ಶಿರಚ್ಛೇದನ ಬೆದರಿಕೆ; ಉದಯನಿಧಿ ಸ್ಟಾಲಿನ್ ಚೆನ್ನೈ ನಿವಾಸಕ್ಕೆ ಬಿಗಿಭದ್ರತೆ
Photo: ANI
ಚೆನ್ನೈ: ಸನಾತನ ಧರ್ಮದ ಕುರಿತು ಡಿಎಂಕೆ ನಾಯಕ ಹಾಗೂ ತಮಿಳುನಾಡು ಸಚಿವ ಉದಯನಿಧಿ ಸ್ಟಾಲಿನ್ ಅವರ ಹೇಳಿಕೆಯಿಂದಾಗಿ ಸೃಷ್ಟಿಯಾಗಿರುವ ವಿವಾದವು ಅಯೋಧ್ಯೆಯ ಸಂತ ಪರಮಹಂಸ ಆಚಾರ್ಯರಿಂದ ಜೀವ ಬೆದರಿಕೆಯ ಬಳಿಕ ಇನ್ನಷ್ಟು ತೀವ್ರಗೊಂಡಿದೆ.
ಸನಾತನ ಧರ್ಮದ ವಿರುದ್ಧ ಟೀಕೆಗಾಗಿ ಸ್ಟಾಲಿನ್ ಅವರ ಶಿರಚ್ಛೇದನ ಮಾಡುವವರಿಗೆ 10 ಕೋ.ರೂ.ಗಳ ಬಹುಮಾನವನ್ನು ನೀಡುವುದಾಗಿ ಆಚಾರ್ಯ ಸೋಮವಾರ ಪ್ರಕಟಿಸಿದ್ದರು. ಈ ಹಿನ್ನೆಲೆಯಲ್ಲಿ ಚೆನ್ನೈನಲ್ಲಿರುವ ಉದಯನಿಧಿ ನಿವಾಸಕ್ಕೆ ಬಿಗುಭದ್ರತೆಯನ್ನು ಏರ್ಪಡಿಸಲಾಗಿದೆ.
‘ಸ್ಟಾಲಿನ್ ಶಿರಚ್ಛೇದನವನ್ನು ಮಾಡುವ ಮತ್ತು ಅವರ ತಲೆಯನ್ನು ನನಗೆ ತಂದೊಪ್ಪಿಸುವ ಯಾರಿಗೇ ಆದರೂ 10 ಕೋ.ರೂ.ಗಳ ನಗದು ಬಹುಮಾನವನ್ನು ನೀಡುತ್ತೇನೆ. ಸ್ಟಾಲಿನ್ ರನ್ನು ಕೊಲ್ಲಲು ಯಾರೂ ಧೈರ್ಯ ಮಾಡದಿದ್ದರೆ ನಾನೇ ಅವರನ್ನು ಹುಡುಕಿ ಕೊಲ್ಲುತ್ತೇನೆ ’ ಎಂದು ಅಯೋಧ್ಯೆಯ ತಪಸ್ವಿ ಛಾವನಿಯ ಮಹಂತ ಪರಮಹಂಸರು ಹೇಳಿದ್ದಾರೆ.
ಸನಾತನ ಧರ್ಮಕ್ಕೆ ಆದಿಯೂ ಇಲ್ಲ, ಅಂತ್ಯವೂ ಇಲ್ಲ. ಅದನ್ನು ಎಂದೂ ನಾಶಗೊಳಿಸಲಾಗಿಲ್ಲ ಮತ್ತು ಎಂದೂ ನಾಶಗೊಳಿಸಲು ಸಾಧ್ಯವಿಲ್ಲ. ಸನಾತನ ಧರ್ಮವನ್ನು ನಾಶಗೊಳಿಸಲು ಪ್ರಯತ್ನಿಸುವ ಯಾರೇ ಆದರೂ ಸ್ವತಃ ನಾಶಗೊಳ್ಳುತ್ತಾರೆ ಎಂದು ಎಚ್ಚರಿಕೆಯನ್ನೂ ಅವರು ನೀಡಿದ್ದರು.
ತನಗೆ ಜೀವ ಬೆದರಿಕೆಯನ್ನು ತಳ್ಳಿ ಹಾಕಿರುವ ಸ್ಟಾಲಿನ್, ತಾನು ತಮಿಳುನಾಡಿಗಾಗಿ ತನ್ನ ಜೀವವನ್ನೇ ಮುಡಿಪಾಗಿಟ್ಟಿದ್ದ ವ್ಯಕ್ತಿಯ ಮೊಮ್ಮಗನಾಗಿದ್ದೇನೆ ಮತ್ತು ಇಂತಹ ಬೆದರಿಕೆಗಳಿಗೆ ಸೊಪ್ಪು ಹಾಕುವುದಿಲ್ಲ ಎಂದು ಘೋಷಿಸಿದ್ದಾರೆ.
ಸ್ಥಳೀಯ ಮಾಧ್ಯಮಗಳ ವರದಿಗಳ ಪ್ರಕಾರ ಸಾಮಾನ್ಯವಾಗಿ ಚೆನ್ನೈನ ಗ್ರೀನ್ವೇದಲ್ಲಿರುವ ಸಚಿವ ಸ್ಟಾಲಿನ್ ನಿವಾಸದ ಹೊರಗೆ ಓರ್ವ ಪೊಲೀಸ್ ಸಿಬ್ಬಂದಿ ಮಾತ್ರ ಕರ್ತವ್ಯದಲ್ಲಿರುತ್ತಿದ್ದರೆ, ಈಗ 10ಕ್ಕೂ ಹೆಚ್ಚು ಪೊಲೀಸರನ್ನು ನಿಯೋಜಿಸಲಾಗಿದೆ. ಹಿಂದೂ ಸಂಘಟನೆಗಳು ಸಚಿವರ ನಿವಾಸಕ್ಕೆ ಮುತ್ತಿಗೆ ಹಾಕಲು ಪ್ರಯತ್ನಿಸಬಹುದು ಎಂಬ ವರದಿಗಳ ನಡುವೆ ಈ ಬೆಳವಣಿಗೆ ನಡೆದಿದೆ.