ಉತ್ತರಾಖಂಡದ 24 ಗ್ರಾಮಗಳಲ್ಲಿ ಒಂದೂ ಮತಗಟ್ಟೆಯಿಲ್ಲ!
ಸಾಂದರ್ಭಿಕ ಚಿತ್ರ | PC : PTI
ಡೆಹ್ರಾಡೂನ್: ಲೋಕಸಭಾ ಚುನಾವಣೆಗಳಲ್ಲಿ ಮತದಾರರ ಪಾಲ್ಗೊಳ್ಳುವಿಕೆಯನ್ನು ಹೆಚ್ಚಿಸಲು ಚುನಾವಣಾ ಆಯೋಗವು ಪ್ರಯತ್ನಿಸುತ್ತಿದ್ದರೂ ಉತ್ತರಾಖಂಡದ 24 ಗ್ರಾಮಗಳು ಸ್ವಾತಂತ್ರ್ಯಾನಂತರ ಇದೇ ಮೊದಲ ಬಾರಿಗೆ ಮತದಾನದ ದಿನಾಂಕವಾದ ಎ.19ರಂದು ಒಂದೇ ಒಂದು ಮತಗಟ್ಟೆಯನ್ನು ಹೊಂದಿರುವುದಿಲ್ಲ. ಅಧಿಕೃತ ಪರಿಭಾಷೆಯಲ್ಲಿ ‘ನಿರ್ಜನ ಗ್ರಾಮಗಳು’ ಎಂದು ಉಲ್ಲೇಖಿಸಲಾಗಿರುವ ಇವುಗಳನ್ನು ಸ್ಥಳೀಯರು ‘ಭೂತ ಗ್ರಾಮಗಳು’ ಎಂದು ಕರೆಯುತ್ತಾರೆ.
ರಾಜ್ಯ ಚುನಾವಣಾ ಆಯೋಗವು ಒದಗಿಸಿರುವ ದತ್ತಾಂಶಗಳ ಪ್ರಕಾರ, ಸ್ವಾತಂತ್ರ್ಯಾನಂತರ ಕಳೆದ 16 ಲೋಕಸಭಾ ಚುನಾವಣೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದ 24 ಗ್ರಾಮಗಳಿಗೆ ಈ ಬಾರಿ ಮತದಾನದ ಹಕ್ಕನ್ನು ಚಲಾಯಿಸಲು ಸಾಧ್ಯವಾಗುವುದಿಲ್ಲ.
ರಾಜ್ಯ ವಲಸೆ ಆಯೋಗವು ವರದಿ ಮಾಡಿರುವಂತೆ ಈ ಗ್ರಾಮಗಳನ್ನು ‘ಜನವಸತಿಯಿಲ್ಲದ ಗ್ರಾಮಗಳು ’ಎಂದು ಇತ್ತೀಚಿಗೆ ಹೆಸರಿಸಿದ್ದು ಇವುಗಳನ್ನು ಚುನಾವಣಾ ಪ್ರಕ್ರಿಯೆಯಿಂದ ಹೊರಗಿಡಲು ಕಾರಣವಾಗಿರುವ ಆಶ್ಚರ್ಯಕರ ಅಂಶವಾಗಿದೆ. ಜನವಸತಿಯಿಲ್ಲ ಎಂದು ಪರಿಗಣಿಸಲಾಗಿರುವ ಈ ಗ್ರಾಮಗಳು ಅಲ್ಮೋರಾ,ತೆಹ್ರಿ, ಚಂಪಾವತ್,ಪೌಡಿ ಗಡ್ವಾಲ್,ಪಿಥೋಡಗಡ ಮತ್ತು ಚಮೋಲಿ ಜಿಲ್ಲೆಗಳಲ್ಲಿವೆ.
2023,ಫೆಬ್ರವರಿಯಲ್ಲಿ ಬಿಡುಗಡೆಗೊಂಡ ರಾಜ್ಯ ವಲಸೆ ಆಯೋಗದ ದ್ವೀತಿಯ ವರದಿಯು,2018 ಮತ್ತು 2022ರ ನಡುವೆ ರಾಜ್ಯದ 6,436 ಗ್ರಾಮ ಪಂಚಾಯತ್ ಗಳಿಂದ ತಾತ್ಕಾಲಿಕ ವಲಸೆಯ ಗಮನಾರ್ಹ ಪ್ರವೃತ್ತಿಯನ್ನು ಬೆಳಕಿಗೆ ತಂದಿದೆ. ‘ಉದ್ಯೋಗವನ್ನು ಹುಡುಕಿಕೊಂಡು ಮೂರು ಲಕ್ಷಕ್ಕೂ ಅಧಿಕ ಜನರು ತಮ್ಮ ಗ್ರಾಮಗಳನ್ನು ತೊರೆದಿದ್ದಾರೆ. ಹಾಗಿದ್ದರೂ ಈ ಜನರು ವಿರಳವಾಗಿ ತಮ್ಮ ಗ್ರಾಮಗಳಿಗೆ ಮರಳುತ್ತಿದ್ದಾರೆ. ಏಕಕಾಲದಲ್ಲಿ ರಾಜ್ಯದ 2067 ಗ್ರಾಮಗಳಿಂದ ಒಟ್ಟು 28,531 ಜನರು ಖಾಯಂ ವಲಸೆ ಹೋಗಿದ್ದಾರೆ. ಉದ್ಯೋಗ,ಶಿಕ್ಷಣ ಮತ್ತು ಆರೋಗ್ಯ ಸೌಲಭ್ಯಗಳ ಅನ್ವೇಷಣೆಯಲ್ಲಿ ತಮ್ಮ ಗ್ರಾಮಗಳನ್ನು ತೊರೆದಿರುವ ನಿವಾಸಿಗಳು ಮತ್ತೆ ವಾಪಸಾಗಿಲ್ಲ’ ಎಂದು ಅದು ಸ್ಪಷ್ಟವಾಗಿ ಹೇಳಿದೆ.
ವಲಸೆ ಆಯೋಗದ ಅಧ್ಯಯನವು ವರದಿಯಲ್ಲಿ ಉಲ್ಲೇಖಿಸಿರುವಂತೆ ಹಲವಾರು ಜನರು ತಮ್ಮ ಪೂರ್ವಜರ ಭೂಮಿಗಳನ್ನು ಮಾರಾಟ ಮಾಡಿದ್ದಾರೆ ಗ್ರಾಮಗಳನ್ನು ತೊರೆದಿದ್ದಾರೆ. ಹಲವಾರು ಹೊಲಗದ್ದೆಗಳು ಬೀಳುಬಿದ್ದಿವೆ.
ಇಂತಹ ಸನ್ನಿವೇಶದಲ್ಲಿ ‘ಜನವಸತಿಯಿಲ್ಲದ ಗ್ರಾಮಗಳು’ ಎಂದು ಹೆಸರಿಸಲಾಗಿರುವ ಈ 24 ಗ್ರಾಮಗಳು ಈ ಸಲ ಸಾರ್ವತ್ರಿಕ ಚುನಾವಣೆಯ ಯಾವುದೇ ಚಟುವಟಿಕೆಗಳಿಗೆ ಸಾಕ್ಷಿಯಾಗುವುದಿಲ್ಲ. ಈ ಗ್ರಾಮಗಳಲ್ಲಿ ಮತಗಟ್ಟೆಗಳು ಸ್ಥಾಪನೆಯಾಗುವುದಿಲ್ಲ,ಹೀಗಾಗಿ ಅಭ್ಯರ್ಥಿಗಳು ಇಲ್ಲಿ ಪ್ರಚಾರ ಮಾಡಲು ಯಾವುದೇ ಕಾರಣಗಳಿಲ್ಲ.