ತಿರುವನಂತಪುರ: ಹಲವಾರು ಹೋಟೆಲ್ ಗಳಿಗೆ ಬಾಂಬ್ ಬೆದರಿಕೆ

ಸಾಂದರ್ಭಿಕ ಚಿತ್ರ | PC : freepik.com
ತಿರುವನಂತಪುರ: ಕೇರಳದ ರಾಜಧಾನಿ ತಿರುವನಂತಪುರದ ಹಲವಾರು ಹೋಟೆಲ್ ಗಳಿಗೆ ಶನಿವಾರ ಇಮೇಲ್ ಮೂಲಕ ಬಾಂಬ್ ಬೆದರಿಕೆಗಳು ಬಂದಿವೆ. ಮಾಹಿತಿ ತಿಳಿದ ತಕ್ಷಣ ಬಾಂಬ್ ನಿಷ್ಕ್ರಿಯ ದಳ ಮತ್ತು ಶ್ವಾನದಳಗಳೊಂದಿಗೆ ಧಾವಿಸಿ ತಪಾಸಣೆ ನಡೆಸಿರುವ ಪೋಲಿಸರು ಹೆಚ್ಚಿನ ಭದ್ರತಾ ಕ್ರಮಗಳನ್ನು ಕೈಗೊಂಡಿದ್ದಾರೆ.
ಬಾಂಬ್ ಬೆದರಿಕೆಗಳನ್ನು ಸ್ವೀಕರಿಸಿದ್ದ ಎಲ್ಲ ಹೋಟೆಲ್ ಗಳಲ್ಲಿ ತಪಾಸಣೆಗಳನ್ನು ನಡೆಸಿದ್ದನ್ನು ಕಂಟೋನ್ಮೆಂಟ್ ಪೋಲಿಸ್ ಠಾಣೆಯ ಅಧಿಕಾರಿಯೋರ್ವರು ದೃಢಪಡಿಸಿದರು.
ತಪಾಸಣೆ ಸಂದರ್ಭ ಯಾವುದೇ ಶಂಕಾಸ್ಪದ ವಸ್ತು ದೊರಕಿಲ್ಲ,ಆದರೂ ಹೆಚ್ಚಿನ ನಿಗಾ ಮುಂದುವರಿದಿದೆ ಎಂದರು.
ಇಮೇಲ್ ಸಂದೇಶಗಳ ಮೂಲದ ಬಗ್ಗೆಯೂ ಪೋಲಿಸರು ತನಿಖೆ ನಡೆಸುತ್ತಿದ್ದಾರೆ. ತಿರುವನಂತಪುರದ ಹೃದಯಭಾಗದಲ್ಲಿರುವ ಹಿಲ್ಟನ್ ಹೋಟೆಲ್ ಸೇರಿದಂತೆ ವಿವಿಧ ಹೋಟೆಲ್ ಗಳಲ್ಲಿ ಸುಧಾರಿತ ಸ್ಫೋಟಕ ಸಾಧನ(ಐಇಡಿ)ಗಳು ಸ್ಫೋಟಿಸಲಿವೆ ಎಂದು ಈ ಇಮೇಲ್ ಗಳಲ್ಲಿ ಬೆದರಿಕೆಯೊಡ್ಡಲಾಗಿತ್ತು.
ಇತ್ತೀಚಿನ ತಿಂಗಳುಗಳಲ್ಲಿ ಕೇರಳದಾತ್ಯಂತ ವಿವಿಧ ಜಿಲ್ಲಾಧಿಕಾರಿಗಳ ಕಚೇರಿಗಳು,ಕಂದಾಯ ವಿಭಾಗಾಧಿಕಾರಿಗಳ ಕಚೇರಿಗಳಿಗೆ ಇಂತಹುದೇ ಬಾಂಬ್ ಬೆದರಿಕೆಗಳು ಬಂದಿದ್ದವು. ತೀರ ಇತ್ತೀಚಿಗೆ ಎ.22ರಂದು ಕೇರಳ ಉಚ್ಚ ನ್ಯಾಯಾಲಯಕ್ಕೂ ಇಂತಹ ಬೆದರಿಕೆ ಎದುರಾಗಿತ್ತು.
ಪೋಲಿಸರಿಂದ ಸಮಗ್ರ ತಪಾಸಣೆಗಳ ಬಳಿಕ ಇವೆಲ್ಲ ಹುಸಿ ಬೆದರಿಕೆ ಕರೆಗಳು ಎನ್ನುವುದು ಬೆಳಕಿಗೆ ಬಂದಿತ್ತು.