ಸಂಸದರ ರಕ್ಷಣೆಯ ಹೊಣೆ ಹೊತ್ತವರು ತಮ್ಮ ಸಾಂವಿಧಾನಿಕ ಕರ್ತವ್ಯಗಳಲ್ಲಿ ವಿಫಲಗೊಂಡಿದ್ದಾರೆ : ಮಲ್ಲಿಕಾರ್ಜುನ ಖರ್ಗೆ
ಮಲ್ಲಿಕಾರ್ಜುನ ಖರ್ಗೆ | Photo: ANI
ಹೊಸದಿಲ್ಲಿ: ಪಕ್ಷವು ಇತ್ತೀಚಿನ ವಿಧಾನಸಭಾ ಚುನಾವಣೆಗಳಿಂದ ಅಮೂಲ್ಯ ಪಾಠಗಳನ್ನು ಕಲಿತಿದೆ ಎಂದು ಗುರುವಾರ ಇಲ್ಲಿ ಹೇಳಿದ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರು, ಈಗ 2024ರ ಲೋಕಸಭಾ ಚುನಾವಣೆಯ ಮೇಲೆ ಗಮನವನ್ನು ಕೇಂದ್ರೀಕರಿಸುವಂತೆ ಪಕ್ಷದ ಕಾರ್ಯಕರ್ತರನ್ನು ಆಗ್ರಹಿಸಿದರು.
ಇಲ್ಲಿಯ ಎಐಸಿಸಿ ಕೇಂದ್ರ ಕಚೇರಿಯಲ್ಲಿ ಕಾಂಗ್ರೆಸ್ ಕಾರ್ಯಕಾರಿ ಸಮಿತಿ (ಸಿಡಬ್ಲ್ಯುಸಿ)ಯ ಮಹತ್ವದ ಸಭೆಯಲ್ಲಿ ಪಕ್ಷದ ನಾಯಕರನ್ನುದ್ದೇಶಿಸಿ ಮಾತನಾಡಿದ ಅವರು,ಮತ್ತದೇ ತಪ್ಪುಗಳನ್ನು ಮಾಡದಿರಲು ಕಾಂಗ್ರೆಸ್ ಬದ್ಧವಾಗಿದೆ ಎಂದರು.
ಹಲವಾರು ಕಾಂಗ್ರೆಸ್ ನಾಯಕರು ರಾಹುಲ್ ಗಾಂಧಿಯವರು ಪೂರ್ವದಿಂದ ಪಶ್ಚಿಮಕ್ಕೆ ಇನ್ನೊಂದು ಭಾರತ ಜೋಡೊ ಯಾತ್ರೆಯನ್ನು ನಡೆಸಬೇಕು ಎಂದು ಬಯಸಿದ್ದಾರೆ, ಆದರೆ ಅಂತಿಮ ನಿರ್ಧಾರವು ರಾಹುಲ್ ಮತ್ತು ಸಿಡಬ್ಲ್ಯುಸಿಗೆ ಬಿಟ್ಟ ವಿಷಯವಾಗಿದೆ ಎಂದು ಖರ್ಗೆ ಹೇಳಿದರು.
ಇದು ಕಾಂಗ್ರೆಸ್ ಇತ್ತೀಚಿನ ಚುನಾವಣಾ ಸೋಲಿನ ಬಳಿಕ ಮೊದಲ ಸಿಡಬ್ಲ್ಯುಸಿ ಸಭೆಯಾಗಿದೆ. ಪಂಚರಾಜ್ಯ ವಿಧಾನಸಭಾ ಚುನಾವಣೆಗಳಲ್ಲಿ ತೆಲಂಗಾಣದಲ್ಲಿ ಮಾತ್ರ ಗೆಲುವನ್ನು ಸಾಧಿಸಲು ಕಾಂಗ್ರೆಸ್ ಗೆ ಸಾಧ್ಯವಾಗಿತ್ತು.
ತೆಲಂಗಾಣವನ್ನು ಹೊರತುಪಡಿಸಿ ಪಂಚರಾಜ್ಯ ಚುನಾವಣೆಗಳ ಫಲಿತಾಂಶಗಳು ನಿರಾಶಾದಾಯಕವಾಗಿದ್ದವು ಎಂದು ಹೇಳಿದ ಖರ್ಗೆ, ಪಕ್ಷವು ಫಲಿತಾಂಶಗಳ ಪ್ರಾಥಮಿಕ ವಿಶ್ಲೇಷಣೆಯನ್ನು ನಡೆಸಿದೆ ಮತ್ತು ತನ್ನ ಸೋಲಿಗೆ ಕಾರಣಗಳನ್ನು ಗುರುತಿಸಿದೆ ಎಂದರು.
‘ಫಲಿತಾಂಶಗಳು ಏನೇ ಆಗಿದ್ದರೂ ಈ ರಾಜ್ಯಗಳಲ್ಲಿ ಮತ ಗಳಿಕೆ ಪ್ರಮಾಣದಂತಹ ಕೆಲವು ಸಕಾರಾತ್ಮಕ ಸೂಚಕಗಳಿವೆ. ಇದು ಸೂಕ್ತ ಗಮನವನ್ನು ಹರಿಸಿದರೆ ನಾವು ಖಂಡಿತವಾಗಿಯೂ ಚಿತ್ರಣವನ್ನು ಬದಲಿಸುತ್ತೇವೆ ಎಂಬ ಖಚಿತ ಭರವಸೆಯನ್ನು ನಮಗೆ ನೀಡಿದೆ ’ ಎಂದರು.
‘ಲೋಕಸಭಾ ಚುನಾವಣೆಗಳು ಹೆಚ್ಚು ದೂರವಿಲ್ಲ, ಅದಕ್ಕಾಗಿ ನಮ್ಮ ಬಳಿ ಹೆಚ್ಚಿನ ಸಮಯವೂ ಉಳಿದಿಲ್ಲ. ಮುಂಬರುವ ಚುನಾವಣೆಗಳಿಗಾಗಿ ಅಗತ್ಯ ಕ್ರಮಗಳ ಮೇಲೆ ಗಮನವನ್ನು ಕೇಂದ್ರೀಕರಿಸುವಂತೆ ನಾನು ಪ್ರತಿಯೊಬ್ಬರನ್ನೂ ಆಗ್ರಹಿಸುತ್ತೇನೆ ’ ಎಂದು ಖರ್ಗೆ ನುಡಿದರು.
ಸಂಸತ್ತಿನಿಂದ ಪ್ರತಿಪಕ್ಷಗಳ ಸಂಸದರ ಅಮಾನತು ಕುರಿತಂತೆ ಖರ್ಗೆ,ಇದು ಸಂಸತ್ತನ್ನು ಆಡಳಿತ ಪಕ್ಷದ ವೇದಿಕೆಯನ್ನಾಗಿ ಪರಿವರ್ತಿಸಲು ಪಿತೂರಿಯ ಭಾಗವಾಗಿದೆ ಎಂದು ಆರೋಪಿಸಿದರು.
ಬಿಜೆಪಿಯು ಚರ್ಚೆಯೇ ಇಲ್ಲದೆ ಪ್ರಮುಖ ಮಸೂದೆಗಳನ್ನು ಅಂಗೀಕರಿಸುವ ಮೂಲಕ ಹೇಗೆ ಪ್ರಜಾಪ್ರಭುತ್ವವನ್ನು ಉಸಿರುಗಟ್ಟಿಸುತ್ತಿದೆ ಎನ್ನುವುದನ್ನು ಇಡೀ ದೇಶವೇ ನೋಡುತ್ತಿದೆ ಎಂದು ಹೇಳಿದ ಅವರು, ಬಿಜೆಪಿಯು ಚುನಾವಣಾ ಆಯೋಗದಂತಹ ಸಂಸ್ಥೆಗಳ ಮೇಲೆ ಹಿಡಿತ ಸಾಧಿಸಲು ಪ್ರಯತ್ನಿಸುತ್ತಿದೆ. ಸರಕಾರವು ಸಂವಿಧಾನ, ಸಂಸತ್ತು ಮತ್ತು ಪ್ರಜಾಪ್ರಭುತ್ವವನ್ನು ಅಪಾಯದಲ್ಲಿ ಸಿಲುಕಿಸಿದೆ ಎಂದು ಆರೋಪಿಸಿದರು.
‘ಪ್ರತಿಪಕ್ಷಗಳ ಸಂಸದರನ್ನು ರಕ್ಷಿಸುವ ಹೊಣೆಯನ್ನು ಹೊತ್ತಿರುವ ಸಾಂವಿಧಾನಿಕ ಹುದ್ದೆಗಳನ್ನು ಹೊಂದಿರುವವರು ಸ್ವತಃ ಪಕ್ಷ ರಾಜಕಾರಣದ ಭಾಗವಾಗುತ್ತಿರುವುದು ಮತ್ತು ಜಾತಿ,ಧರ್ಮ ಹಾಗೂ ಹುದ್ದೆಯನ್ನು ಗುರಾಣಿಯಾಗಿಸಿಕೊಂಡು ರಾಜಕೀಯವನ್ನು ಮಾಡುತ್ತಿರುವುದು ಅತ್ಯಂತ ದೊಡ್ಡ ಸವಾಲು ಆಗಿದೆ. ಅವರು ಸಂವಿಧಾನದಡಿ ತಮ್ಮ ಜವಾಬ್ದಾರಿಗಳನ್ನು ಪೂರೈಸುವಲ್ಲಿ ವಿಫಲರಾಗಿದ್ದರೆ. ಇಡೀ ದೇಶವೇ ಇದನ್ನು ನೋಡುತ್ತಿದೆ ’ ಎಂದು ಹೇಳುವ ಮೂಲಕ ಖರ್ಗೆ ವಿಪಕ್ಷ ಸಂಸದರ ಅಮಾನತು ಕುರಿತಂತೆ ಲೋಕಸಭಾ ಸ್ಪೀಕರ್ ಮತ್ತು ರಾಜ್ಯಸಭೆಯ ಸಭಾಪತಿ ವಿರುದ್ಧ ವಾಗ್ದಾಳಿ ನಡೆಸಿದರು.