ಬಾಲಕನಿಗೆ ಕೌನ್ಸೆಲಿಂಗ್ ಒದಗಿಸದ ಉ.ಪ್ರದೇಶ ಸರಕಾರಕ್ಕೆ ಸುಪ್ರೀಂ ಕೋರ್ಟ್ ತರಾಟೆ
ಮುಝಫ್ಫರ್ನಗರ ಕಪಾಳಮೋಕ್ಷ ಪ್ರಕರಣ
Photo: PTI
ಹೊಸದಿಲ್ಲಿ: ಮುಝಫ್ಫರ್ನಗರದಲ್ಲಿ ತಮ್ಮ ಸಹಪಾಠಿಗೆ ಕಪಾಳಮೋಕ್ಷ ಮಾಡುವಂತೆ ಶಿಕ್ಷಕಿಯಿಂದ ಸೂಚಿಸಲ್ಪಟ್ಟಿದ್ದ ವಿದ್ಯಾರ್ಥಿಗಳು ಮತ್ತು ಸಂತ್ರಸ್ತ ಮುಸ್ಲಿಮ್ ಬಾಲಕನಿಗೆ ಕೌನ್ಸೆಲಿಂಗ್ ಸೌಲಭ್ಯ ಒದಗಿಸುವಂತೆ ತನ್ನ ನಿರ್ದೇಶನವನ್ನು ಪಾಲಿಸುವಲ್ಲಿ ವೈಫಲ್ಯಕ್ಕಾಗಿ ಸರ್ವೋಚ್ಚ ನ್ಯಾಯಾಲಯವು ಉತ್ತರ ಪ್ರದೇಶ ಸರಕಾರವನ್ನು ತರಾಟೆಗೆತ್ತಿಕೊಂಡಿದೆ.
ಆ.24ರಂದು ಖುಬಾಪುರ ಗ್ರಾಮದ ನೇಹಾ ಪಬ್ಲಿಕ್ ಸ್ಕೂಲ್ನ ಶಿಕ್ಷಕಿ ಹಾಗೂ ಮಾಲಕಿ ತೃಪ್ತಾ ತ್ಯಾಗಿ ಮನೆಗೆಲಸ ಪೂರ್ಣಗೊಳಿಸದ್ದಕ್ಕಾಗಿ ಏಳರ ಹರೆಯದ ಬಾಲಕನ ಕೆನ್ನೆಗೆ ಬಾರಿಸುವಂತೆ ಆತನ ಸಹಪಾಠಿಗಳಿಗೆ ತಾಕೀತು ಮಾಡಿದ್ದರು. ಘಟನೆಯ ವೀಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿತ್ತು.
ಸರ್ವೋಚ್ಚ ನ್ಯಾಯಾಲಯವು ಪ್ರಕರಣದಲ್ಲಿ ತ್ವರಿತ ತನಿಖೆಯನ್ನು ಕೋರಿ ಮಹಾತ್ಮಾ ಗಾಂಧಿಯವರ ಮರಿಮೊಮ್ಮಗ ತುಷಾರ್ ಗಾಂಧಿಯವರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆಯನ್ನು ನಡೆಸುತ್ತಿದೆ.
ಸೆ.25ರಂದು ಸಂತ್ರಸ್ತ ಬಾಲಕ ಮತ್ತು ಆತನ ಸಹಪಾಠಿಗಳಿಗೆ ಕೌನ್ಸೆಲಿಂಗ್ ಸೌಲಭ್ಯವನ್ನು ಒದಗಿಸುವಂತೆ ರಾಜ್ಯದ ಬಿಜೆಪಿ ಸರಕಾರಕ್ಕೆ ನಿರ್ದೇಶನ ನೀಡಿದ್ದ ನ್ಯಾಯಮೂರ್ತಿಗಳಾದ ಎ.ಎಸ್.ಓಕಾ ಮತ್ತು ಪಂಕಜ್ ಮಿತ್ತಲ್ ಅವರ ಪೀಠವು, ಬಾಲಕನನ್ನು ಬೇರೆ ಶಾಲೆಗೆ ವರ್ಗಾಯಿಸುವಂತೆ ಸೂಚಿಸಿತ್ತು.
ಶುಕ್ರವಾರ ವಿಚಾರಣೆ ಸಂದರ್ಭದಲ್ಲಿ ಗಾಂಧಿ ಪರ ವಕೀಲ ಶಾದಾನ್ ಫರಾಸತ್ ಅವರು, ನ್ಯಾಯಾಲಯದ ಆದೇಶದ ಬಗ್ಗೆ ಸರಕಾರವು ಉದಾಸೀನ ಧೋರಣೆಯನ್ನು ತಳೆದಿದೆ ಎಂದು ತಿಳಿಸಿದರು.
ಸಂತ್ರಸ್ತ ಬಾಲಕ ಹಾಗೂ ಘಟನೆಯಲ್ಲಿ ಭಾಗಿಯಾಗಿದ್ದ ಇತರ ಮಕ್ಕಳಿಗೆ ಕೌನ್ಸೆಲಿಂಗ್ ಸೌಲಭ್ಯವನ್ನು ಒದಗಿಸುವುದಕ್ಕೆ ಸಂಬಂಧಿಸಿದಂತೆ ಸರಕಾರದ ನಿಲುವು ಆಘಾತಕಾರಿಯಾಗಿದೆ ಎಂದು ಹೇಳಿದ ಪೀಠವು, ‘ಈ ಮಕ್ಕಳಿಗೆ ಕೌನ್ಸೆಲಿಂಗ್ಗೆ ಒಳಪಡಿಸಲು ವಿಧಾನವನ್ನು ಸೂಚಿಸಲು ನಾವು ಮಂಬೈನ ಟಾಟಾ ಇನ್ಸ್ಟಿಟ್ಯೂಟ್ ಆಫ್ ಸೋಷಿಯಲ್ ಸೈನ್ಸಸ್ ಅನ್ನು ನೇಮಕಗೊಳಿಸಿದ್ದೇವೆ. ಕೌನ್ಸೆಲಿಂಗ್ ಸೇವೆಗಳನ್ನು ಒದಗಿಸ ಬಲ್ಲ ರಾಜ್ಯದಲ್ಲಿಯ ಮಕ್ಕಳ ಸಮಾಲೋಚಕರ ಹೆಸರುಗಳನ್ನೂ ಅದು ಸೂಚಿಸಲಿದೆʼ ಎಂದು ತಿಳಿಸಿತು. ಟಾಟಾ ಸಂಸ್ಥೆಗೆ ಎಲ್ಲ ಮೂಲಸೌಕರ್ಯ ನೆರವನ್ನು ಒದಗಿಸುವಂತೆ ಮತ್ತು ಡಿ.11ಕ್ಕೆ ಮುನ್ನ ವರದಿಯನ್ನು ಸಲ್ಲಿಸುವಂತೆ ನ್ಯಾಯಾಲಯವು ರಾಜ್ಯ ಸರಕಾರಕ್ಕೆ ನಿರ್ದೇಶನ ನೀಡಿತು.
ನ್ಯಾಯಾಲಯದಿಂದ ಯಾವುದೇ ಕಠಿಣ ಕ್ರಮವನ್ನು ತಪ್ಪಿಸಲು ಮುಂದಿನ ವಿಚಾರಣಾ ದಿನಾಂಕದಂದು ಹಾಜರಿರುವಂತೆ ರಾಜ್ಯ ಶಾಲಾ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿಗೂ ಪೀಠವು ನಿರ್ದೇಶನ ನೀಡಿತು.
ಕೌನ್ಸೆಲಿಂಗ್ ಜೊತೆಗೆ ಸಂತ್ರಸ್ತ ಬಾಲಕನನ್ನು ಹೊಸ ಶಾಲೆಗೆ ದಾಖಲಿಸುವಂತೆಯೂ ಅದು ರಾಜ್ಯ ಸರಕಾರಕ್ಕೆ ಸೂಚಿಸಿತು.