ಜ್ಞಾನವಾಪಿ ಅರ್ಜಿದಾರರ ಪರ ವಕೀಲರಿಂದ ಸಮೀಕ್ಷೆಯ ವರದಿ ಬಹಿರಂಗ
ಅಲ್ಲಿ ದೇವಸ್ಥಾನ ಇತ್ತು ಎಂದು ವರದಿ ಹೇಳಿದೆ : ವಕೀಲ ಜೈನ್
Photo:NDTV
ಹೊಸದಿಲ್ಲಿ : ವಾರಣಾಸಿಯ ಜ್ಞಾನವಾಪಿ ಮಸೀದಿಯ ಸಮೀಕ್ಷೆಯು ದೇವಾಲಯದ ಅಸ್ತಿತ್ವವನ್ನು ಬಹಿರಂಗಪಡಿಸಿದೆ, ಎಂದು ಹಿಂದೂ ಅರ್ಜಿದಾರರ ವಕೀಲರು ಸಮೀಕ್ಷೆಯ ವರದಿಯ ಪ್ರತಿ ಸ್ವೀಕರಿಸಿದ ನಂತರ ಗುರುವಾರ ಮಾಧ್ಯಮಗಳಿಗೆ ಹೇಳಿದ್ದಾರೆ.
ವಾರಣಾಸಿ ಜಿಲ್ಲಾ ನ್ಯಾಯಾಧೀಶರು ಪ್ರಕರಣದ ಸೂಕ್ಷ್ಮತೆಯ ದೃಷ್ಟಿಯಿಂದ ಸಾಮಾಜಿಕ ಮಾಧ್ಯಮದಲ್ಲಿ ಯಾವುದೇ ತಿರುಚಿದ ಮತ್ತು ತಪ್ಪು ಮಾಹಿತಿ ಹರಡುವುದನ್ನು ತಪ್ಪಿಸಲು ವರದಿಯನ್ನು ತಕ್ಷಣವೇ ಬಿಡುಗಡೆ ಮಾಡವುದನ್ನುಈ ಹಿಂದೆ ನಿರಾಕರಿಸಿದ್ದರು.
ಅಯೋಧ್ಯೆ ರಾಮ ಜನ್ಮಭೂಮಿ ವಿವಾದದ ನಂತರ ದೇಶದಲ್ಲಿ ಹುಟ್ಟಿಕೊಂಡ ಹಲವಾರು ಮಂದಿರ-ಮಸೀದಿ ವಿವಾದಗಳಲ್ಲಿ ಜ್ಞಾನವಾಪಿಯೂ ಒಂದು. ಪುರಾತತ್ವ ಇಲಾಖೆಯ ವರದಿಯನ್ನು ಒಂದು ತಿಂಗಳ ಹಿಂದೆ ಮುಚ್ಚಿದ ಲಕೋಟೆಯಲ್ಲಿ ನ್ಯಾಯಾಲಯಕ್ಕೆ ಸಲ್ಲಿಸಿತ್ತು. ಅಯೋಧ್ಯೆ ದೇವಾಲಯದ ಪ್ರಾಣಪ್ರತಿಷ್ಠಾಪನೆ ಕಾರ್ಯಕ್ರಮದ ನಂತರ ಈ ವರದಿ ಬಹಿರಂಗಗೊಂಡಿದೆ.
ಗುರುವಾರ ಸಂಜೆ ಪತ್ರಿಕಾಗೋಷ್ಠಿಯಲ್ಲಿ ಅರ್ಜಿದಾರರ ಪರ ವಕೀಲ ವಿಷ್ಣು ಜೈನ್ ವರದಿಯ ಆಯ್ದ ಭಾಗಗಳನ್ನು ಓದಿದರು. "ಪುರಾತತ್ವ ಇಲಾಖೆಯು ತನ್ನ ಸಮೀಕ್ಷೆಯಲ್ಲಿ, ಪೂರ್ವ ಅಸ್ತಿತ್ವದಲ್ಲಿರುವ ರಚನೆ ಮತ್ತು ಕಾರಿಡಾರ್ ಪಕ್ಕದಲ್ಲಿನ ಬಾವಿಯನ್ನು ಕಂಡುಹಿಡಿದಿದೆ. ಸೆಂಟ್ರಲ್ ಚೇಂಬರ್ ಮತ್ತು ಮುಖ್ಯ ದ್ವಾರವು ಮೊದಲೇ ಅಸ್ತಿತ್ವದಲ್ಲಿರುವ ರಚನೆಯನ್ನು ಹೊಂದಿದೆ. ಇಲಾಖೆಯು ತನ್ನ ಸಮೀಕ್ಷೆಯಲ್ಲಿ ಕಂಬಗಳು ಮತ್ತು ಅವುಗಳ ಮೇಲಿನ ರಚನೆಗಳನ್ನು ಅಧ್ಯಯನ ಮಾಡಿದೆ. ಎಲ್ಲವೂ ದೇವಾಲಯದ ಭಾಗವಾಗಿದೆ ಎಂದು ಹೇಳಿದೆ" ಎಂದು ಪುರಾತತ್ವ ಇಲಾಖೆ ವರದಿಯನ್ನು ಜೈನ್ ಓದಿ ಹೇಳಿದರು.
"ಹಿಂದೂ ದೇವಾಲಯದ 34 ಶಾಸನಗಳು ಆವರಣದಲ್ಲಿ ಕಂಡುಬಂದಿವೆ. ಶಾಸನಗಳು ದೇವನಾಗರಿ, ತೆಲುಗು ಮತ್ತು ಕನ್ನಡದಲ್ಲಿವೆ. ಜನಾರ್ದನ, ರುದ್ರ ಮತ್ತು ಉಮೇಶ್ವರ ದೇವತೆಗಳ ಹೆಸರುಗಳು ಶಾಸನಗಳಲ್ಲಿ ಕಂಡುಬರುತ್ತವೆ" ಎಂದರು.
ಜ್ಞಾನವಾಪಿ ಮಸೀದಿ ಆವರಣದಲ್ಲಿ ಕಳೆದ ಆಗಸ್ಟ್ 4ರಿಂದ ಪುರಾತತ್ವ ಇಲಾಖೆ ಸರ್ವೆ ನಡೆಸುತ್ತಿತ್ತು.