ಈ ಬಾರಿ 73 ಮಹಿಳೆಯರು ಲೋಕಸಭೆಗೆ ಆಯ್ಕೆ
ಸಾಂದರ್ಭಿಕ ಚಿತ್ರ
ಹೊಸದಿಲ್ಲಿ : ಇತ್ತೀಚೆಗೆ ಚುನಾವಣೆ ನಡೆದಿರುವ 18ನೇ ಲೋಕಸಭೆಗೆ 13.44 ಶೇಕಡ ಮಹಿಳಾ ಸಂಸದರು ಆಯ್ಕೆಯಾಗಿದ್ದಾರೆ. ಜೂನ್ 4ರಂದು ಘೋಷಣೆಯಾಗಿರುವ ಫಲಿತಾಂಶದ ಪ್ರಕಾರ, 18ನೇ ಲೋಕಸಭೆಗೆ ಒಟ್ಟು 73 ಮಹಿಳೆಯರು ಆಯ್ಕೆಯಾಗಿದ್ದಾರೆ. ಈ ಪೈಕಿ ಪಶ್ಚಿಮ ಬಂಗಾಳವು ಗರಿಷ್ಠ, ಅಂದರೆ 11 ಮಹಿಳಾ ಸಂಸದರನ್ನು ಲೋಕಸಭೆಗೆ ಕಳುಹಿಸಿದೆ. 2019ರಲ್ಲಿ, 78 ಮಹಿಳಾ ಸಂಸದರು ಸಂಸತ್ನ ಕೆಳಮನೆಗೆ ಆಯ್ಕೆಯಾಗಿದ್ದರು.
ಈ ಚುನಾವಣೆಯಲ್ಲಿ ಸ್ಪರ್ಧಿಸಲು 797 ಮಹಿಳೆಯರು ನಾಮಪತ್ರಗಳನ್ನು ಸಲ್ಲಿಸಿದ್ದರು. ಬಿಜೆಪಿಯು 69 ಮಹಿಳಾ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದರೆ, ಕಾಂಗ್ರೆಸ್ 41 ಮಹಿಳಾ ಅಭ್ಯರ್ಥಿಗಳಿಗೆ ಟಿಕೆಟ್ ನೀಡಿತ್ತು.
ಮಹಿಳಾ ಮೀಸಲಾತಿ ಮಸೂದೆ ಅಥವಾ ನಾರಿ ಶಕ್ತಿ ವಂದನಾ ಅಧಿನಿಯಮವು ನೂತನ ಸಂಸತ್ ಕಟ್ಟಡದಲ್ಲಿ 2023 ಸೆಪ್ಟಂಬರ್ 21ರಂದು ಅಂಗೀಕಾರಗೊಂಡ ಬಳಿಕ ನಡೆದ ಮೊದಲ ಲೋಕಸಭಾ ಚುನಾವಣೆ ಇದಾಗಿದೆ. ಈ ಮಸೂದೆಯು ಲೋಕಸಭೆ ಮತ್ತು ರಾಜ್ಯ ವಿಧಾನಸಭೆಗಳಲ್ಲಿ ಮಹಿಳೆಯರಿಗೆ ಮೂರನೇ ಒಂದು ಸ್ಥಾನಗಳನ್ನು ಮೀಸಲಿಡುವ ಗುರಿಯನ್ನು ಹೊಂದಿದೆ. ಆದರೆ, ಅದು ಮಸೂದೆ ಜಾರಿಗೊಂಡ ಬಳಿಕ ನಡೆಯುವ ಮೊದಲ ಜನಗಣತಿಯ ಆಧಾರದಲ್ಲಿ ಕ್ಷೇತ್ರ ಮರುವಿಂಗಡಣೆ ಕಾರ್ಯ ಮುಗಿದ ಬಳಿಕ ಜಾರಿಗೆ ಬರುತ್ತದೆ.
ಈ ಬಾರಿ ಬಿಜೆಪಿಯಿಂದ 30 ಮಹಿಳೆಯರು ಲೋಕಸಭೆಗೆ ಪ್ರವೇಶಿಸಿದ್ದಾರೆ. ಕಾಂಗ್ರೆಸ್ನಿಂದ 14, ತೃಣಮೂಲ ಕಾಂಗ್ರೆಸ್ನಿಂದ 11, ಸಮಾಜವಾದಿ ಪಕ್ಷದಿಂದ ನಾಲ್ಕು, ಡಿಎಮ್ಕೆಯಿಂದ ಮೂರು, ಜೆಡಿಯುನಿಂದ ಇಬ್ಬರು ಮತ್ತು ಎಲ್ಜೆಪಿ (ಆರ್)ನಿಂದ ಇಬ್ಬರು ಲೋಕಸಭೆಗೆ ಆಯ್ಕೆಯಾಗಿದ್ದಾರೆ.
ಈ ಬಾರಿ ಆಯ್ಕೆಯಾಗಿರುವ ಪ್ರಮುಖ ಮಹಿಳಾ ಸಂಸದರೆಂದರೆ, ಬಿಜೆಪಿಯ ಹೇಮಾ ಮಾಲಿನಿ, ಟಿಎಮ್ಸಿಯ ಮಹುವಾ ಮೊಯಿತ್ರಾ, ಎನ್ಸಿಪಿಯ ಸುಪ್ರಿಯಾ ಸುಳೆ ಮತ್ತು ಸಮಾಜವಾದಿ ಪಕ್ಷದ ನಾಯಕಿ ಡಿಂಪಲ್ ಯಾದವ್. ಅವರೆಲ್ಲರೂ ತಮ್ಮ ಸ್ಥಾನಗಳನ್ನು ಉಳಿಸಿಕೊಂಡಿದ್ದಾರೆ. ಬಾಲಿವುಡ್ ನಟಿ ಕಂಗನಾ ರಣಾವತ್ ಮತ್ತು ಮಾಜಿ ಕೇಂದ್ರ ಸಚಿವ ಲಾಲು ಪ್ರಸಾದ್ ಯಾದವ್ರ ಮಗಳು ಮಿಸಾ ಭಾರತಿ ಈ ಬಾರಿ ಹೊಸದಾಗಿ ಲೋಕಸಭೆಗೆ ಆಯ್ಕೆಯಾಗಿದ್ದಾರೆ.