ಜಿಲ್ಲಾಧಿಕಾರಿಗಳಿಗೆ ಈಡಿಸಮನ್ಸ್ ವಿರುದ್ಧ ಹೈಕೋರ್ಟ್ ಮೆಟ್ಟಿಲೇರಿದ ತಮಿಳುನಾಡು ಸರಕಾರ
ಮದ್ರಾಸ್ ಉಚ್ಚ ನ್ಯಾಯಾಲಯ | Photo : PTI
ಚೆನ್ನೈ: ತಮಿಳುನಾಡು ಸರಕಾರವು ರಾಜ್ಯದ 10 ಜಿಲ್ಲಾಧಿಕಾರಿಗಳಿಗೆ ಜಾರಿ ನಿರ್ದೇಶನಾಲಯ (ಈಡಿ)ದ ಸಮನ್ಸ್ ವಿರುದ್ಧ ಮದ್ರಾಸ್ ಉಚ್ಚ ನ್ಯಾಯಾಲಯದ ಮೆಟ್ಟಿಲನ್ನೇರಿದೆ.
ತಮಿಳುನಾಡಿನಲ್ಲಿ ನದಿ ಮರಳು ಗಣಿಗಾರಿಕೆ ಮತ್ತು ಮಾರಾಟದಲ್ಲಿ ಅಕ್ರಮಗಳು ಮತ್ತು ಅವ್ಯವಹಾರಗಳು ನಡೆದಿವೆ ಎಂಬ ಆರೋಪಗಳ ಕುರಿತು ತನ್ನ ತನಿಖೆಯ ಭಾಗವಾಗಿ ಈಡಿ ಜಿಲ್ಲಾಧಿಕಾರಿಗಳಿಗೆ ಸಮನ್ಸ್ ಜಾರಿಗೊಳಿಸಿದೆ.
ಅಕ್ರಮವಾಗಿ ತೆಗೆಯಲಾಗಿದ್ದ ಮರಳಿನ ಮಾರಾಟಕ್ಕಾಗಿ ಕಾರ್ಯವಿಧಾನದ ವಿವರಗಳನ್ನು ಸಂಗ್ರಹಿಸಲು ಈಡಿ ಈ ಹಿಂದೆ ಜಲ ಸಂಪನ್ಮೂಲಗಳ ಇಲಾಖೆಯ ಇಂಜಿನಿಯರ್ಗಳ ವಿಚಾರಣೆಯನ್ನು ನಡೆಸಿತ್ತು. ಅವರು ಜಿಲ್ಲಾಧಿಕಾರಿಗಳತ್ತ ಬೆಟ್ಟು ಮಾಡಿದ್ದರು ಎನ್ನಲಾಗಿದೆ.
ಈಡಿ ಕೆಲವರನ್ನಷ್ಟೇ ಆಯ್ಕೆ ಮಾಡಿಕೊಳ್ಳುವ ಮೂಲಕ ತನ್ನ ಅಧಿಕಾರವನ್ನು ಬಳಸುತ್ತಿದೆ ಎಂದು ಅರ್ಜಿಯಲ್ಲಿ ಆರೋಪಿಸಿರುವ ಡಿಎಂಕೆ ಸರಕಾರವು, ಬಿಜೆಪಿ ಆಡಳಿತ ನಡೆಸುತ್ತಿರುವ ರಾಜ್ಯಗಳಲ್ಲಿಯ ಇದೇ ರೀತಿಯ ಅಪರಾಧಗಳಲ್ಲಿ ತನಿಖೆಯನ್ನು ನಡೆಸಲಾಗುತ್ತಿಲ್ಲವೇಕೆ ಎಂದು ಪ್ರಶ್ನಿಸಿದೆ.
ಈಡಿ ತನಿಖೆಯ ರಾಜಕೀಯ ಪರಿಣಾಮಗಳನ್ನು ಕಡೆಗಣಿಸುವಂತಿಲ್ಲ ಎಂದು ಹೇಳಿದ ತಮಿಳುನಾಡು ಸರಕಾರದ ಹಿರಿಯ ಕಾನೂನು ಸಲಹೆಗಾರರೋರ್ವರು, ಈಡಿ ಕ್ರಮಗಳು ಅದರ ಅಧಿಕಾರದ ಅತಿಕ್ರಮಣ ಮಾತ್ರವಲ್ಲ, ಪ್ರತಿಪಕ್ಷಗಳ ಆಡಳಿತವಿರುವ ರಾಜ್ಯಗಳನ್ನು ದುರ್ಬಲಗೊಳಿಸಲು ಬಿಜೆಪಿ ನೇತೃತ್ವದ ಕೇಂದ್ರ ಸರಕಾರದ ವ್ಯೂಹಾತ್ಮಕ ಕ್ರಮವೂ ಆಗಿದೆ ಎಂದರು.
ತನಿಖೆ ನಡೆಸುತ್ತಿರುವ ಪ್ರಕರಣಗಳ ವಿವರಗಳನ್ನು ಜಿಲ್ಲಾಧಿಕಾರಿಗಳಿಗೆ ನೀಡದೆ ತಮ್ಮ ಆಧಾರ್ ಕಾರ್ಡ್ಗಳೊಂದಿಗೆ ತನ್ನೆದುರು ಹಾಜರಾಗುವಂತೆ ಈಡಿ ಅವರಿಗೆ ಸೂಚಿಸಿದೆ ಎಂಬ ವರದಿಯ ಹಿನ್ನೆಲೆಯಲ್ಲಿ ರಾಜ್ಯ ಸರಕಾರವು ಈಡಿತನಿಖೆಯನ್ನು ವಿಷಯಕ್ಕೆ ಸಂಬಂಧವೇ ಇಲ್ಲದ ವಿಚಾರಣೆ ಎಂದೂ ಬಣ್ಣಿಸಿದೆ.
ಅಕ್ರಮ ಹಣ ವರ್ಗಾವಣೆ ಕಾಯ್ದೆಯಡಿ ಈಡಿವ ಕ್ರಮಗಳು ರಾಜ್ಯದ ಅಧಿಕಾರ ವ್ಯಾಪ್ತಿಯಲ್ಲಿರುವ ವಿಷಯಗಳನ್ನು, ವಿಶೇಷವಾಗಿ ಗಣಿಗಳು ಮತ್ತು ಖನಿಜಗಳ ನಿಯಂತ್ರಣವನ್ನು ಅತಿಕ್ರಮಿಸುತ್ತವೆ ಎಂದು ಅದು ಹೇಳಿದೆ.
ಯಾವುದೇ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಜಿಲ್ಲಾಧಿಕಾರಿಗಳು ಆರೋಪಿಗಳೂ ಅಲ್ಲ,ಸಾಕ್ಷಿಗಳೂ ಅಲ್ಲ ಎಂದು ತನ್ನ ಅರ್ಜಿಯಲ್ಲಿ ಹೇಳಿರುವ ಸರಕಾರವು, ಸಮನ್ಸ್ ಮತ್ತು ಮುಂದಿನ ಪ್ರಕ್ರಿಯೆಗಳಿಗೆ ಮಧ್ಯಂತರ ತಡೆಯನ್ನು ನೀಡುವಂತೆ ಉಚ್ಚ ನ್ಯಾಯಾಲಯವನ್ನು ಕೋರಿದೆ.