ಇವೆಲ್ಲ ಸುಳ್ಳು ಆರೋಪಗಳು, ಸಂಚುಕೋರರೇ ಸಂತ್ರಸ್ತರಂತೆ ಸೋಗು ಹಾಕಿದ್ದಾರೆ: ಯೂಟ್ಯೂಬರ್ ಧ್ರುವ್ ರಾಥಿ
ಧ್ರುವ್ ರಾಥಿಯ ಪೋಸ್ಟ್ ನಂತರ ಕೊಲೆ ಬೆದರಿಕೆಗಳು ಬರುತ್ತಿವೆ ಎಂದು ಆರೋಪಿಸಿದ್ದ ಸ್ವಾತಿ ಮಲಿವಾಲ್
PC: X
ಹೊಸದಿಲ್ಲಿ: ಸಂಸದೆ ಸ್ವಾತಿ ಮಲಿವಾಲ್ ಮಾಡಿರುವ ಆರೋಪಗಳೆಲ್ಲವೂ ಸುಳ್ಳು. ಸಂಚುಕೋರರೇ ಸಂತ್ರಸ್ತರಂತೆ ಸೋಗು ಹಾಕಿದ್ದಾರೆ ಎಂದು ಧ್ರುವ್ ರಾಥಿ ಪ್ರತಿಕ್ರಿಯೆ ನೀಡಿದ್ದಾರೆ.
ಖ್ಯಾತ ಯುಟ್ಯೂಬರ್ ಧ್ರುವ್ ರಾಥಿ ತಮ್ಮ ಮೇಲಿನ ಹಲ್ಲೆ ಪ್ರಕರಣ ಕುರಿತಂತೆ ವೀಡಿಯೋ ಪೋಸ್ಟ್ ಮಾಡಿದ ನಂತರ ತಮಗೆ ಅತ್ಯಾಚಾರ ಮತ್ತು ಕೊಲೆ ಬೆದರಿಕೆಗಳು ಬರುತ್ತಿವೆ ಎಂದು ಆಪ್ ರಾಜ್ಯಸಭಾ ಸಂಸದೆ ಸ್ವಾತಿ ಮಲಿವಾಲ್ ದೂರಿದ್ದರು.
ದಿಲ್ಲಿ ಸಿಎಂ ಅರವಿಂದ್ ಕೇಜ್ರಿವಾಲ್ ಅವರ ನಿವಾಸದಲ್ಲಿ ಅವರ ಆಪ್ತ ಸಹಾಯಕ ಬಿಭವ್ ಕುಮಾರ್ ತಮ್ಮ ಮೇಲೆ ಹಲ್ಲೆ ನಡೆಸಿದ್ದಾರೆಂದು ಸ್ವಾತಿ ಈ ಹಿಂದೆ ಆರೋಪಿಸಿದ್ದರು. ನಂತರ ಬಿಭವ್ ಬಂಧನವಾಗಿತ್ತು.
ಪ್ರಕರಣದ ಕುರಿತು ಎಕ್ಸ್ನಲ್ಲಿ ಪೋಸ್ಟ್ ಮಾಡಿದ ಧ್ರುವ್ ರಾಥಿ ಯಾರನ್ನೂ ಹೆಸರಿಸದೆ, ತಮಗೆ ಕೆಟ್ಟ ಹೆಸರು ತರಲು ಯತ್ನಿಸಲಾಗುತ್ತಿದೆ ಹಾಗೂ ಸಂಚುಕೋರರು ಸಂತ್ರಸ್ತರೆಂಬ ಸೋಗು ಹಾಕಿದ್ದಾರೆ ಎಂದು ಪ್ರತಿಕ್ರಿಯಿಸಿದ್ದಾರೆ.
“ನನ್ನ ವಿರುದ್ಧ ಸುಳ್ಳು ಆರೋಪಗಳು, ಪ್ರತಿ ದಿನ ಕೊಲೆ ಬೆದರಿಕೆಗಳು, ಅಮಾನವೀಯ ನಿಂದನೆಗಳು ಮತ್ತು ಸಂಘಟಿತ ಅಪಪ್ರಚಾರ… ಇದಕ್ಕೆ ನಾನೀಗ ಒಗ್ಗಿ ಹೋಗಿದ್ದೇನೆ,” ಎಂದು ಧ್ರುವ್ ರಾಥಿ ಬರೆದಿದ್ದಾರೆ.
“ಇದರ ಹಿಂದೆ ಯಾರಿದ್ದಾರೆಂದು ಎಲ್ಲರಿಗೂ ತಿಳಿದಿದೆ. ಅವರು ನನ್ನ ಸದ್ದಡಗಿಸಲು ಬಯಸುತ್ತಿದ್ದಾರೆ. ಅದು ನಡೆಯದು, ಒಬ್ಬ ಧ್ರುವ್ ರಾಥಿಯ ಸದ್ದಡಗಿಸಿದರೆ, 1000 ಮಂದಿ ಎದ್ದೇಳುತ್ತಾರೆ, ಜೈ ಹಿಂದ್,” ಎಂದು ಧ್ರುವ್ ರಾಥಿ ಪೋಸ್ಟ್ ಮಾಡಿದ್ದಾರೆ.
ಆಮ್ ಆದ್ಮಿ ಪಾರ್ಟಿ ಮತ್ತು ಅದರ ಕಾರ್ಯಕರ್ತರು ತಮ್ಮ ಮಾನ ಹಾನಿಗೈಯ್ಯುವ ಅಭಿಯಾನ ನಡೆಸುತ್ತಿದ್ದಾರೆ ಎಂದು ಆರೋಪಿಸಿದ್ದ ಸ್ವಾತಿ, ಈ ವಿಚಾರ ಧ್ರುವ್ ರಾಥಿ ಅವರು ಏಕಪಕ್ಷೀಯ ವೀಡಿಯೋ ಪೋಸ್ಟ್ ಮಾಡಿದ ನಂತರ ಇನ್ನಷ್ಟು ಹೆಚ್ಚಾಗಿತ್ತು ಎಂದಿದ್ದಾರೆ.