ನವೆಂಬರ್ 25ರಂದು ಇಂಡಿಯಾ ಗೇಟ್ ಎದುರು ಸಾವಿರಾರು ಜನರಿಂದ ಸಂವಿಧಾನ ಪೀಠಿಕೆ ವಾಚನ
ಸಾಂದರ್ಭಿಕ ಚಿತ್ರ | PTI
ಹೊಸದಿಲ್ಲಿ: ಸಂವಿಧಾನದ ಬಗ್ಗೆ ಜಾಗೃತಿ ಮೂಡಿಸುವ ವಿಶೇಷ ಉಪಕ್ರಮದ ಭಾಗವಾಗಿ ನವೆಂಬರ್ 25ರಂದು 10,000ಕ್ಕೂ ಹೆಚ್ಚು ಯುವಕರು ರಾಷ್ಟ್ರ ರಾಜಧಾನಿಯಲ್ಲಿ ಹಮ್ಮಿಕೊಳ್ಳಲಾಗಿರುವ ಪಾದಯಾತ್ರೆಯಲ್ಲಿ ಭಾಗವಹಿಸಲಿದ್ದಾರೆ ಎಂದು ಶುಕ್ರವಾರ ಕೇಂದ್ರ ಕ್ರೀಡಾ ಸಚಿವ ಮನ್ಸುಖ್ ಮಾಂಡವಿಯಾ ತಿಳಿಸಿದ್ದಾರೆ.
ನವೆಂಬರ್ 26, 1949ರಲ್ಲಿ ಅಳವಡಿಸಿಕೊಳ್ಳಲಾಗಿದ್ದ ಭಾರತೀಯ ಸಂವಿಧಾನಕ್ಕೆ ಈ ವರ್ಷ 75 ವರ್ಷ ತುಂಬಲಿದೆ.
ಯುವಜನ ವ್ಯವಹಾರಗಳು ಮತ್ತು ಕ್ರೀಡಾ ಸಚಿವಾಲಯ ಆಯೋಜಿಸಿರುವ ಈ ಪಾದಯಾತ್ರೆಗೆ ‘ನಮ್ಮ ಸಂವಿಧಾನ, ನಮ್ಮ ಸ್ವಾಭಿಮಾನ ಎಂದು ಹೆಸರಿಸಲಾಗಿದ್ದು, ಈ ಪಾದಯಾತ್ರೆಯಲ್ಲಿ ಪಾಲ್ಗೊಳ್ಳಲಿರುವ ಸಾವಿರಾರು ಯುವಕರು ಇಂಡಿಯಾ ಗೇಟ್ ಬಳಿ ಸಂವಿಧಾನ ಪೀಠಿಕೆಯನ್ನು ವಾಚಿಸಲಿದ್ದಾರೆ. ಸಂವಿಧಾನದ ಮೂಲಭೂತ ಸಿದ್ಧಾಂತಗಳಲ್ಲಿ ಯುವಕರನ್ನು ತೊಡಗಿಸುವ ವಿಶಾಲ ಪ್ರಯತ್ನದ ಭಾಗವಾಗಿ ಇದನ್ನು ಹಮ್ಮಿಕೊಳ್ಳಲಾಗಿದೆ.
ಈ ಪಾದಯಾತ್ರೆಯಲ್ಲಿ ಪಾಲ್ಗೊಳ್ಳಲು 125ಕ್ಕೂ ಹೆಚ್ಚು ಶೈಕ್ಷಣಿಕ ಸಂಸ್ಥೆಗಳ 15-29 ವಯೋಮಾನದ 10,000ಕ್ಕೂ ಹೆಚ್ಚು ಯುವಕರು ‘MYBharat’ ಪೋರ್ಟಲ್ ನಲ್ಲಿ ನೋಂದಾಯಿಸಿಕೊಂಡಿದ್ದಾರೆ.
ಈ ಪಾದಯಾತ್ರೆಯು ಬೆಳಗ್ಗೆ 8.30ರ ವೇಳೆಗೆ ಮೇಜರ್ ಧ್ಯಾ ನ್ ಚಂದ್ ಕ್ರೀಡಾಂಗಣದಿಂದ ಪ್ರಾರಂಭಗೊಳ್ಳಲಿದ್ದು, ಗರ್ವಿ ಗಾಂಧಿ ಭವನ್, ಸುನೆಹ್ರಿ ಮಸ್ಜಿದ್ ಹಾಗೂ ಮಾನ್ ಸಿಂಗ್ ರಸ್ತೆ ಸೇರಿದಂತೆ ನಗರದ ಹಲವು ಪ್ರಮುಖ ಸ್ಥಳಗಳ ಮೂಲಕ ಹಾದು ಹೋಗಲಿದೆ. ನಂತರ ಬೆಳಗ್ಗೆ ಸುಮಾರು 11 ಗಂಟೆಯ ವೇಳೆಗೆ ಈ ಪಾದಯಾತ್ರೆಯು ಅದೇ ಕ್ರೀಡಾಂಗಣದಲ್ಲಿ ಸಮಾರೋಪಗೊಳ್ಳಲಿದೆ.