ಜು.10ರಂದು ದಿಲ್ಲಿ ಸರಕಾರದ ಅರ್ಜಿಯ ವಿಚಾರಣೆಗೆ ಸುಪ್ರೀಂ ಕೋರ್ಟ್ ಅಸ್ತು
ಕೇಂದ್ರದ ಸುಗ್ರೀವಾಜ್ಞೆ
ಸುಪ್ರೀಂ ಕೋರ್ಟ್ | Photo: PTI
ಹೊಸದಿಲ್ಲಿ.: ರಾಷ್ಟ್ರ ರಾಜಧಾನಿಯಲ್ಲಿನ ಸರಕಾರಿ ನೌಕರರ ಮೇಲೆ ನಿಯಂತ್ರಣವನ್ನು ಹೊಂದಿರಲು ಲೆಫ್ಟಿನಂಟ್ ಗವರ್ನರ್ ಗೆ ಅವಕಾಶವನ್ನು ಕಲ್ಪಿಸುವ ಮೂಲಕ ಅವರನ್ನು ನಿರ್ಣಾಯಕ ಸ್ಥಾನಕ್ಕೆ ಮರಳಿ ತರುವ ಕೇಂದ್ರದ ಸುಗ್ರೀವಾಜ್ಞೆಯನ್ನು ರದ್ದುಗೊಳಿಸುವಂತೆ ಕೋರಿ ದಿಲ್ಲಿ ಸರಕಾರವು ಸಲ್ಲಿಸಿರುವ ಅರ್ಜಿಯನ್ನು ಜು.10ರಂದು ವಿಚಾರಣೆಗೆತ್ತಿಕೊಳ್ಳಲು ಸರ್ವೋಚ್ಚ ನ್ಯಾಯಾಲಯವು ಗುರುವಾರ ಒಪ್ಪಿಕೊಂಡಿದೆ.
ದಿಲ್ಲಿ ಸರಕಾರದ ಪರ ಹಿರಿಯ ವಕೀಲ ಎ.ಎಂ.ಸಿಂಘ್ವಿಯವರು ತುರ್ತು ವಿಚಾರಣೆಗಾಗಿ ಅರ್ಜಿಯನ್ನು ಪ್ರಸ್ತಾಪಿಸಿದರು. ದಿಲ್ಲಿ ವಿದ್ಯುಚ್ಛಕ್ತಿ ನಿಯಂತ್ರಣ ಪ್ರಾಧಿಕಾರದ ಅಧ್ಯಕ್ಷರ ನೇಮಕದ ವಿರುದ್ಧ ದಿಲ್ಲಿ ಸರಕಾರದ ಪ್ರತ್ಯೇಕ ಅರ್ಜಿಯನ್ನು ಉಲ್ಲೇಖಿಸಿದ ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ಅವರು ಎರಡೂ ಅರ್ಜಿಗಳ ವಿಚಾರಣೆಯನ್ನು ಒಟ್ಟಿಗೆ ನಡೆಸಬಹುದು ಎಂದು ಹೇಳಿದರು. ಆದರೆ ಪ್ರತ್ಯೇಕ ಅರ್ಜಿಯು ಸುಗ್ರೀವಾಜ್ಞೆಯ ಒಂದು ಭಾಗವನ್ನು ಮಾತ್ರ ಪ್ರಶ್ನಿಸಿದೆ, ಆದರೆ ತನ್ನ ಅರ್ಜಿಯು ಇಡೀ ಸುಗ್ರೀವಾಜ್ಞೆಯನ್ನು ಪ್ರಶ್ನಿಸಿದೆ ಎಂದು ಸಿಂಘ್ವಿ ವಿವರಿಸಿದಾಗ ಜು.10ರಂದು ಅದನ್ನು ವಿಚಾರಣೆಗೆ ಕೈಗೆತ್ತಿಕೊಳ್ಳಲು ನ್ಯಾ.ಚಂದ್ರಚೂಡ್ ನೇತೃತ್ವದ ಪೀಠವು ಒಪ್ಪಿಕೊಂಡಿತು.
ಕಾನೂನುಗಳನ್ನು ರೂಪಿಸುವ ಮತ್ತು ರಾಷ್ಟ್ರ ರಾಜಧಾನಿಯಲ್ಲಿ ನಾಗರಿಕ ಸೇವೆಗಳನ್ನು ನಿರ್ವಹಿಸುವ ದಿಲ್ಲಿ ಸರಕಾರದ ಅಧಿಕಾರದ ಪರವಾಗಿ ಸರ್ವೋಚ್ಚ ನ್ಯಾಯಾಲಯವು ಮೇ 11ರಂದು ತೀರ್ಪು ನೀಡಿದ ಎಂಟೇ ದಿನಗಳಲ್ಲಿ ಕೇಂದ್ರ ಸರಕಾರವು ದಿಲ್ಲಿ ರಾಷ್ಟ್ರೀಯ ರಾಜಧಾನಿ ಪ್ರದೇಶ (ತಿದ್ದುಪಡಿ) ಅಧ್ಯಾದೇಶ,2023ನ್ನು ಹೊರಡಿಸಿದೆ ಎಂದು ಅರವಿಂದ ಕೇಜ್ರಿವಾಲ್ ಸರಕಾರವು ವಾದಿಸಿದೆ.
ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ನೇತೃತ್ವದ ಸಂವಿಧಾನ ಪೀಠದ ಮೇ 11ರ ತೀರ್ಪು ದಿಲ್ಲಿಯಲ್ಲಿ ಅಧಿಕಾರಶಾಹಿಗಳಿಗೆ ಸಂಬಂಧಿಸಿದಂತೆ ಕೇಂದ್ರದ ಪ್ರತಿನಿಧಿಯಾಗಿರುವ ಲೆಫ್ಟಿನಂಟ್ ಗವರ್ನರ್ ಪಾತ್ರವನ್ನು ಸಾರ್ವಜನಿಕ ಸುವ್ಯವಸ್ಥೆ,ಪೊಲೀಸ್ ಮತ್ತು ಭೂಮಿ;ಈ ಮೂರು ನಿರ್ದಿಷ್ಟ ಕ್ಷೇತ್ರಗಳಿಗೆ ಸೀಮಿತಗೊಳಿಸಿತ್ತು.
ಸುಗ್ರೀವಾಜ್ಞೆಯು ಈಗ ದಿಲ್ಲಿಯಲ್ಲಿ ಸೇವೆ ಸಲ್ಲಿಸುತ್ತಿರುವ ಅಧಿಕಾರಿಗಳ ಮೇಲಿನ ನಿಯಂತ್ರಣವನ್ನು ದಿಲ್ಲಿ ಸರಕಾರದಿಂದ ಕಿತ್ತುಕೊಂಡು ಚುನಾಯಿತರಲ್ಲದ ಲೆಫ್ಟಿನಂಟ್ ಗವರ್ನರ್ಗೆ ನೀಡಿದೆ. ಸಂವಿಧಾನದ,ವಿಶೇಷವಾಗಿ ಚುನಾಯಿತ ಸರಕಾರವು ಸೇವೆಗಳ ಮೇಲೆ ಅಧಿಕಾರ ಮತ್ತು ನಿಯಂತ್ರಣವನ್ನು ಹೊಂದಿರಬೇಕು ಎನ್ನುವುದನ್ನು ಎತ್ತಿ ಹಿಡಿದಿರುವ 239ಎಎ ವಿಧಿಯ ತಿದ್ದುಪಡಿಯನ್ನು ಕೋರದೇ ಕೇಂದ್ರವು ಈ ಸುಗ್ರೀವಾಜ್ಞೆಯನ್ನು ತಂದಿದೆ ಎಂದು ದಿಲ್ಲಿ ಸರಕಾರವು ನ್ಯಾಯಾಲಯಕ್ಕೆ ತಿಳಿಸಿದೆ.