ಜಮ್ಮು ಕಾಶ್ಮೀರದ ತೆಹ್ರೀಕ್-ಇ-ಹುರಿಯತ್ ಸಂಘಟನೆ ನಿಷೇಧಿಸಿದ ಕೇಂದ್ರ ಸರಕಾರ
Photo: PTI
ಹೊಸದಿಲ್ಲಿ: ಮತ್ತು ಕೇಂದ್ರಾಡಳಿತ ಪ್ರದೇಶದಲ್ಲಿ ಭಾರತ ವಿರೋಧಿ ಪ್ರಚಾರವನ್ನು ಹರಡುತ್ತಿರುವ, ಭಯೋತ್ಪಾದನೆಯನ್ನು ಉತ್ತೇಜಿಸುವ ಜಮ್ಮು ಮತ್ತು ಕಾಶ್ಮೀರದ ಪಾಕಿಸ್ತಾನದ ಪರ ಪ್ರತ್ಯೇಕತಾವಾದಿ ಸಂಘಟನೆ ತೆಹ್ರೀಕ್-ಎ-ಹುರಿಯತ್ (ಟಿಇಹೆಚ್) ಅನ್ನು ಕೇಂದ್ರ ಸರಕಾರ ರವಿವಾರ ನಿಷೇಧಿಸಿದೆ ಎಂದು ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ.
ತೆಹ್ರೀಕ್-ಇ-ಹುರಿಯತ್ ಸಂಘಟನೆಯು ಜಮ್ಮು ಮತ್ತು ಕಾಶ್ಮೀರದಲ್ಲಿ ಭಾರತ ವಿರೋಧಿ ಪ್ರಚಾರ ನಡೆಸುತ್ತಾ ಭಯೋತ್ಪಾದಕ ಚಟುವಟಿಕೆಗಳನ್ನು ಉತ್ತೇಜಿಸುತ್ತಿರುವುದು ಕಂಡುಬಂದಿದೆ ಎಂದು ಅವರು ಹೇಳಿದ್ದಾರೆ ಎಂದು ndtv ವರದಿ ಮಾಡಿದೆ.
ಭಯೋತ್ಪಾದನೆ ವಿರುದ್ಧ ಪ್ರಧಾನಿ ನರೇಂದ್ರ ಮೋದಿಯವರ ಶೂನ್ಯ ಸಹಿಷ್ಣುತೆಯ ನೀತಿಯ ಅಡಿಯಲ್ಲಿ, ಭಾರತ ವಿರೋಧಿ ಚಟುವಟಿಕೆಗಳಲ್ಲಿ ತೊಡಗಿರುವ ಯಾವುದೇ ವ್ಯಕ್ತಿ ಅಥವಾ ಸಂಘಟನೆಯನ್ನು ತಡೆಯಲಾಗುವುದು ಎಂದು ಅಮಿತ್ ಶಾ ಹೇಳಿದ್ದಾರೆ.
ಪಾಕಿಸ್ತಾನ ಪರವಾಗಿರುವ ತೆಹ್ರೀಕ್-ಇ-ಹುರಿಯತ್ ಹಿಂದೆ ಪ್ರತ್ಯೇಕತಾವಾದಿ ನಾಯಕ ದಿವಂಗತ ಸೈಯದ್ ಅಲಿ ಶಾ ಗಿಲಾನಿ ಅವರ ನೇತೃತ್ವದಲ್ಲಿತ್ತು. ನಂತರ ಮಸರತ್ ಆಲಂ ಭಟ್ ಅವರು ಅಧಿಕಾರ ವಹಿಸಿಕೊಂಡರು. ಭಟ್ ಅವರು ಭಾರತ ವಿರೋಧಿ ಮತ್ತು ಪಾಕಿಸ್ತಾನದ ಪರ ಪ್ರಚಾರಕ್ಕೂ ಹೆಸರುವಾಸಿಯಾಗಿದ್ದಾರೆ ಎಂದು ತಿಳಿದು ಬಂದಿದೆ.