ಮೂರನೆಯ ಹಂತದ ಮತದಾನ: ಪಶ್ಚಿಮ ಬಂಗಾಳದಲ್ಲಿ ಮತ್ತೆ ಘರ್ಷಣೆ
PC : PTI
ಕೋಲ್ಕತ್ತಾ: ಇಂದು ದೇಶಾದ್ಯಂತ 93 ಲೋಕಸಭಾ ಕ್ಷೇತ್ರಗಳಿಗೆ ಮೂರನೆ ಹಂತದ ಮತದಾನ ಪ್ರಾರಂಭಗೊಂಡಿದ್ದು, 10 ರಾಜ್ಯಗಳಲ್ಲಿ ಶಾಂತಿಯುತ ಮತದಾನ ನಡೆಯುತ್ತಿದ್ದರೆ, ಪಶ್ಚಿಮ ಬಂಗಾಳದ ಅಲ್ಲಲ್ಲಿ ಹಿಂಸಾಚಾರದ ಘಟನೆಗಳು ನಡೆದಿವೆ ಎಂದು ವರದಿಯಾಗಿದೆ.
ಪಶ್ಚಿಮ ಬಂಗಾಳದ ಜಂಗಿಪುರ್ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಧನಂಜಯ್ ಘೋಷ್ ಹಾಗೂ ಸ್ಥಳೀಯ ಟಿಎಂಸಿ ಕಾರ್ಯಕರ್ತರೊಬ್ಬರ ನಡುವೆ ಮತಗಟ್ಟೆಯೊಂದರಲ್ಲಿ ವಾಗ್ವಾದ ನಡೆದು, ಘರ್ಷಣೆಗೆ ತಿರುಗಿತು ಎಂದು ವರದಿಯಾಗಿದೆ. ಘಟನೆಯ ಕುರಿತು ಪ್ರತಿಕ್ರಿಯಿಸಿರುವ ಟಿಎಂಸಿ, ಬಿಜೆಪಿ ಅಭ್ಯರ್ಥಿಯು ಮತದಾರರ ಮೇಲೆ ಪ್ರಭಾವ ಬೀರಲು ಯತ್ನಿಸುತ್ತಿದ್ದರು ಎಂದು ಆರೋಪಿಸಿದೆ.
ಉತ್ತರ ಮಾಲ್ಡಾ ಲೋಕಸಭಾ ಕ್ಷೇತ್ರದ ರತುವಾ ಮತಗಟ್ಟೆಯ ಬಳಿ ಅಪರಿಚಿತ ವ್ಯಕ್ತಿಗಳು ಕಚ್ಚಾ ಬಾಂಬ್ ಎಸೆದಿದ್ದಾರೆ. ಆದರೆ, ಈ ಘಟನೆಯಲ್ಲಿ ಯಾವುದೇ ಗಾಯಾಳುಗಳ ಕುರಿತು ವರದಿಯಾಗಿಲ್ಲ.
ಭಾರತೀಯ ಚುನಾವಣಾ ಆಯೋಗದ ದತ್ತಾಂಶದ ಪ್ರಕಾರ, ಒಟ್ಟು 12 ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಲ್ಲಿ ನಡೆಯುತ್ತಿರುವ ಮೂರನೆ ಹಂತದ ಚುನಾವಣೆಯಲ್ಲಿ ಮಧ್ಯಾಹ್ನ 1 ಗಂಟೆ ವೇಳೆಗೆ ಶೇ. 39.92ರಷ್ಟು ಮತದಾನವಾಗಿದೆ. ಪಶ್ಚಿಮ ಬಂಗಾಳದಲ್ಲಿ ಅತಿ ಹೆಚ್ಚು ಮತದಾನವಾಗಿದ್ದು, ಶೇ. 49.27ರಷ್ಟು ಮತದಾನ ದಾಖಲಾಗಿದೆ. ಮಹಾರಾಷ್ಟ್ರದಲ್ಲಿ ಅತಿ ಕಡಿಮೆ ಮತದಾನವಾಗಿದ್ದು, ಶೇ. 31.55ರಷ್ಟು ಮತದಾನ ದಾಖಲಾಗಿದೆ.