ಪರಮಾಣು ಅಸ್ತ್ರಗಳ ಬೆದರಿಕೆ ಅಸ್ವೀಕಾರಾರ್ಹ; ಜಿ20 ಶೃಂಗ ಸಮ್ಮೇಳನದಲ್ಲಿ ಘೋಷಣೆ
Photo: twitter \ @g20org
ಹೊಸದಿಲ್ಲಿ: ಉಕ್ರೇನ್ ನಲ್ಲಿ ‘‘ಸಮಗ್ರ, ನ್ಯಾಯೋಚಿತ ಮತ್ತು ಶಾಶ್ವತ ಶಾಂತಿ’’ನೆಲೆಸುವಂತೆ ಮಾಡುವ ಪ್ರಯತ್ನಗಳಿಗಾಗಿ ಜಿ20 ನಾಯಕರು ಶನಿವಾರ ಇಲ್ಲಿ ಅಂಗೀಕರಿಸಿದ ಒಮ್ಮತದ ಘೋಷಣೆ ಕರೆ ನೀಡಿದೆ. ಇನ್ನೊಂದು ದೇಶದ ಭೂಭಾಗವನ್ನು ವಶಪಡಿಸಿಕೊಳ್ಳಲು ಬಲ ಪ್ರಯೋಗ ನಡೆಸುವ ಬೆದರಿಕೆ ಹಾಕದಂತೆ ಮತ್ತು ಯಾವುದೇ ದೇಶದ ಪ್ರಾದೇಶಿಕ ಸಮಗ್ರತೆಯ ವಿರುದ್ಧವಾಗಿ ಕೆಲಸ ಮಾಡದಂತೆಯೂ ಅದು ತನ್ನ ಸದಸ್ಯರಿಗೆ ಕರೆ ನೀಡಿದೆ. ಪರಮಾಣು ಶಸ್ತ್ರಗಳ ಬಳಕೆ ಅಥವಾ ಬಳಸುವ ಬೆದರಿಕೆಯು ‘‘ಅಸ್ವೀಕಾರಾರ್ಹ’’ ಎಂಬುದಾಗಿಯೂ ಜಿ20 ಘೋಷಣೆ ಹೇಳಿದೆ.
‘‘ಪ್ರಾದೇಶಿಕ ಸಮಗ್ರತೆ ಮತ್ತು ಸಾರ್ವಭೌಮತೆ, ಅಂತರ್ರಾಷ್ಟ್ರೀಯ ಮಾನವೀಯ ಕಾನೂನು ಹಾಗೂ ಶಾಂತಿ ಮತ್ತು ಸ್ಥಿರತೆಯನ್ನು ಖಾತರಿಪಡಿಸುವ ಬಹುಪಕ್ಷೀಯ ವ್ಯವಸ್ಥೆ ಸೇರಿದಂತೆ ಅಂತರ್ರಾಷ್ಟ್ರೀಯ ಕಾನೂನಿನ ತತ್ವಗಳನ್ನು ಎತ್ತಿಹಿಡಿಯುವಂತೆ ಎಲ್ಲಾ ದೇಶಗಳಿಗೆ ನಾವು ಕರೆ ನೀಡುತ್ತೇವೆ. ಸಂಘರ್ಷಗಳಿಗೆ ಶಾಂತಿಯುತ ಪರಿಹಾರಗಳನ್ನು ಕಂಡುಕೊಳ್ಳುವುದು, ಬಿಕ್ಕಟ್ಟುಗಳನ್ನು ಪರಿಹರಿಸಲು ಪ್ರಯತ್ನಗಳನ್ನು ಮಾಡುವುದು ಹಾಗೂ ರಾಜತಾಂತ್ರಿಕ ಕ್ರಮಗಳು ಮತ್ತು ಮಾತುಕತೆಗಳಿಗೆ ಮುಂದಾಗುವುದು ಅತ್ಯಂತ ಮಹತ್ವದ್ದಾಗಿದೆ. ಜಾಗತಿಕ ಆರ್ಥಿಕತೆಯ ಮೇಲೆ ಯುದ್ಧ ಬೀರುವ ನಕಾರಾತ್ಮಕ ಪರಿಣಾಮವನ್ನು ನಾವು ಜೊತೆಯಾಗಿ ನಿಭಾಯಿಸುತ್ತೇವೆ. ಉಕ್ರೇನ್ನಲ್ಲಿ ಸಮಗ್ರ, ನ್ಯಾಯೋಚಿತ ಮತ್ತು ಶಾಶ್ವತ ಶಾಂತಿಯನ್ನು ಖಾತರಿಪಡಿಸುವ ಎಲ್ಲಾ ರಚನಾತ್ಮಕ ಕ್ರಮಗಳನ್ನು ನಾವು ಸ್ವಾಗತಿಸುತ್ತೇವೆ’’ ಎಂದು ಘೋಷಣೆ ಹೇಳೀದೆ.
ಘೋಷಣೆಯ ಅಂಗೀಕಾರವನ್ನು ಪ್ರಧಾನಿ ನರೇಂದ್ರ ಮೋದಿ ಪ್ರಕಟಿಸಿದರು.
‘‘ಉಕ್ರೇನ್ ಯುದ್ಧವು ಜಾಗತಿಕ ಆಹಾರ ಮತ್ತು ಇಂಧನ ಭದ್ರತೆ, ಪೂರೈಕೆ ಸರಪಣಿಗಳು, ಆರ್ಥಿಕ ಸ್ಥಿರತೆ, ಹಣದುಬ್ಬರ ಮತ್ತು ಬೆಳವಣಿಗೆ ಮೇಲೆ ಬೀರಿದ ನಕಾರಾತ್ಮಕ ಪರಿಣಾಮಗಳು ಮತ್ತು ಮಾನವ ರೋದನವನ್ನು ನಾವು ಎತ್ತಿಹಿಡಿದಿದ್ದೇವೆ. ಈ ಅಂಶಗಳು ದೇಶಗಳ, ಅದರಲ್ಲೂ ಮುಖ್ಯವಾಗಿ ಅಭಿವೃದ್ಧಿಶೀಲ ಮತ್ತು ಕನಿಷ್ಠ ಅಭಿವೃದ್ಧಿ ಸಾಧಿಸಿರುವ ದೇಶಗಳ ನೀತಿಗಳನ್ನು ಸಂಕೀರ್ಣಗೊಳಿಸಿವೆ. ಈ ದೇಶಗಳು ಕೋವಿಡ್-19 ಸಾಂಕ್ರಾಮಿಕ ಮತ್ತು ಅದರ ಆರ್ಥಿಕ ದುಷ್ಪರಿಣಾಮಗಳಿಂದ ಈಗಲೂ ಚೇತರಿಸಿಕೊಂಡಿಲ್ಲ’’ ಎಂದು ಘೋಷಣೆ ಹೇಳಿದೆ.
ಜಿ20 ಘೋಷಣೆಯ ಮುಖ್ಯಾಂಶಗಳು:
►ಉಕ್ರೇನ್ ನಲ್ಲಿ ನಡೆಯುತ್ತಿರುವ ಯುದ್ಧಕ್ಕೆ ಸಂಬಂಧಿಸಿ ಎಲ್ಲಾ ದೇಶಗಳು ವಿಶ್ವಸಂಸ್ಥೆ ಸನ್ನದಿನ ಉದ್ದೇಶಗಳು ಮತ್ತು ತತ್ವಗಳಿಗೆ ಅನುಗುಣವಾಗಿ ನಡೆದುಕೊಳ್ಳಬೇಕು.
►ಉಕ್ರೇನ್ ನಲ್ಲಿ ನಡೆಯುತ್ತಿರುವ ಯುದ್ಧಕ್ಕೆ ಸಂಬಂಧಿಸಿ ಎಲ್ಲಾ ದೇಶಗಳು ಯಾವುದೇ ದೇಶದ ಪ್ರಾದೇಶಿಕ ಸಮಗ್ರತೆ ಮತ್ತು ಸಾರ್ವಭೌಮತೆ ಅಥವಾ ರಾಜಕೀಯ ಸ್ವಾತಂತ್ರಕ್ಕೆ ವಿರುದ್ಧವಾಗಿ ಭೂಭಾಗವನ್ನು ವಶಪಡಿಸಿಕೊಳ್ಳಲು ಬಯಪ್ರಯೋಗ ಮಾಡಬಾರದು ಮತ್ತು ಬೆದರಿಕೆ ಹಾಕಬಾರದು
►ಉಕ್ರೇನ್ ನಲ್ಲಿ ನಡೆಯುತ್ತಿರುವ ಯುದ್ಧದಲ್ಲಿ, ಪರಮಾಣು ಅಸ್ತ್ರಗಳ ಬಳಕೆ ಅಥವಾ ಅದನ್ನು ಬಳಸುವ ಬೆದರಿಕೆಯು ಅಸ್ವೀಕಾರಾರ್ಹ.
►ಉಕ್ರೇನ್ ಬಿಕ್ಕಟ್ಟಿನ ಬಗ್ಗೆ ಭಿನ್ನ ನಿಲುವುಗಳು ಮತ್ತು ಭಿನ್ನ ವೀಕ್ಷಣೆಗಳಿವೆ.
►ರಶ್ಯ ಮತ್ತು ಉಕ್ರೇನ್ ನ ಧಾನ್ಯಗಳು, ಆಹಾರವಸ್ತುಗಳು ಮತ್ತು ರಸಗೊಬ್ಬರಗಳ ತುರ್ತು ಹಾಗೂ ಅನಿರ್ಬಂಧಿತ ವಿತರಣೆಯನ್ನು ಖಾತ್ರಿಪಡಿಸಲು ರಶ್ಯ ಮತ್ತು ಉಕ್ರೇನ್ಗೆ ಕರೆ.
►ಸಮಪ್ರಮಾಣದ ಬೆಳವಣಿಗೆಗೆ ಉತ್ತೇಜನ ಮತ್ತು ಆರ್ಥಿಕ ಸ್ಥಿರತೆಗೆ ಒತ್ತು ನೀಡುವ ಮೂಲಕ ದುರ್ಬಲರನ್ನು ರಕ್ಷಿಸಬೇಕು.
►ರಾಷ್ಟ್ರೀಯ ಪರಿಸ್ಥಿತಿಗೆ ಅನುಗುಣವಾಗಿ, ಕಲ್ಲಿದ್ದಲು ವಿದ್ಯುತ್ ನ ಬಳಕೆಯನ್ನು ಹಂತ ಹಂತವಾಗಿ ತಗ್ಗಿಸಲು ಪ್ರಯತ್ನಗಳನ್ನು ಹೆಚ್ಚಿಸಬೇಕು.
►ಇಂಗಾಲದ ಡೈ ಆಕ್ಸೈಡ್ ಹೊರಸೂಸುವಿಕೆ ಪ್ರಮಾಣವನ್ನು ಕಡಿಮೆ ಮಾಡುವಂತೆ ಅಭಿವೃದ್ಧಿಶೀಲ ದೇಶಗಳನ್ನು ಉತ್ತೇಜಿಸಲು ಕಡಿಮೆ ಬಡ್ಡಿದರದಲ್ಲಿ ಸಾಲ ನೀಡುವ ಬಗ್ಗೆ ಪರಿಶೀಲನೆ.