ಇವಿಎಂ ನಿರ್ವಹಣೆಯಲ್ಲಿ ಲೋಪ ಆರೋಪ ಅರ್ಜಿ ತಿರಸ್ಕರಿಸಿದ ಸುಪ್ರೀಂ ಕೋರ್ಟ್
Photo: NDTV
ಹೊಸದಿಲ್ಲಿ: ವಿದ್ಯುನ್ಮಾನ ಮತ ಯಂತ್ರ (ಇವಿಎಂ)ಗಳ ಕಾರ್ಯ ನಿರ್ವಹಣೆಯಲ್ಲಿ ಲೋಪ ಆರೋಪಿಸಿ ಸಲ್ಲಿಸಲಾದ ಅರ್ಜಿಯನ್ನು ಪರಿಗಣಿಸಲು ಸುಪ್ರೀಂ ಕೋರ್ಟ್ ಶುಕ್ರವಾರ ನಿರಾಕರಿಸಿದೆ.
ಪ್ರತಿಯೊಂದು ವಿಧಾನಕ್ಕೂ ಅದರ ಸಕಾರಾತ್ಮಕ ಹಾಗೂ ನಕಾರಾತ್ಮಕ ಅಂಶಗಳಿರುತ್ತವೆ ಎಂದು ಸುಪ್ರೀಂ ಕೋರ್ಟ್ ಹೇಳಿದೆ.
ನ್ಯಾಯಮೂರ್ತಿಗಳಾದ ಸಂಜೀವ್ ಖನ್ನಾ, ದೀಪಂಕರ್ ದತ್ತಾ ಹಾಗೂ ಅಗಸ್ಟಿನ್ ಜಾರ್ಜ್ ಮಸೀಹ್ ಅವರನ್ನೊಳಗೊಂಡ ಪೀಠ, ನ್ಯಾಯಾಲಯ ಹಲವು ಅರ್ಜಿಗಳನ್ನು ಈಗಾಗಲೇ ಮತ್ತೆ ಮತ್ತೆ ಪರಿಶೀಲಿಸಿದೆ. ಇವಿಎಂಗಳ ಕಾರ್ಯನಿರ್ವಹಣೆಗೆ ಸಂಬಂಧಿಸಿದ ವಿವಿಧ ಸಮಸ್ಯೆಗಳನ್ನು ವ್ಯವಹರಿಸಿದೆ ಎಂದು ಹೇಳಿದೆ.
‘‘ನಾವು ಎಷ್ಟು ಅರ್ಜಿಗಳನ್ನು ಪರಿಗಣಿಸಬೇಕು? ಇತ್ತೀಚೆಗೆ ನಾವು ವಿವಿಪ್ಯಾಟ್ಗೆ ಸಂಬಂಧಿಸಿ ಅರ್ಜಿಯನ್ನು ವ್ಯವಹರಿಸಿದ್ದೇವೆ. ನಾವು ಊಹೆಗಳ ಮೂಲಕ ಹೋಗಲು ಸಾಧ್ಯವಿಲ್ಲ. ಪ್ರತಿಯೊಂದು ವಿಧಾನ ಕೂಡ ಸಕರಾತ್ಮಕ ಹಾಗೂ ನಕಾರಾತ್ಮಕ ಅಂಶಗಳನ್ನು ಹೊಂದಿರುತ್ತವೆ. ಕ್ಷಮಿಸಿ, ನೀವು ಇದನ್ನು ಕಲಂ 32 ಅಡಿಯಲ್ಲಿ ಪರಿಗಣಿಸಲು ಸಾಧ್ಯವಿಲ್ಲ’’ ಎಂದು ಪೀಠ ದೂರುದಾರೆ ನಂದಿನಿ ಶರ್ಮಾ ಅವರಿಗೆ ತಿಳಿಸಿತು.
ಅರ್ಜಿಯಲ್ಲಿ ಪ್ರಸ್ತಾಪಿಸಲಾದ ವಿಷಯವನ್ನು ಸುಪ್ರೀಂ ಕೋರ್ಟ್ ವಿವಿಧ ಅರ್ಜಿಗಳಲ್ಲಿ ಪರಿಶೀಲಿಸಿದೆ ಎಂದು ಪೀಠ ತನ್ನ ಆದೇಶದಲ್ಲಿ ದಾಖಲಿಸಿದೆ. ಈ ವಿಷಯಕ್ಕೆ ಸಂಬಂಧಿಸಿ ನ್ಯಾಯಾಲಯ 10ಕ್ಕೂ ಅಧಿಕ ಪ್ರಕರಣಗಳನ್ನು ಪರಿಶೀಲಿಸಿದೆ ಎಂದು ನ್ಯಾಯಮೂರ್ತಿ ಖನ್ನನ್ ತಿಳಿಸಿದ್ದಾರೆ.
ನಂದಿನ ಶರ್ಮಾ ಅವರು ತನ್ನ ಅರ್ಜಿಯಲ್ಲಿ ಚುನಾವಣಾ ಆಯೋಗ ಹಾಗೂ 6 ರಾಜಕೀಯ ಪಕ್ಷಗಳನ್ನು ಪ್ರತಿವಾದಿ ಎಂದು ಪರಿಗಣಿಸಿದ್ದರು.