ಕೇಜ್ರಿವಾಲ್ ರನ್ನು ನಿಧಾನವಾಗಿ ಸಾಯಿಸಲು ಸಂಚು ನಡೆಯುತ್ತಿದೆ: ಆಪ್ ಆರೋಪ
ಅರವಿಂದ ಕೇಜ್ರಿವಾಲ್ | PC : PTI
ಹೊಸದಿಲ್ಲಿ: ದಿಲ್ಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ರಗೆ ಅವರಿಗೆ ಇನ್ಸುಲಿನ್ ಔಷಧಿ ಹಾಗೂ ಅವರ ವೈದ್ಯರ ಜೊತೆ ಸಮಲೋಚನೆಗೆ ಅವಕಾಶ ನಿರಾಕರಿಸುವ ಮೂಲಕ ಅವರನ್ನು ನಿಧಾನ ಸಾವಿನೆಡೆಗೆ ದೂಡುವ ಸಂಚನ್ನು ರೂಪಿಸಲಾಗಿದೆಯೆಂದು ಆಮ್ ಆದ್ಮಿ ಪಕ್ಷವು ಶನಿವಾರ ಆಪಾದಿಸಿದೆ.
‘‘ಕೇಜ್ರಿವಾಲ್ ಅವರ ನಿಧಾನ ಸಾವಿಗೆ ಸಂಚೊಂದು ನಡೆಯುತ್ತಿದೆಯೆಂದು ನಾನು ಸಂಪೂರ್ಣ ಹೊಣೆಗಾರಿಕೆಯೊಂದಿಗೆ ಹೇಳುತ್ತಿದ್ದೇನೆ’’ ಎಂದು ಪಕ್ಷದ ವಕ್ತಾರ ಹಾಗೂ ದಿಲ್ಲಿ ಸಚಿವ ಸೌರಭ್ ಭಾರದ್ವಜ್ ತಿಳಿಸಿದ್ದಾರೆ.
ಕೇಜ್ರಿವಾಲ್ ಅವರ ರಕ್ತದಲ್ಲಿನ ಸಕ್ಕರೆ ಪ್ರಮಾಣದ ರೀಡಿಂಗ್ ಗಳನ್ನು ಉಲ್ಲೇಖಿಸಿದ ಅವರು, ದಿಲ್ಲಿ ಮುಖ್ಯಮಂತ್ರಿಗೆ ಇನ್ಸುಲಿನ್ ನಿರಾಕರಿಸುತ್ತಿರುವುದಕ್ಕಾಗಿ ತಿಹಾರ್ ಜೈಲಿನ ಆಡಳಿತಾಧಿಕಾರಿಗಳು,ಬಿಜೆಪಿ, ಕೇಂದ್ರ ಸರಕಾರ ಮತ್ತು ದಿಲ್ಲಿ ಲೆಫ್ಟಿನೆಂಟ್ ಗವರ್ನರ್ ಅವರನ್ನು ತರಾಟೆಗೆ ತೆಗೆದುಕೊಂಡರು. ಕೇಜ್ರಿವಾಲ್ ಅವರು ಕಳೆದ 20-22 ವರ್ಷಗಳಿಂದ ಮಧುಮೇಹದಿಂದ ಬಳಲುತ್ತಿದ್ದಾರೆ ಎಂದರು.
ತನ್ನ ರಕ್ತದಲ್ಲಿನ ಸಕ್ಕರೆ ಪ್ರಮಾಣದ ಮೇಲೆ ನಿಗಾವಿರಿಸಲು ಜೈಲಿನಲ್ಲಿ ಉಪಕರಣವೊಂದನ್ನು ಬಳಸಲು ಕೇಜ್ರಿವಾಲ್ ಅವರಿಗೆ ದಿಲ್ಲಿ ನ್ಯಾಯಾಲಯ ಅನುಮತಿ ನೀಡಿದೆಯೆಂದು ಭಾರದ್ವಜ್ ತಿಳಿಸಿದರು.
‘‘ ಒಟ್ಟಾರೆಯಾಗಿ, ಕೇಜ್ರಿವಾಲ್ರ ಬಹು ಅಂಗಾಂಗಗಳಿಗೆ ಹಾನಿಯುಂಟು ಮಾಡುವ ಮತ್ತು ಅವರನ್ನು ಮುಗಿಸುವ ಸಂಚು ನಡೆಯುತ್ತಿದೆ. 2-4 ತಿಂಗಳುಗಳ ಬಳಿಕ ಜೈಲಿನಿಂದ ಹೊರಬಂದಾಗ ಅವರು ಮೂತ್ರಕೋಶ, ಹೃದಯ ಮತ್ತಿತರ ಅಂಗಾಂಗಗಳ ಚಿಕಿತ್ಸೆಗಾಗಿ ತೆರಳಬೇಕಾಗುತ್ತದೆ’’ ಎಂದು ದಿಲ್ಲಿ ಆರೋಗ್ಯ ಸಚಿವರೂ ಆದ ಸೌರಭ್ ಭಾರದ್ವಜ್ ತಿಳಿಸಿದರು.
ಕೇಜ್ರಿವಾಲ್ರ ಬಂಧನವಾದಾಗಿನಿಂದ ಅವರ ರಕ್ತದಲ್ಲಿನ ಸಕ್ಕರೆ ಪ್ರಮಾಣವನ್ನು ನಿಯಂತ್ರಿಸುವುದಕ್ಕೆ ಬೇಕಾದ ಇನ್ಸುಲಿನ್ ಅನ್ನು ಒದಗಿಸಲಾಗಿಲ್ಲವೆಂದು ಅವರ ವಕೀಲ ಅಭಿಷೇಕ್ ಸಿಂಘ್ವಿ ಆಪಾದಿಸಿದ ಮರುದಿನವೇ ಸೌರಭ್ ಈ ಹೇಳಿಕೆ ನೀಡಿದ್ದಾರೆ.
ಇದಕ್ಕೂ ಮುನ್ನ ಜಾರಿ ನಿರ್ದೇಶನಾಲಯವು ನ್ಯಾಯಾಲಯಕ್ಕೆ ನೀಡಿದ ಹೇಳಿಕೆಯೊಂದರಲ್ಲಿ, ಕೇಜ್ರಿವಾಲ್ ಅವರು ಟೈಪ್ 2 ಡಯಾಬಿಟೀಸ್ ಅನ್ನು ಹೊಂದಿದ್ದರೂ, ವೈದ್ಯಕೀಯ ನೆಲೆಯಲ್ಲಿ ಜಾಮೀನು ಬಿಡುಗಡೆ ಪಡೆಯಲು ಅಥವಾ ಆಸ್ಪತ್ರೆಗೆ ವರ್ಗಾವಣೆಗೊಳ್ಳುವಂತೆ ಮಾಡುವ ಸನ್ನಿವೇಶವನ್ನು ಸೃಷ್ಟಿಸಲು ಅವರು ಪ್ರತಿದಿನವೂ ಮಾವಿನ ಹಣ್ಣು ಹಾಗೂ ಸಿಹಿತಿಂಡಿಗಳನ್ನು ಉದ್ದೇಶಪೂರ್ವಕವಾಗಿ ಸೇವಿಸುತ್ತಿದ್ದರು ಎಂದು ಆಪಾದಿಸಿತ್ತು.
ಆದರೆ ಜಾರಿ ನಿರ್ದೇಶನಾಲಯದ ಆರೋಪವನ್ನು ಕೇಜ್ರಿವಾಲ್ ನ್ಯಾಯಾಲಯದಲ್ಲಿ ನಿರಾಕರಿಸಿದ್ದರು. ತನ್ನ ವೈದ್ಯರು ಸಿದ್ದಪಡಿಸಿದ ಪಥ್ಯಾಹಾರದ ಪಟ್ಟಿಗೆ ಅನುಗುಣವಾಗಿ ತಾನು ಆಹಾರ ಸೇವಿಸುತ್ತಿರುವುದಾಗಿ ಸ್ಪಷ್ಟಪಡಿಸಿದ್ದರು.
ಈಗ ರದ್ದುಗೊಂಡಿರುವ 2021-22ನೇ ಸಾಲಿನ ಮದ್ಯನೀತಿಯಲ್ಲಿ ನಡೆದಿತ್ತೆನ್ನಲಾದ ಅವ್ಯವಹಾರಗಳಿಗೆ ಸಂಬಂಧಿಸಿದ ಕಪ್ಪುಹಣ ಬಿಳುಪು ಪ್ರಕರಣದಲ್ಲಿ ಕೇಜ್ರಿವಾಲ್ ಅವರನ್ನು ಜಾರಿ ನಿರ್ದೇಶನಾಲಯವು ಮಾರ್ಚ್ 21ರಂದು ಬಂಧಿಸಿದೆ.