್ರ ಸರಕಾರ, ರಾಜ್ಯಗಳು ಮತ್ತು ರೈತರ ನಡುವೆ ‘‘ನಂಬಿಕೆಯ ಗಾಢ ಕೊರತೆ’’ ಇದೆ ಬುಧವಾರ ಅಭಿಪ್ರಾಯಪಟ್ಟ ಸುಪ್ರೀಂ ಕೋರ್ಟ್, ಬೆಳೆಗಳ ಕನಿಷ್ಠ ಬೆಂಬಲ ಬೆಲೆಗೆ ಕಾನೂನು ಖಾತರಿ ನೀಡುವುದು ಸೇರಿದಂತೆ ರೈತರ ವಿವಿಧ ಬೇಡಿಕೆಗಳನ್ನು ಪರಿಶೀಲಿಸಲು ಸ್ವತಂತ್ರ ಸಮಿತಿಯೊಂದನ್ನು ರಚಿಸುವ ಪ್ರಸ್ತಾವವನ್ನು ಮುಂದಿಟ್ಟಿದೆ.
ಈ ಸಮಿತಿಗೆ ಹೆಸರುಗಳನ್ನು ಸೂಚಿಸುವಂತೆ ನ್ಯಾಯಮೂರ್ತಿ ಸೂರ್ಯ ಕಾಂತ್ ನೇತೃತ್ವದ ನ್ಯಾಯ ಪೀಠವೊಂದು ಕೇಂದ್ರ ಸರಕಾರ ಹಾಗೂ ಹರ್ಯಾಣ ಮತ್ತು ಪಂಜಾಬ್ ರಾಜ್ಯಗಳಿಗೆ ನಿರ್ದೇಶನ ನೀಡಿತು. ಅದೇ ವೇಳೆ, ಅಂಬಾಲ ಸಮೀಪದ ಶಂಭು ಗಡಿಯಲ್ಲಿ ಒಂದು ವಾರ ಯಥಾ ಸ್ಥಿತಿಯನ್ನು ಕಾಯ್ದುಕೊಳ್ಳುವಂತೆ ಆದೇಶ ನೀಡಿತು.
ಶಂಭು ಗಡಿಯಲ್ಲಿ ಫೆಬ್ರವರಿ 13ರಿಂದ ರೈತರು ಶಿಬಿರ ಹೂಡಿದ್ದಾರೆ. ಗಡಿಯನ್ನು ಮುಚ್ಚಲಾಗಿದೆ.
ಸ್ವತಂತ್ರ ಸಮಿತಿಯ ರಚನೆಗೆ ಸಂಬAಧಿಸಿ ನಿರ್ದೇಶನಗಳನ್ನು ಪಡೆಯುವಂತೆ ನಾವು ಸಂಬAಧಪಟ್ಟ ಪಕ್ಷಗಳಿಗೆ ಸೂಚಿಸಿದ್ದೇವೆ. ರೈತರ ನ್ಯಾಯೋಚಿತ ಮತ್ತು ಎಲ್ಲರ ಹಿತಾಸಕ್ತಿ ಹೊಂದಿರುವ ಬೇಡಿಕೆಗಳಿಗೆ ಸೂಕತ ಪರಿಹಾರ ಕಂಡುಹಿಡಿಯಲು ಸಾಧ್ಯವಾಗುವಂತೆ ರೈತರು ಮತ್ತು ಸಂಬAಧಪಟ್ಟ ಎಲ್ಲರ ಜೊತೆ ವ್ಯವಹರಿಸಬಲ್ಲ ಸಮರ್ಥ ವ್ಯಕ್ತಿಗಳು ಸಮಿತಿಯಲ್ಲಿರಬೇಕು. ಪಂಜಾಬ್ ಮತ್ತು ಹರ್ಯಾಣ ರಾಜ್ಯಗಳು ಕೆಲವು ಹೆಸರುಗಳನ್ನು ಸೂಚಿಸಬಹುದಾಗಿದೆ. ಅಥವಾ ಸೂಕ್ತ ವ್ಯಕ್ತಿಗಳನ್ನು ಹುಡುಕುವ ಕೆಲಸವನ್ನು ಅವರು ನಮಗೆ ವಹಿಸಬಹುದು’’ ಎಂದು ನ್ಯಾಯಾಲಯದ ಆದೇಶ ತಿಳಿಸಿದೆ.
ಸುಪ್ರೀಂ ಕೋರ್ಟ್ ಒಂದು ವಾರದ ಬಳಿಕ ಅರ್ಜಿಯ ಮುಂದಿನ ವಿಚಾರಣೆ ನಡೆಸಲಿದೆ.
‘‘ರೈತರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಲು ನೀವು ಕೆಲವೊಂದು ಕ್ರಮಗಳನ್ನು ತೆಗೆದುಕೊಳ್ಳಬೇಕು. ಇಲ್ಲದಿದ್ದರೆ ಅವರು ಪ್ರತಿಭಟನೆ ನಡೆಸಲು ದಿಲ್ಲಿಗೆ ಯಾಕೆ ಬರುತ್ತಾರೆ? ನೀವು ರೈತರೊಂದಿಗೆ ಮಾತನಾಡಲು ಸಚಿವರನ್ನು ಕಳುಹಿಸುತ್ತೀರಿ ಹಾಗೂ ಅವರ ಉತ್ತಮ ಉದ್ದೇಶಗಳ ಹೊರತಾಗಿಯೂ ಅಲ್ಲಿ ವಿಶ್ವಾಸದ ಕೊರತೆಯಿದೆ. ನೀವು ಕೇವಲ ನಿಮ್ಮ ಸ್ವಹಿತಾಸಕ್ತಿಗಳ ಬಗ್ಗೆ ಯೋಚಿಸುತ್ತಿರಿ ಮತ್ತು ಸ್ಥಳಿಯ ಸಮಸ್ಯೆಗಳನ್ನು ನಿರ್ಲಕ್ಷಿಸುತ್ತೀರಿ ಎಂದು ಅವರು ಅವರು ಭಾವಿಸುತ್ತಾರೆ’’ ಎಂದು ನ್ಯಾಯಮೂರ್ತಿಗಳಾದ ದೀಪಂಕರ್ ದತ್ತ ಮತ್ತು ಉಜ್ಜಲ್ ಭೂಯನ್ ಅವರನ್ನೂ ಒಳಗೊಂಡ ಸುಪ್ರೀಂ ಕೋರ್ಟ್ ಪೀಠವು ಹೇಳಿತು.
ಪಂಜಾಬ್ ಮತ್ತು ಹರ್ಯಾಣ ಹೈಕೋರ್ಟ್ ಮಾರ್ಚ್ 7ರಂದು ನೀಡಿರುವ ಆದೇಶವೊಂದನ್ನು ಪ್ರಶ್ನಿಸಿ ಹರ್ಯಾಣ ಸರಕಾರ ಸಲ್ಲಿಸಿರುವ ಮನವಿಯ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ನಡೆಸುತ್ತಿತ್ತು.
ಫೆಬ್ರವರಿಯಲ್ಲಿ ಪ್ರತಿಭಟನಾನಿರತ ರೈತರು ಮತ್ತು ಹರ್ಯಾಣದ ಭದ್ರತಾ ಪಡೆಗಳ ನಡುವೆ ಸಂಭವಿಸಿದ ಘರ್ಷಣೆಯಲ್ಲಿ ಮೃತಪಟ್ಟ ರೈತ ಶುಭಕರಣ್ ಸಿಂಗ್ರ ಸಾವಿನ ಬಗ್ಗೆ ತನಿಖೆ ನಡೆಸಲು ಪಂಜಾಬ್ ಮತ್ತು ಹರ್ಯಾಣ ಹೈಕೋರ್ಟ್, ಮಾಜಿ ಹೈಕೋರ್ಟ್ ನ್ಯಾಯಾಧೀಶರೊಬ್ಬರ ನೇತೃತ್ವದಲ್ಲಿ ಸಮಿತಿಯೊಂದನ್ನು ರಚಿಸಿತ್ತು. ಹೈಕೋರ್ಟ್ ಆದೇಶಕ್ಕೆ ತಡೆಯಾಜ್ಞೆ ನೀಡಲು ಎಪ್ರಿಲ್ ಒಂದರAದು ಸುಪ್ರೀಂ ನಿರಾಕರಿಸಿತ್ತು.
ಪಂಜಾಬ್ ಮತ್ತು ಹರ್ಯಾಣ ಹೈಕೋರ್ಟ್ ಜುಲೈ 10ರಂದು ಇನ್ನೊಂದು ಆದೇಶ ನೀಡಿ, ಏಳು ದಿನಗಳಲ್ಲಿ ಹೆದ್ದಾರಿಯನ್ನು ತೆರೆಯುವಂತೆ ರಾಜ್ಯ ಸರಕಾರಕ್ಕೆ ನಿರ್ದೇಶನ ನೀಡಿತ್ತು. ಇದನ್ನೂ ಪ್ರಶ್ನಿಸಿ ಕಳೆದ ವಾರ ಹರ್ಯಾಣ ಹೈಕೋರ್ಟ್ ಸುಪ್ರೀಂ ಕೋರ್ಟ್ ಮೆಟ್ಟಿಲೇರಿತ್ತು.
ಫೆಬ್ರವರಿಯಲ್ಲಿ, ದಿಲ್ಲಿಗೆ ಪ್ರತಿಭಟನಾ ಮೆರವಣಿಗೆ ಒಯ್ಯುವುದಾಗಿ ಸಂಯುಕ್ತ ಕಿಸಾನ್ ಮೋರ್ಚ ಮತ್ತು ಕಿಸಾನ್ ಮಜ್ದೂರ್ ಮೋರ್ಚ ಘೋಷಿಸಿದಾಗ ಹರ್ಯಾಣ ಸರಕಾರವು ಅಂಬಾಲ-ಹೊಸದಿಲ್ಲಿ ರಾಷ್ಟ್ರೀಯ ಹೆದ್ದಾರಿಯಲ್ಲಿ ತಡೆಬೇಲಿಗಳನ್ನು ನಿರ್ಮಿಸಿತ್ತು. ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ ನೀಡಲು ಕಾನೂನು ತರುವುದು ಸೇರಿದಂತೆ ತಮ್ಮ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ದಿಲ್ಲಿಗೆ ಮೆರವಣಿಗೆ ಒಯ್ಯಲು ರೈತರು ನಿರ್ಧರಿಸಿದ್ದರು.