"ಇದು ಅಂತ್ಯವಿಲ್ಲದೆ ಮುಂದುವರಿಯಲು ಸಾಧ್ಯವಿಲ್ಲ": ಉಮರ್ ಖಾಲಿದ್, ಶಾರ್ಜೀಲ್ ಇಮಾಮ್ ಜಾಮೀನು ಅರ್ಜಿ ವಿಚಾರಣೆ ವೇಳೆ ದಿಲ್ಲಿ ಪೊಲೀಸರಿಗೆ ಹೈಕೋರ್ಟ್ ತರಾಟೆ

ಉಮರ್ ಖಾಲಿದ್ (Photo: PTI)
ಹೊಸದಿಲ್ಲಿ : 2020ರ ದಿಲ್ಲಿ ಗಲಭೆ ಪ್ರಕರಣಕ್ಕೆ ಸಂಬಂಧಿಸಿ ಶಾರ್ಜೀಲ್ ಇಮಾಮ್, ಉಮರ್ ಖಾಲಿದ್ ಮತ್ತು ಇತರರ ಜಾಮೀನು ಅರ್ಜಿ ವಿಚಾರಣೆ ಸಂದರ್ಭದಲ್ಲಿ ಪೊಲೀಸರನ್ನು ತರಾಟೆಗೆ ತೆಗೆದುಕೊಂಡ ದಿಲ್ಲಿ ಹೈಕೋರ್ಟ್ ಜಾಮೀನು ಅರ್ಜಿಗಳ ವಿರುದ್ಧದ ವಾದಗಳನ್ನು ಕೊನೆಯಿಲ್ಲದೆ ಆಲಿಸಲು ಸಾಧ್ಯವಿಲ್ಲ ಎಂದು ಪ್ರಾಸಿಕ್ಯೂಷನ್ ಗೆ ತಿಳಿಸಿರುವ ಬಗ್ಗೆ Bar and Bench ವರದಿ ಮಾಡಿದೆ.
ನ್ಯಾಯಮೂರ್ತಿಗಳಾದ ನವೀನ್ ಚಾವ್ಲಾ ಮತ್ತು ಶಾಲಿಂದರ್ ಕೌರ್ ಅವರ ಪೀಠವು, ಹಿಂಸಾಚಾರದ ಹಿಂದಿನ ಪಿತೂರಿಯಲ್ಲಿ ಆರೋಪಿಗಳ ಪಾತ್ರವನ್ನು ಸಾಬೀತುಪಡಿಸುವಂತೆ ಪ್ರಾಸಿಕ್ಯೂಷನ್ ಗೆ ಹೇಳಿದೆ.
2020ರ ಈಶಾನ್ಯ ದಿಲ್ಲಿ ಗಲಭೆ ಯುಎಪಿಎ ಪ್ರಕರಣಕ್ಕೆ ಸಂಬಂಧಿಸಿದಂತೆ ಶಾರ್ಜೀಲ್ ಇಮಾಮ್, ಉಮರ್ ಖಾಲಿದ್ ಮತ್ತು ಇತರ ಆರೋಪಿಗಳು ಜಾಮೀನು ಅರ್ಜಿಯನ್ನು ಸಲ್ಲಿಸಿದ್ದರು. ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ಅಮಿತ್ ಪ್ರಸಾದ್ ಅವರು ಜಾಮೀನಿಗೆ ವಿರೋಧ ವ್ಯಕ್ತಪಡಿಸಿದ್ದರು.
ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ಒಂದು ಗಂಟೆಗೂ ಹೆಚ್ಚು ಕಾಲ ಜಾಮೀನು ವಿರೋಧಿಸಿ ವಾದವನ್ನು ಮುಂದಿಟ್ಟಾಗ ನ್ಯಾಯಮೂರ್ತಿ ನವೀನ್ ಚಾವ್ಲಾ ಮತ್ತು ನ್ಯಾಯಮೂರ್ತಿ ಶಾಲಿಂದರ್ ಕೌರ್ ಅವರ ಪೀಠ ಮಧ್ಯಪ್ರವೇಶಿಸಿ ಎಷ್ಟು ದಿನ ಈ ವಾದ ಮುಂದುವರಿಯುತ್ತದೆ? ಇದು ಕೊನೆಗೊಳ್ಳಬೇಕಿದೆ. ಇದು ಹೀಗೆ ಮುಂದುವರೆಯಲು ಸಾಧ್ಯವಿಲ್ಲ. ನಾವು ನಿಮಗೆ ಅಂತ್ಯವಿಲ್ಲದ ಸಮಯವನ್ನು ನೀಡಲು ಸಾಧ್ಯವಿಲ್ಲ ಎಂದು ಪೀಠವು ಪಬ್ಲಿಕ್ ಪ್ರಾಸಿಕ್ಯೂಟರ್ ಗೆ ಹೇಳಿದೆ.