ನೀರು ಇಳಿಯುತ್ತಿದ್ದರೂ ಅಪಾಯದ ಮಟ್ಟ ಮೀರಿ ಹರಿಯುತ್ತಿರುವ ಯಮುನಾ ನದಿ
Photo : PTI
ಹೊಸದಿಲ್ಲಿ: ತಮ್ಮ ಮನೆ ಹಾಗೂ ಅಂಗಡಿಗಳನ್ನು ಆವರಿಸಿದ ಯಮುನಾ ನದಿ ನೀರು ಇಳಿಯುತ್ತಿರುವಂತೆ ನಿವಾಸಿಗಳು ಉತ್ತರ ದಿಲ್ಲಿಗೆ ಹಿಂದಿರುಗಿದ್ದಾರೆ.
ಕಳೆದ ಒಂದು ವಾರದಿಂದ ದಿಲ್ಲಿಯಲ್ಲಿ ದಾಖಲೆಯ ನೆರೆ ಸಂಭವಿಸಿದೆ. ಪರಿಸ್ಥಿತಿ ನಿಯಂತ್ರಿಸಲು ಆಡಳಿತ ಹೋರಾಟ ನಡೆಸಿತ್ತು. ಹಾನಿಗೀಡಾದ ರೆಗ್ಯುಲೇಟರ್ ಹಾಗೂ ಒಟಿಐ ಅಣೆಕಟ್ಟಿನ ಚಲಿಸದ ಗೇಟನ್ನು ದುರುಸ್ಥಿ ಮಾಡಲು ಆಡಳಿತ ಭಾರತೀಯ ಸೇನಾ ಪಡೆ ಹಾಗೂ ಭಾರತೀಯ ನೌಕಾ ಪಡೆಯ ನೆರವು ಕೋರಿತ್ತು.
ಯುಮುನಾ ನದಿ ನೀರಿನ ಮಟ್ಟ ಇಳಿಕೆಯಾಗಿದ್ದರೂ ಅದು ಅಪಾಯದ ಮಟ್ಟ 205.33 ಮೀಟರ್ ಗಿಂತ ಮೇಲೆಯೇ ಇದೆ. ಅಲ್ಲದೆ, ಯಮುನಾ ಬಝಾರ್, ನಿಗಮ್ಬೋಧ್ ಘಾಟ್ ನಂತಹ ಪ್ರದೇಶಗಳು ಜಲಾವೃತವಾಗಿಯೇ ಇದೆ.
ಯಮುನಾ ನದಿಯ ನೀರಿನ ಮಟ್ಟ ಶನಿವಾರ ಬೆಳಗ್ಗೆ ಇಳಿಕೆಯಾಗಿತ್ತು. ಆದರೆ, ಸಂಜೆ ಸುರಿದ ಮಳೆಯಿಂದ ಮತ್ತೆ ನೀರಿನ ಮಟ್ಟ ಹೆಚ್ಚಾಗಿ ಹಲವು ರಸ್ತೆಗಳು ಜಲಾವೃತವಾಯಿತು.
ಚಂದ್ರವಾಲ್ ಜಲ ಸಂಸ್ಕರಣಾ ಘಟಕವನ್ನು ಕೂಡ ಆರಂಭಿಸಲಾಗುವುದು ಎಂದು ದಿಲ್ಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ರವಿವಾರ ಬೆಳಗ್ಗೆ ಹೇಳಿದ್ದಾರೆ.
ಈ ಹಿಂದೆ ಯಮುನಾ ನದಿ ನೀರು ಏರಿಕೆಯಾದ ಹಿನ್ನೆಲೆಯಲ್ಲಿ ಒಖ್ಲಾ, ಚಂದ್ರವಾಲ್ ಹಾಗೂ ವಝೀರಾಬಾದ್ ಜಲ ಸಂಸ್ಕರಣಾ ಘಟಕಗಳನ್ನು ಮುಚ್ಚಲಾಗಿತ್ತು.
ಓಖ್ಲಾ ಜಲ ಸಂಸ್ಕರಣಾ ಘಟಕ ಶುಕ್ರವಾರ ಕಾರ್ಯಾಚರಿಸಲು ಆರಂಭಿಸಿತ್ತು. ಚಂದ್ರವಾಲ್ ಹಾಗೂ ವಝೀರಾಬಾದ್ ಘಟಕವನ್ನು ರವಿವಾರ ಆರಂಭಿಸುವ ಸಾಧ್ಯತೆ ಇದೆ ಎಂದು ದಿಲ್ಲಿ ಸರಕಾರ ಹೇಳಿತ್ತು.