ದಿಲ್ಲಿ ಬಗ್ಗೆ ಯೋಚಿಸಿ, ಮೈತ್ರಿಕೂಟದ ಕುರಿತು ಯೋಚಿಸಬೇಡಿ: ವಿಪಕ್ಷಗಳಿಗೆ ಅಮಿತ್ ಶಾ ಆಗ್ರಹ
ಹೊಸದಿಲ್ಲಿ: ಪ್ರತಿಪಕ್ಷಗಳು ದಿಲ್ಲಿಯ ಬಗ್ಗೆ ಕಾಳಜಿ ವಹಿಸಬೇಕೇ ಹೊರತು ಹೊಸದಾಗಿ ರಚಿಸಲಾದ INDIA ಒಕ್ಕೂಟದ ಬಗ್ಗೆ ಅಲ್ಲ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಗುರುವಾರ ಹೇಳಿದ್ದಾರೆ.
ದಿಲ್ಲಿಯಲ್ಲಿ ಆಡಳಿತ ನಡೆಸುತ್ತಿರುವ ಆಮ್ ಆದ್ಮಿಪಕ್ಷವನ್ನುಗುರಿಯಾಗಿಸಿ ಶಾ ಈ ಹೇಳಿಕೆ ನೀಡಿದ್ದಾರೆ.
ದೇಶದ ರಾಜಧಾನಿಯಲ್ಲಿ ಅಧಿಕಾರಶಾಹಿಗಳನ್ನು ಯಾರು ನಿಯಂತ್ರಿಸುತ್ತಾರೆ ಎಂಬ ಕುರಿತ ಸುಪ್ರೀಂ ಕೋರ್ಟ್ ಆದೇಶವನ್ನು ರದ್ದುಗೊಳಿಸುವ ಸರಕಾರದ ಮಸೂದೆಯನ್ನು ಅವರು ಸಮರ್ಥಿಸಿಕೊಂಡಿದ್ದಾರೆ.
"ಈ ಸುಗ್ರೀವಾಜ್ಞೆಯು ಸುಪ್ರೀಂ ಕೋರ್ಟ್ ನ ಆದೇಶವನ್ನು ಉಲ್ಲೇಖಿಸುತ್ತದೆ, ಇದು ರಾಷ್ಟ್ರೀಯ ರಾಜಧಾನಿ ದಿಲ್ಲಿ ಪ್ರದೇಶಕ್ಕೆ ಸಂಬಂಧಿಸಿದ ಯಾವುದೇ ವಿಷಯದ ಬಗ್ಗೆ ಕಾನೂನು ಮಾಡುವ ಹಕ್ಕು ಸಂಸತ್ತಿಗೆ ಇದೆ ಎಂದು ಹೇಳುತ್ತದೆ. ಸಂವಿಧಾನದಲ್ಲಿ ದಿಲ್ಲಿಗೆ ಕಾನೂನು ಮಾಡಲು ಕೇಂದ್ರಕ್ಕೆ ಅವಕಾಶ ನೀಡುವ ನಿಬಂಧನೆಗಳಿವೆ" ಎಂದು ಅವರು ಹೇಳಿದರು.
"ನೀವು ಮೈತ್ರಿ ಮಾಡಿಕೊಂಡಿದ್ದೀರಿ ಎಂಬ ಕಾರಣಕ್ಕೆ ದಿಲ್ಲಿಯಲ್ಲಿ ನಡೆಯುತ್ತಿರುವ ಎಲ್ಲಾ ಭ್ರಷ್ಟಾಚಾರವನ್ನು ಬೆಂಬಲಿಸಬೇಡಿ ಎಂದು ನಾನು ಪಕ್ಷಗಳಿಗೆ ಮನವಿ ಮಾಡುತ್ತೇನೆ. ಏಕೆಂದರೆ ಮೈತ್ರಿ ಹೊರತಾಗಿಯೂ ಪ್ರಧಾನಿ ಮೋದಿ ಅವರು ಪೂರ್ಣ ಬಹುಮತದೊಂದಿಗೆ ಚುನಾವಣೆಯಲ್ಲಿ ಗೆಲ್ಲುತ್ತಾರೆ" ಎಂದು ಶಾ ಹೇಳಿದ್ದಾರೆ