ಜನರಿಂದ ತಿರಸ್ಕೃತಗೊಂಡವರು ಸಂಸತ್ತನ್ನು ನಿಯಂತ್ರಿಸಲು ಪ್ರಯತ್ನಿಸುತ್ತಿದ್ದಾರೆ: ಪ್ರಧಾನಿ ಮೋದಿ
ಪ್ರಧಾನಿ ನರೇಂದ್ರ ಮೋದಿ (Photo: PTI)
ಹೊಸದಿಲ್ಲಿ: ಸೋಮವಾರ ವಿರೋಧ ಪಕ್ಷಗಳ ವಿರುದ್ಧ ವಾಗ್ದಾಳಿ ನಡೆಸಿದ ಪ್ರಧಾನಿ ನರೇಂದ್ರ ಮೋದಿ, ಜನರಿಂದ 80—90 ಬಾರಿ ತಿರಸ್ಕೃತಗೊಂಡವರು ತಮ್ಮ ರಾಜಕೀಯ ಲಾಭಕ್ಕಾಗಿ ಗೂಂಡಾಗಿರಿ ನಡೆಸಿ, ಸಂಸತ್ತನ್ನು ನಿಯಂತ್ರಿಸಲು ಯತ್ನಿಸುತ್ತಿದ್ದಾರೆ ಎಂದು ಆರೋಪಿಸಿದರು.
ಸಂಸತ್ತಿನ ಚಳಿಗಾಲದ ಅಧಿವೇಶನ ಪ್ರಾರಂಭವಾಗುವುದಕ್ಕೂ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ಮೋದಿ, ಬೆರಳೆಣಿಕೆಯ ಮಂದಿ ತಮ್ಮ ಉದ್ದೇಶದಲ್ಲಿ ಸಫಲರಾಗಲಿಲ್ಲ. ಆದರೆ, ಅವರ ಕೃತ್ಯಗಳನ್ನು ಗಮನಿಸುತ್ತಿದ್ದ ಜನರು, ಅವರಿಗೆ ಸೂಕ್ತ ಸಮಯದಲ್ಲಿ ಶಿಕ್ಷೆ ನೀಡಿದರು ಎಂದು ಹೇಳಿದರು.
288 ಸದಸ್ಯ ಬಲದ ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಮಹಾಯುತಿ ಮೈತ್ರಿಕೂಟವು 235 ಸ್ಥಾನಗಳಲ್ಲಿ ಗೆಲುವು ಸಾಧಿಸಿ ಭಾರಿ ಬಹುಮತದೊಂದಿಗೆ ಅಧಿಕಾರಕ್ಕೆ ಮರಳಿರುವ ಬೆನ್ನಿಗೇ ಪ್ರಧಾನಿ ಮೋದಿಯಿಂದ ಈ ಹೇಳಿಕೆ ಹೊರ ಬಿದ್ದಿದೆ. ವಿರೋಧ ಪಕ್ಷಗಳ ಮೈತ್ರಿಕೂಟವಾದ ಮಹಾವಿಕಾಸ್ ಅಘಾಡಿ ಕೇವಲ 49 ಸ್ಥಾನಗಳಲ್ಲಿ ಮಾತ್ರ ಗೆಲುವು ಸಾಧಿಸುವ ಮೂಲಕ ತೀವ್ರ ಹಿನ್ನಡೆ ಅನುಭವಿಸಿದೆ.
“ಸಂಸತ್ತಿನಲ್ಲಿ ಆರೋಗ್ಯಕರ ಚರ್ಚೆ ನಡೆಯಬೇಕು. ದುರದೃಷ್ಟವಶಾತ್, ಕೆಲವು ವ್ಯಕ್ತಿಗಳು ಅಡಚಣೆ ಮತ್ತು ಗದ್ದಲದ ವಾತಾವರಣ ನಿರ್ಮಿಸುವ ಮೂಲಕ ತಮ್ಮ ವೈಯಕ್ತಿಕ ಲಾಭಕ್ಕಾಗಿ ಸಂಸತ್ತನ್ನು ನಿಯಂತ್ರಿಸಲು ಪ್ರಯತ್ನಿಸುತ್ತಿದ್ದಾರೆ” ಎಂದು ಮೋದಿ ದೂರಿದರು.
“ಅವರ ತಂತ್ರಗಳು ಕೊನೆಯಲ್ಲಿ ವಿಫಲವಾಗಲಿದ್ದರೂ, ಅವರ ವರ್ತನೆಗಳನ್ನು ಗಮನಿಸುತ್ತಿರುವ ಜನರು, ಸಮಯ ಬಂದಾಗ ಉತ್ತರ ನೀಡಲಿದ್ದಾರೆ” ಎಂದೂ ಅವರು ಎಚ್ಚರಿಸಿದರು.
ನಾನು ಪದೇ ಪದೇ ವಿರೋಧ ಪಕ್ಷಗಳ ಸಹೋದ್ಯೋಗಿಗಳಿಗೆ ಮನವಿ ಮಾಡುತ್ತಿದ್ದು, ಕೆಲವರು ಸಂಸತ್ತು ಸುಗಮವಾಗಿ ಕಾರ್ಯನಿರ್ವಹಿಸಬೇಕು ಎಂದು ಒಪ್ಪಿಕೊಂಡಿದ್ದಾರೆ ಎಂದು ಮೋದಿ ಹೇಳಿದರು.
“ಆದರೆ, ನಿರಂತರವಾಗಿ ಸಾರ್ವಜನಿಕರಿಂದ ತಿರಸ್ಕೃತಗೊಂಡಿರುವವರು ತಮ್ಮ ಸಹೋದ್ಯೋಗಿಗಳ ಮಾತುಗಳನ್ನು ನಿರ್ಲಕ್ಷಿಸುತ್ತಿದ್ದು, ಪ್ರಜಾತಂತ್ರದ ಭಾವನೆಯೂ ಆಗಿರುವ ಅವರ ಭಾವನೆಗಳಿಗೆ ಅಗೌರವ ತೋರುತ್ತಿದ್ದಾರೆ” ಎಂದು ಅವರು ಆಪಾದಿಸಿದರು.
ಸೋಮವಾರದಿಂದ ಸಂಸತ್ತಿನ ಚಳಿಗಾಲದ ಅಧಿವೇಶನ ಪ್ರಾರಂಭಗೊಂಡಿದ್ದು, ಡಿಸೆಂಬರ್ 20ರವರೆಗೂ ಮುಂದುವರಿಯಲಿದೆ.